ADVERTISEMENT

21ರಂದು ವೆಬ್‌ಪೋರ್ಟಲ್‌ ಅನಾವರಣ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 8:33 IST
Last Updated 9 ಜನವರಿ 2017, 8:33 IST

ಮಡಿಕೇರಿ: ಕ್ರೀಡಾ ಕ್ಷೇತ್ರದಲ್ಲಿ ಸ್ವಚ್ಛ ಹಾಗೂ ಪಾರದರ್ಶಕ ಆಡಳಿತಕ್ಕೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ ಎಂದು ಕೇಂದ್ರದ ಯುವಜನ ಹಾಗೂ ಕ್ರೀಡಾ ಸಚಿವ ವಿಜಯ್‌ ಗೋಯಲ್‌ ಹೇಳಿದರು.

ಕೊಡಗು ಜಿಲ್ಲೆ ವಿರಾಜಪೇಟ ತಾಲ್ಲೂಕಿನ ಗೋಣಿಕೊಪ್ಪಲು ಸಮೀಪ ಸ್ಪೋರ್ಟ್ಸ್‌್ ಅಥಾರಿಟಿ ಆಫ್‌ ಇಂಡಿಯಾ, ಅಶ್ವಿನಿ ಸ್ಪೋರ್ಟ್‌್ ಫೌಂಡೇಶನ್‌ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ₹ 9 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಥ್ಲೆಟಿಕ್‌ ಸೆಂಟರ್‌ ಅನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುತ್ತಿಲ್ಲ ಎಂಬ ಆರೋಪವಿತ್ತು. ಆದರೆ, ಪ್ರಧಾನಿ ಮೋದಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಹೆಚ್ಚಿನ ಅನುದಾನ ನೀಡುತ್ತಿದ್ದಾರೆ. ಪ್ರಶಸ್ತಿ ಗೆದ್ದುಬಂದ ಬಳಿಕ ಕೆಲವರಿಗೆ ಮಾತ್ರ ನಗದು ಘೋಷಿಸುವ ಬದಲಿಗೆ ಎಲ್ಲರಿಗೂ ಪ್ರಶಸ್ತಿ ಸಿಗುವ ವ್ಯವಸ್ಥೆ ಜಾರಿಗೊಳ್ಳಬೇಕು. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಇದೇ 21ರಂದು ಟ್ಯಾಲೆಂಟ್‌ ಸರ್ಚ್‌ ವೆಬ್‌ ಪೋರ್ಟಲ್‌ ಅನಾವರಣ ಮಾಡಲಾಗುವುದು. ಆ ಗ್ರಾಮೀಣ ಪ್ರತಿಭೆಗಳು ಹೊರಬರಲಿದ್ದಾರೆ. ಪ್ರತಿಭಾನ್ವಿತರಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು.

ವಿದೇಶದಲ್ಲಿ ಆರೋಗ್ಯ ಮತ್ತು ಕ್ರೀಡಾ ಖಾತೆ ಒಟ್ಟಿಗೆ ಇರಲಿದೆ. ಆದರೆ, ಭಾರತದಲ್ಲಿ ಮಾತ್ರ ಯುವಜನ ಸೇವೆಯೊಂದಿಗೆ ಕ್ರೀಡಾ ಇಲಾಖೆ ಸೇರಿಸಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಕಠಿಣ ಪರಿಶ್ರಮವಿದ್ದರೆ ಮಾತ್ರ ಅಶ್ವಿನಿ ನಾಚಪ್ಪ, ಪಿ.ವಿ. ಸಿಂಧು ಹಾಗೂ ಸಾಕ್ಷಿ ಮಲ್ಲಿಕ್‌ ಅವರಂತೆ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು. 

ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಡಗು ಸೇರಿದಂತೆ ರಾಜ್ಯ ಸರ್ಕಾರದಿಂದ ಯಾವುದೇ ಪ್ರಸ್ತಾವಗಳು ಬಂದರೂ ಇದಕ್ಕೆ ಅನುದಾನ ನೀಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಯುವ ಸಬಲೀಕರಣ ಹಾಗೂ ಹಾಗೂ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಮಾತನಾಡಿ, ಅಗತ್ಯವಿರುವ ಜಿಲ್ಲೆಗಳಿಗೆ ಕಬಡ್ಡಿ ಮ್ಯಾಟ್‌್ ನೀಡಲಾಗುತ್ತಿದೆ. ಅಧಿಕಾರಿಗಳಿಗೆ ಕ್ರೀಡಾ ಜ್ಞಾನದ ಕೊರತೆಯಿದೆ. ಇನ್ನು ಮುಂದೆ ಪಿಚ್‌ ತಯಾರಿ ವೇಳೆ ಮಾಜಿ ಆಟಗಾರರೇ ಪರೀಕ್ಷೆ ನಡೆಸಲಿದ್ದಾರೆ. ಇದರಿಂದ ಗುಣಮಟ್ಟ ಹಾಗೂ ದೀರ್ಘಕಾಲಿಕ ಬಾಳಿಕೆ ಬರುವ ಪಿಚ್‌ಗಳು ತಯಾರಿಸಲಾಗುವುದು ಎಂದು ಹೇಳಿದರು.

ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹೆಚ್ಚು ಅನುದಾನ ನೀಡಲಾಗುತ್ತಿದೆ, ಕ್ರೀಡಾ ಕ್ಷೇತ್ರಕ್ಕೆ ಅನುದಾನ ಕಡಿಮೆಯಿದೆ. ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಕೊಟ್ಟರೆ ಆಸ್ಪತ್ರೆಗೆ ತೆರಳುವವರ ಸಂಖ್ಯೆ ಕಡಿಮೆಯಾಗಲಿದೆ. ಸರ್ಕಾರಕ್ಕಿಂತ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ. ಅಶ್ವಿನ ನಾಚಪ್ಪ ಅವರು ಶಿಕ್ಷಣದೊಂದಿಗೆ ಕ್ರೀಡಾ ವಿಭಾಗಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೊಡಗು ಚಿಕ್ಕ ಜಿಲ್ಲೆಯಾದರೂ ಕ್ರೀಡಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡುತ್ತಿದೆ. ಆದರೆ, ಮೂಲಸೌಕರ್ಯಗಳ ಕೊರತೆಯಿದೆ. ಕೂಡಿಗೆಯಲ್ಲಿ ಸೈನಿಕ ಶಾಲೆ ಬಿಟ್ಟರೆ ಬೇರೆಲ್ಲೂ ಕ್ರೀಡಾ ಚಟುವಟಿಕೆಗೆ ಮಹತ್ವವಿಲ್ಲ. ಹಾಕಿಗೆ ನಾಲ್ಕು ಟರ್ಫ್‌ ಅಂಕಣಗಳ ಅಗತ್ಯವಿದೆ. ಇದನ್ನು ಕೂಡಲೇ ಮಂಜೂರು ಮಾಡಿಕೊಡಬೇಕು ಎಂದು ಕೋರಿದರು.

ಅಶ್ವಿನಿ ಅಥ್ಲೆಟಿಕ್‌ ಫೌಂಡೇಶನ್‌ ಅಶ್ವಿನಿ ನಾಚಪ್ಪ ಮಾತನಾಡಿ, ಇದೇ ವರ್ಷ ಬೆಂಗಳೂರಿನ ಕ್ರೀಡಾಪಟುಗಳ ಆಯ್ಕೆ ನಡೆಯಲಿದೆ. ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತರನ್ನು ಆಯ್ಕೆ ಮಾಡಿ ಅವರಿಗೆ ಈ ಶಾಲೆಯಲ್ಲಿ ಶಿಕ್ಷಣದೊಂದಿಗೆ ಕ್ರೀಡಾ ತರಬೇತಿ ನೀಡಲಾಗುವುದು ಎಂದು ಹೇಳಿದರು.

ಶ್ಯಾಮಸುಂದರ್ ಸೇರಿದಂತೆ ಮೊದಲಾದವರು ಹಾಜರಿದ್ದರು. ಇದಕ್ಕೂ ಮೊದಲು ಸ್ಪೋರ್ಟ್‌ ಸೆಂಟರ್‌ ಉದ್ಘಾಟಿಸಿ ಸಿಂಥೆಟಿಕ್‌ ಟ್ರ್ಯಾಕ್‌ ವೀಕ್ಷಿಸಿದರು.

ರಾಜ್ಯ ಸಚಿವರ ನಿರೀಕ್ಷೆಯಲ್ಲಿ  ಕೇಂದ್ರ ಸಚಿವ!
ಮಡಿಕೇರಿ: ಕೇಂದ್ರ ಯುವಜನ ಹಾಗೂ ಕ್ರೀಡಾ ಸಚಿವರು ಸ್ಪೋರ್ಟ್‌ ಸೆಂಟರ್‌ ಉದ್ಘಾಟನೆಗೆ ನಿಗದಿತ ಸಮಯಕ್ಕೆ ಶಾಲಾ ಆವರಣದಲ್ಲಿ ಹಾಜರಿದ್ದರು. ಆದರೆ, ರಾಜ್ಯ ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಬರುವಾಗ 11.50 ಆಗಿತ್ತು. ಪ್ರಮೋದ್‌ ಆಗಮನಕ್ಕೆ ಕಾದು ಸೋತ ಸಚಿವರು ಉದ್ಘಾಟನಾ ಸ್ಥಳಕ್ಕೆ ಆಗಮಿಸಿದ್ದರು. 50 ನಿಮಿಷ ತಡವಾಗಿ ಸ್ಥಳಕ್ಕೆ ಪ್ರಮೋದ್ ಮಧ್ವರಾಜ್‌ ಬಂದರು.


ಕೇಂದ್ರ ಸಚಿವರ ವಿರುದ್ಧ ಟ್ವೀಟ್‌?
ಮಡಿಕೇರಿ:
ಕೇಂದ್ರ ಸಚಿವ ವಿಜಯ್‌ ಗೋಯಲ್‌ ವಿರುದ್ಧ ಸಂಸದ ಪ್ರತಾಪ್‌ ಸಿಂಹ ಅವರು ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಜ.7ರಂದು ರಾತ್ರಿ 9.28ಕ್ಕೆ ‘ನೀವು ನಾಳೆ ಕೊಡಗು ಜಿಲ್ಲೆಗೆ ಬರುತ್ತಿದ್ದೀರಾ? ಹಾಗಿದ್ದರೆ, ಸ್ಥಳೀಯ ಸಂಸದನಾದ ನನಗೆ ಸೌಜನ್ಯಕ್ಕಾದರೂ ಮಾಹಿತಿ ನೀಡ  ಬಹುದಿತ್ತಲ್ಲಾ’ ಎಂದು ಟ್ವೀಟ್‌ ಮಾಡಿ, ಅದನ್ನು ಪ್ರಧಾನಿ  ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರಿಗೆ ಶೇರ್‌ ಮಾಡಿದ್ದಾರೆ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.