ADVERTISEMENT

‘ಕೈ’ ಪಾಳಯದಲ್ಲಿ ಭಿನ್ನಮತ

ಕ್ಷೇತ್ರದಲ್ಲಿ ವಲಸಿಗರಿಗೆ ಮಣೆ: ಸ್ಥಳೀಯ ಮುಖಂಡರು ಸಿಡಿಮಿಡಿ

ಜೆ.ಆರ್.ಗಿರೀಶ್
Published 16 ಏಪ್ರಿಲ್ 2018, 9:43 IST
Last Updated 16 ಏಪ್ರಿಲ್ 2018, 9:43 IST

ಕೋಲಾರ: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಹುರಿಯಾಳುಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಕ್ಷೇತ್ರದ ‘ಕೈ’ ಪಾಳಯದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ವರಿಷ್ಠರು ವಲಸಿಗ ಅಭ್ಯರ್ಥಿಗೆ ಮಣೆ ಹಾಕಿರುವುದಕ್ಕೆ ಸ್ಥಳೀಯ ಮುಖಂಡರು ಸಿಡಿಮಿಡಿಯಾಗಿದ್ದಾರೆ.

ಪಕ್ಷದ ಸ್ಥಳೀಯ ಮುಖಂಡರಿಗೆ ಟಿಕೆಟ್‌ ಕೊಡಬೇಕೆಂಬ ಕೂಗು ಕಾಂಗ್ರೆಸ್‌ ಪಾಳಯದಲ್ಲಿ ಬಲವಾಗಿ ಕೇಳಿಬಂದಿತ್ತು. ಸ್ಥಳೀಯರಲ್ಲಿ ಯಾರಿಗೆ ಟಿಕೆಟ್‌ ನೀಡಿದರೂ ಗೆಲುವಿಗೆ ಶ್ರಮಿಸುವುದಾಗಿ ಮುಖಂಡರು ವರಿಷ್ಠರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದರು. ಇದಕ್ಕೆ ವ್ಯತಿರಿಕ್ತವಾಗಿ ವರಿಷ್ಠರು ಹೊರಗಿನ ಅಭ್ಯರ್ಥಿ ಸೈಯದ್‌ ಜಮೀರ್‌ ಪಾಷಾ ಅವರಿಗೆ ಕೃಪೆ ತೋರಿದ್ದು, ಸ್ಥಳೀಯ ಮುಖಂಡರ ಕಣ್ಣು ಕೆಂಪಾಗಿಸಿದೆ.

ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್‌.ಸುದರ್ಶನ್‌, ಜಿಲ್ಲಾ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಎಂ.ಎಲ್‌.ಅನಿಲ್‌ಕುಮಾರ್‌, ಮಾಜಿ ಸಚಿವ ನಿಸಾರ್‌ ಅಹಮ್ಮದ್‌ ಹೆಸರುಗಳು ಟಿಕೆಟ್‌ ಆಕಾಂಕ್ಷಿಗಳ ಪೈಕಿ ಮುಂಚೂಣಿಯಲ್ಲಿದ್ದವು. ಮತ್ತೊಂದೆಡೆ ನಿವೃತ್ತ ಐಎಎಸ್‌ ಅಧಿಕಾರಿ ಜಮೀರ್‌ ಪಾಷಾ, ಉದ್ಯಮಿ ಅಬ್ದುಲ್‌ ಸುಬಾನ್‌ ಕ್ಷೇತ್ರದಲ್ಲೇ ಮನೆ ಮಾಡಿ ಟಿಕೆಟ್‌ಗಾಗಿ ತೀವ್ರ ಕಸರತ್ತು ನಡೆಸಿದ್ದರು.

ADVERTISEMENT

ಕಾವೇರಿ ನೀರಾವರಿ ನಿಗಮದ ಮಾಜಿ ನಿರ್ದೇಶಕ ಚಿಕ್ಕರಾಯಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎಂ.ಟಿ.ಬಿ.ನಾಗರಾಜ್‌, ಅವರ ಮಗ ಬಿಬಿಎಂಪಿ ಸದಸ್ಯ ನಿತೀಶ್‌ ಪುರುಷೋತ್ತಮ್‌ ಹೆಸರುಗಳು ಸಹ ಕೇಳಿ ಬಂದಿದ್ದವು. ಜೆಡಿಎಸ್‌ ಮುಖಂಡ ಕೆ.ಶ್ರೀನಿವಾಸಗೌಡ ಅವರು ಕೊನೆ ಕ್ಷಣದಲ್ಲಿ ಹೊರೆ ಇಳಿಸಿ ‘ಕೈ’ ಹಿಡಿಯಲು ಮುಂದಾಗಿದ್ದರು.

ಕೆಪಿಸಿಸಿಯಿಂದ ಸುದರ್ಶನ್‌ ಮತ್ತು ಅನಿಲ್‌ಕುಮಾರ್‌ ಅವರ ಹೆಸರುಗಳನ್ನು ಪಕ್ಷದ ಚುನಾವಣಾ ಪರಿಶೀಲನಾ ಸಮಿತಿಗೆ (ಸ್ಕ್ರೀನಿಂಗ್‌ ಕಮಿಟಿ) ಕಳುಹಿಸಲಾಗಿತ್ತು. ಅಂತಿಮ ಕ್ಷಣದಲ್ಲಿ ಕೇಂದ್ರ ಚುನಾವಣಾ ಸಮಿತಿಯು ಈ ಇಬ್ಬರ ಬದಲಿಗೆ ರಾಮನಗರ ಜಿಲ್ಲೆ ಮಾಗಡಿಯ ಜಮೀರ್‌ ಪಾಷಾ ಅವರಿಗೆ ಮಣೆ ಹಾಕಿದೆ.

ರಾಜೀನಾಮೆ ರವಾನೆ: ಟಿಕೆಟ್‌ ಕೈತಪ್ಪಿದೆ ಎಂದು ದೆಹಲಿಯಿಂದ ಸುದರ್ಶನ್‌ ಅವರಿಗೆ ಸಂದೇಶ ರವಾನೆಯಾಗಿದ್ದು, ಇದರಿಂದ ಅಸಮಾಧಾನಗೊಂಡಿರುವ ಅವರು ಕೆಪಿಸಿಸಿ ಉಪಾಧ್ಯಕ್ಷಗಾದಿಗೆ ರಾಜೀನಾಮೆ ಕೊಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಅವರಿಗೆ ಶನಿವಾರ (ಏ.14) ರಾತ್ರಿಯೇ ಎಸ್‌ಎಂಎಸ್‌ ಮೂಲಕ ರಾಜೀನಾಮೆ ಸಂದೇಶ ಕಳುಹಿಸಿದ್ದಾರೆ. ಇದರ ಬೆನ್ನಲ್ಲೇ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಸೇರಿದಂತೆ ಹಲವು ಮುಖಂಡರು ಸುದರ್ಶನ್‌ ಅವರನ್ನು ಭೇಟಿಯಾಗಿ ಮನವೊಲಿಕೆ ಪ್ರಯತ್ನ ಆರಂಭಿಸಿದ್ದಾರೆ.

ಮುನಿಯಪ್ಪ ಒತ್ತಡ: ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಆರ್‌.ರಮೇಶ್‌ಕುಮಾರ್‌, ಕೃಷ್ಣ ಬೈರೇಗೌಡ, ಮಾಜಿ ಸಚಿವ ನಸೀರ್‌ ಅಹಮ್ಮದ್‌ ಅವರು ಜೆಡಿಎಸ್‌ ತೊರೆಯಲು ಮುಂದಾಗಿರುವ ಶ್ರೀನಿವಾಸಗೌಡರಿಗೆ ಟಿಕೆಟ್‌ ಕೊಡಿಸಲು ತೆರೆಮರೆಯ ಪ್ರಯತ್ನ ನಡೆಸಿದ್ದರು. ನಾಲ್ಕೈದು ದಿನದಿಂದ ದೆಹಲಿಯಲ್ಲೇ ಮೊಕ್ಕಾಂ ಹೂಡಿದ್ದ ಶ್ರೀನಿವಾಸಗೌಡರು ಸಂಸದ ಕೆ.ಎಚ್‌.ಮುನಿಯಪ್ಪರನ್ನು ಭೇಟಿಯಾಗಿ ಸಹಕಾರ ಕೋರಿದ್ದರು.

ಶ್ರೀನಿವಾಸಗೌಡರನ್ನು ಅಭ್ಯರ್ಥಿಯಾಗಿಸುವುದಕ್ಕೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದ ಮುನಿಯಪ್ಪ, ಅಲ್ಪಸಂಖ್ಯಾತ ಸಮುದಾಯದವರಿಗೆ ಅವಕಾಶ ನೀಡಬೇಕೆಂದು ದೆಹಲಿ ಮಟ್ಟದಲ್ಲಿ ವರಿಷ್ಠರ ಮೇಲೆ ಒತ್ತಡ ತಂದು ತಮ್ಮ ಆಪ್ತ ಜಮೀರ್‌ ಪಾಷಾಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ಚರ್ಚಿಸಿ ನಿರ್ಧಾರ

ನಾಲ್ಕು ದಶಕಗಳಿಂದ ಸ್ವಾಭಿಮಾನದ ರಾಜಕಾರಣ ಮಾಡಿದ್ದೇನೆ. ನನ್ನ ಶ್ರಮಕ್ಕೆ ಬೆಲೆ ಇಲ್ಲವೆಂದ ಮೇಲೆ ಪಕ್ಷದ ಹುದ್ದೆಯಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲ. ಹೀಗಾಗಿ ರಾಜೀನಾಮೆ ಸಲ್ಲಿಸಿದ್ದು, ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ – ವಿ.ಆರ್‌.ಸುದರ್ಶನ್‌, ಕೆಪಿಸಿಸಿ ಉಪಾಧ್ಯಕ್ಷ.

**

ಸುದರ್ಶನ್‌ ಅವರನ್ನು ಭೇಟಿಯಾಗಿ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿದ್ದೇವೆ. ವರಿಷ್ಠರು ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವ ಭರವಸೆ ನೀಡಿದ್ದಾರೆ – ಕೆ.ಚಂದ್ರಾರೆಡ್ಡಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.