ADVERTISEMENT

ಕೋಲಾರ: 20 ಮಂದಿ ಉಮೇದುವಾರಿಕೆ ಸಲ್ಲಿಕೆ

ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ನಾಲ್ಕನೇ ದಿನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2018, 9:48 IST
Last Updated 21 ಏಪ್ರಿಲ್ 2018, 9:48 IST

ಕೋಲಾರ: ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ನಾಲ್ಕನೇ ದಿನವಾದ ಶುಕ್ರವಾರ ಜಿಲ್ಲೆಯಲ್ಲಿ 20 ಮಂದಿ ಉಮೇದುವಾರಿಕೆ ಸಲ್ಲಿಸಿದರು.

ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಶುಭ ದಿನವೆಂದು ಭಾವಿಸಿ ಉಮೇದುವಾರಿಕೆ ಸಲ್ಲಿಕೆಗೆ ಹೆಚ್ಚಿನ ಆಸಕ್ತಿ ತೋರಿದರು. ಹಿಂದಿನ ಮೂರು ದಿನಗಳಿಗೆ ಹೋಲಿಸಿದರೆ ಶುಕ್ರವಾರ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾದವು.

ಹಲವು ಅಭ್ಯರ್ಥಿಗಳು ದೇವಸ್ಥಾನಗಳು ಹಾಗೂ ಪ್ರಾರ್ಥನಾ ಮಂದಿರಗಳಿಗೆ ಭೇಟಿ ಕೊಟ್ಟು ಬೆಂಬಲಿಗರೊಂದಿಗೆ ರೋಡ್‌ ಶೋ ನಡೆಸಿದರು. ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರು ಅಭ್ಯರ್ಥಿಗಳ ಪರವಾಗಿ ಘೋಷಣೆ ಕೂಗುತ್ತಾ ರೋಡ್‌ ಶೋನಲ್ಲಿ ಹೆಜ್ಜೆ ಹಾಕಿದರು.

ADVERTISEMENT

ಕೋಲಾರ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಸೈಯದ್ ಜಮೀರ್ ಪಾಷಾ, ಪಕ್ಷೇತರ ಅಭ್ಯರ್ಥಿಯಾಗಿ ಸುಧಾಕರ್‌ಗೌಡ, ಶಶಿಕುಮಾರ್ ನಾಮಪತ್ರ ಸಲ್ಲಿಸಿದರು. ಶ್ರೀನಿವಾಸಪುರ ಸಾಮಾನ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸತ್ಯ ಅರುಂಧತಿ, ಮಾಲೂರು ಸಾಮಾನ್ಯ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಕೆ.ಎಸ್.ಮಂಜುನಾಥ್‌ಗೌಡ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ವೈ.ನಂಜೇಗೌಡ ಉಮೇದುವಾರಿಕೆ ಸಲ್ಲಿಸಿದರು.

ಬಂಗಾರಪೇಟೆ ಮೀಸಲು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್‌ಬಾಬು, ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ನಾಮಪತ್ರ ಸಲ್ಲಿಸಿದರು. ಕೆಜಿಎಫ್ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಅಶ್ವಿನಿ ಸಂಪಂಗಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ರೂಪಾ ಶಶಿಧರ್‌, ಸಿಪಿಎಂನಿಂದ ಪಿ.ತಂಗರಾಜು, ಆರ್‌ಪಿಐನಿಂದ ಮಾಜಿ ಶಾಸಕ ಎಸ್‌.ರಾಜೇಂದ್ರನ್, ಕರ್ನಾಟಕ ಜನತಾ ಪಕ್ಷದಿಂದ (ಕೆಜೆಪಿ) ಗಗನಾ ಸುಖನ್ಯಾ, ಕೆಪಿಜೆಪಿಯಿಂದ ಪಿ.ನಂದಿನಿ ಮತ್ತು ವಳ್ಳಲ್‌ ಮುನಿಸ್ವಾಮಿ ನಾಮಪತ್ರ ಸಲ್ಲಿಸಿದರು.

ಮುಳಬಾಗಿಲು ಮೀಸಲು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ವಿ.ಶ್ರೀನಿವಾಸ್, ಜಿ.ಶ್ರೀನಿವಾಸ್, ಟಿ.ವಿ.ಬಾಲಕೃಷ್ಣ, ವಿ.ವೆಂಕಟೇಶಪ್ಪ, ಡಿ.ವೆಂಕಟರವಣಪ್ಪ ಉಮೇದುವಾರಿಕೆ ಸಲ್ಲಿಸಿದರು. ಚುನಾವಣಾಧಿಕಾರಿ ಕಚೇರಿಗಳ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ನಾಮಪತ್ರ ಸಲ್ಲಿಕೆಗೆ ಏ.24 ಕೊನೆಯ ದಿನವಾಗಿದ್ದು, ಸೋಮವಾರ (ಏ.23) ಹೆಚ್ಚಿನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.