ADVERTISEMENT

ಟೊಮೆಟೊ ಬೆಲೆ ಇಳಿಮುಖ

ಜೆ.ಆರ್.ಗಿರೀಶ್
Published 14 ಮೇ 2017, 5:18 IST
Last Updated 14 ಮೇ 2017, 5:18 IST
ಕೋಲಾರ ಎಪಿಎಂಸಿಯಲ್ಲಿ ಹಮಾಲಿಗಳು ಪೆಟ್ಟಿಗೆಗೆ ಟೊಮೆಟೊ ತುಂಬಿಸುತ್ತಿರುವುದು
ಕೋಲಾರ ಎಪಿಎಂಸಿಯಲ್ಲಿ ಹಮಾಲಿಗಳು ಪೆಟ್ಟಿಗೆಗೆ ಟೊಮೆಟೊ ತುಂಬಿಸುತ್ತಿರುವುದು   

ಕೋಲಾರ: ಜಿಲ್ಲೆಯ ಮಾರುಕಟ್ಟೆಯಲ್ಲಿ ಕಳೆದೊಂದು ವಾರದಿಂದ ಟೊಮೆಟೊ ಆವಕ ಹೆಚ್ಚಿದ್ದು, ಟೊಮೆಟೊ ಬೆಲೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಜಿಲ್ಲೆಯಲ್ಲಿ ಏಪ್ರಿಲ್‌ ಅಂತ್ಯದಿಂದ ಟೊಮೆಟೊ ಕೊಯ್ಲು  ಆರಂಭವಾಗಿದ್ದು, ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಲೆ ಇಳಿಕೆಯು ಆಘಾತ ನೀಡಿದೆ. ಹೊರ ರಾಜ್ಯ ಮತ್ತು ಜಿಲ್ಲೆಗಳಿಂದ ಸ್ಥಳೀಯ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬರುತ್ತಿದ್ದು, ಬೆಲೆ ಕುಸಿಯುತ್ತಾ ಸಾಗಿದೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯಲಾಗುತ್ತದೆ. ಜಿಲ್ಲೆಯ 13,000 ಹೆಕ್ಟೇರ್‌ ಭೂಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ಮೇ ತಿಂಗಳಿಂದ ಆಗಸ್ಟ್‌ ಅಂತ್ಯದವರೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಬೆಳೆ ಬರುತ್ತದೆ.

ಜಿಲ್ಲೆಯಿಂದ ರಾಜಸ್ತಾನ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್‌, ಮಹಾರಾಷ್ಟ್ರಕ್ಕೆ ಪ್ರತಿನಿತ್ಯ ಟೊಮೆಟೊ ಪೂರೈಕೆಯಾಗುತ್ತದೆ. ಅಲ್ಲದೇ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಚೀನಾ ದೇಶಕ್ಕೂ ಟೊಮೆಟೊ ರಫ್ತಾಗುತ್ತದೆ.

ADVERTISEMENT

ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ವ್ಯಾಪಾರಿಗಳು ಸ್ಥಳೀಯ ಮಾರುಕಟ್ಟೆಯಿಂದ ನಿತ್ಯ ಲೋಡ್‌ಗಟ್ಟಲೆ ಟೊಮೆಟೊ ಖರೀದಿಸಿಕೊಂಡು ಹೋಗುತ್ತಾರೆ. ಆದರೆ, ಆ ರಾಜ್ಯಗಳಲ್ಲೇ ಸದ್ಯ ಟೊಮೆಟೊ ಕೊಯ್ಲು ಆರಂಭವಾಗಿರುವ ಕಾರಣ ಅಲ್ಲಿನ ವ್ಯಾಪಾರಿಗಳು ಸ್ಥಳೀಯ ಮಾರುಕಟ್ಟೆಯತ್ತ ಸುಳಿಯುತ್ತಿಲ್ಲ.

ಮತ್ತೊಂದೆಡೆ ಆಂಧ್ರಪ್ರದೇಶದ ಕಡಪ, ಅನಂತಪುರ, ಪುಂಗನೂರು, ತಮಿಳುನಾಡಿನ ಹೊಸೂರು ಹಾಗೂ ರಾಜ್ಯದ ಮಂಡ್ಯ, ರಾಮನಗರ ಮತ್ತು ಹಾಸನ ಜಿಲ್ಲೆಗಳಿಂದ ಸ್ಥಳೀಯ ಮಾರುಕಟ್ಟೆಗೆ ಟೊಮೆಟೊ ಬರುತ್ತಿದೆ. ಇದರಿಂದ ಸಹಜವಾಗಿಯೇ ಮಾರುಕಟ್ಟೆಯಲ್ಲಿ ಟೊಮೆಟೊ ಆವಕ ಹೆಚ್ಚಿದೆ. ಆದರೆ, ಆವಕದ ಪ್ರಮಾಣಕ್ಕೆ ತಕ್ಕಂತೆ ಬೇಡಿಕೆ ಹೆಚ್ಚಿಲ್ಲ. ಇದು ಬೆಲೆ ಕುಸಿತಕ್ಕೆ ಮುಖ್ಯ ಕಾರಣವಾಗಿದೆ.

2 ಪಟ್ಟು ಹೆಚ್ಚು: ತಿಂಗಳ ಹಿಂದೆ ಅಂದರೆ ಏಪ್ರಿಲ್‌ 12ರಂದು ಸ್ಥಳೀಯ ಎಪಿಎಂಸಿಯಲ್ಲಿ ಟೊಮೆಟೊ ಸಗಟು ದರ ಕ್ವಿಂಟಲ್‌ಗೆ ಕನಿಷ್ಠ ₹ 414 ಮತ್ತು ಗರಿಷ್ಠ ₹ 1,067 ಇತ್ತು. ಶುಕ್ರವಾರ (ಮೇ 12) ಸಗಟು ದರ ಕ್ವಿಂಟಲ್‌ಗೆ ಕನಿಷ್ಠ ₹ 300 ಮತ್ತು ಗರಿಷ್ಠ ₹ 800ಕ್ಕೆ ತಲುಪಿದೆ. ತಿಂಗಳ ಹಿಂದೆ ಸರಾಸರಿ 1,000 ಕ್ವಿಂಟಲ್‌ ಇದ್ದ ಟೊಮೆಟೊ ಆವಕ ಈಗ ಎರಡು ಪಟ್ಟು ಹೆಚ್ಚಿದೆ. ಶುಕ್ರವಾರ 3,285 ಕ್ವಿಂಟಲ್‌ ಟೊಮೆಟೊ ಮಾರುಕಟ್ಟೆಗೆ ಬಂದಿದೆ.

ಟೊಮೆಟೊ ಆವಕಕ್ಕೆ ಅನುಗುಣವಾಗಿ ಸಗಟು ಮತ್ತು ಚಿಲ್ಲರೆ ಮಾರಾಟ ದರ ಇಳಿಕೆಯಾಗಿದೆ. ಏಪ್ರಿಲ್‌ ಅಂತ್ಯದಲ್ಲಿ ಟೊಮೆಟೊ ಚಿಲ್ಲರೆ ಮಾರಾಟ ದರ ಕೆ.ಜಿಗೆ ₹ 20 ಇತ್ತು. ಈಗ ದರ ₹ 10ಕ್ಕೆ ಕುಸಿದಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಕೇಳುವವರು ಇಲ್ಲ.

ಮುಷ್ಕರದ ಬಿಸಿ: ಏಪ್ರಿಲ್‌ ಮೊದಲ ವಾರದಲ್ಲಿ ದಕ್ಷಿಣ ಭಾರತ ರಾಜ್ಯಗಳಲ್ಲಿ ನಡೆದ ಲಾರಿ ಮುಷ್ಕರದಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಹರಾಜು ಸ್ಥಗಿತಗೊಂಡು ಬೆಲೆ ಗಣನೀಯವಾಗಿ ಕುಸಿದಿತ್ತು. ಮುಷ್ಕರದ ಬಿಸಿಯಿಂದಾಗಿ ಏಳೆಂಟು ದಿನ ಸ್ಥಳೀಯ ಮಾರುಕಟ್ಟೆಯಿಂದ ಹೊರ ರಾಜ್ಯಗಳಿಗೆ ಟೊಮೆಟೊ ಸಾಗಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಟೊಮೆಟೊ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸಿದ್ದರು. ಈ ನಷ್ಟದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಬೆಲೆ ಇಳಿಕೆಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ದಿಕ್ಕು ತೋಚದಂತಾಗಿದೆ
ಹೊರ ರಾಜ್ಯಗಳು ಹಾಗೂ ಜಿಲ್ಲೆಗಳಿಂದ ಸ್ಥಳೀಯ ಮಾರುಕಟ್ಟೆಗೆ ಲೋಡ್‌ಗಟ್ಟಲೆ ಟೊಮೆಟೊ ಬರುತ್ತಿರುವುದರಿಂದ ಬೆಲೆ ಕುಸಿದಿದೆ. ಏಪ್ರಿಲ್‌ನಲ್ಲಿ ಲಾರಿ ಮುಷ್ಕರದಿಂದ ಟೊಮೆಟೊ ಹರಾಜು ಸ್ಥಗಿತಗೊಂಡು ಸಾಕಷ್ಟು ನಷ್ಟವಾಗಿತ್ತು. ಇದರ ಬೆನ್ನಲ್ಲೇ ಬೆಲೆ ಕುಸಿದಿದ್ದು, ದಿಕ್ಕು ತೋಚದಂತಾಗಿದೆ.
–ಕೆ.ವೈ.ಗಣೇಶ್‌ಗೌಡ, ಟೊಮೆಟೊ ಬೆಳೆಗಾರ, ಕೋಟಿಗಾನಹಳ್ಳಿ

ಟೊಮೆಟೊ ಬೆಳೆ ಅಂಕಿ ಅಂಶ

13,000 ಹೆಕ್ಟೇರ್‌ನಲ್ಲಿ ಬೆಳೆಯಲಾದ ಟೊಮೆಟೊ

3,285 ಕ್ವಿಂಟಲ್‌ ಆವಕ

₹ 300 ಕನಿಷ್ಠ ಸಗಟು ದರ

₹ 800 ಗರಿಷ್ಠ ಸಗಟು ದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.