ADVERTISEMENT

ತಾಯಿ– ಮಗುವಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 23 ಮೇ 2017, 4:44 IST
Last Updated 23 ಮೇ 2017, 4:44 IST

ಕೋಲಾರ: ನಗರದ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಸೋಮವಾರ ಸಂಜೆ ಕಟ್ಟಡದ ಚಾವಣಿ ಕುಸಿದು ತಾಯಿ ಮತ್ತು ಮೂರು ದಿನದ ಗಂಡು ಮಗು ಗಾಯಗೊಂಡಿದ್ದು, ಘಟನೆಯಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಹೆರಿಗೆ ವಾರ್ಡ್‌ನ ಒಂದು ಪಾರ್ಶ್ವದಲ್ಲಿ ಸಂಜೆ 6.30ರ ಸುಮಾರಿಗೆ ಚಾವಣಿ ಕುಸಿದಿದೆ. ಈ ವೇಳೆ ಆ ಭಾಗದಲ್ಲೇ ಮಂಚದ ಮೇಲೆ ಮಲಗಿದ್ದ ತಾಯಿ ನೇತ್ರಾ ಮತ್ತು ಮಗುವಿನ ಮೇಲೆ ಚಾವಣಿಯ ಸಿಮೆಂಟ್‌ ಬಿದ್ದಿದೆ. ಇದರಿಂದ ಮಗುವಿನ ತಲೆಗೆ ಮತ್ತು ನೇತ್ರಾ ಅವರ ಕಾಲಿಗೆ ಪೆಟ್ಟಾಗಿದೆ.

ಘಟನಾ ಸಂದರ್ಭದಲ್ಲಿ ಹೆರಿಗೆ ವಾರ್ಡ್‌ನಲ್ಲಿ 30 ಮಂದಿ ತಾಯಂದಿರು ಮತ್ತು 30 ಶಿಶುಗಳಿದ್ದವು. ಚಾವಣಿ ಕುಸಿದಿದ್ದರಿಂದ ಗಾಬರಿಯಾದ ತಾಯಂದಿರು ಶಿಶುಗಳನ್ನು ಎತ್ತಿಕೊಂಡು ವಾರ್ಡ್‌ನಿಂದ ಹೊರ ಬಂದರು. ಇದರಿಂದ ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಚಾವಣಿ ಕುಸಿದ ವಿಷಯ ತಿಳಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಕುಮಾರ್‌ ಮತ್ತು ವೈದ್ಯಕೀಯ ಸಿಬ್ಬಂದಿ ಹೆರಿಗೆ ವಾರ್ಡ್‌ಗೆ ತೆರಳಿ ತಾಯಂದಿರಿಗೆ ಧೈರ್ಯ ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು.

ADVERTISEMENT

‘ಘಟನೆಯಲ್ಲಿ ಗಾಯಗೊಂಡಿರುವ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸಂಜಯ್‌ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ತಾಯಿ ನೇತ್ರಾ ಅವರು ಬಂಗಾರಪೇಟೆ ತಾಲ್ಲೂಕಿನ ತೊಪ್ಪನಹಳ್ಳಿ ಗ್ರಾಮದವರು’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.
ಗಾಯಾಳು ಮಗುವಿನ ತಲೆ ಊದಿಕೊಂಡಿದ್ದು, ನೇತ್ರಾ ಮತ್ತು ಕುಟುಂಬ ಸದಸ್ಯರು ಆತಂಕಗೊಂಡಿದ್ದಾರೆ. ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.