ADVERTISEMENT

ದೇಶದಲ್ಲಿ ನವಯುಗ ಸೃಷ್ಟಿ: ದೇಶಪಾಂಡೆ

ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇ–ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 9:57 IST
Last Updated 11 ಫೆಬ್ರುವರಿ 2017, 9:57 IST
ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಕಾರ್ಯಾರಂಭ ಮಾಡಿದ ಸೆರೆಬ್ರಾ ಇ–ವೇಸ್ಟ್‌ ರೀಸೈಕ್ಲಿಂಗ್‌ ಕಂಪೆನಿಯ ನೂತನ ಘಟಕವನ್ನು ಸಚಿವ ಆರ್‌.ವಿ.ದೇಶಪಾಂಡೆ ವೀಕ್ಷಿಸಿದರು
ಕೋಲಾರ ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಕಾರ್ಯಾರಂಭ ಮಾಡಿದ ಸೆರೆಬ್ರಾ ಇ–ವೇಸ್ಟ್‌ ರೀಸೈಕ್ಲಿಂಗ್‌ ಕಂಪೆನಿಯ ನೂತನ ಘಟಕವನ್ನು ಸಚಿವ ಆರ್‌.ವಿ.ದೇಶಪಾಂಡೆ ವೀಕ್ಷಿಸಿದರು   

ಕೋಲಾರ: ‘ದೇಶದಲ್ಲಿ 2025ರ ವೇಳೆಗೆ ನವಯುಗ ಸೃಷ್ಟಿಯಾಗಲಿದೆ. ಜಾಗತಿಕವಾಗಿ ಭಾರತವು ಅತಿ ದೊಡ್ಡ ಬಂಡವಾಳ ಹೂಡಿಕೆ ರಾಷ್ಟ್ರವಾಗಿ ಹೊರಹೊಮ್ಮಲಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಸೆರೆಬ್ರಾ ಇ–ವೇಸ್ಟ್‌ ರೀಸೈಕ್ಲಿಂಗ್‌ ಕಂಪೆನಿಯ ನೂತನ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಹೆಚ್ಚಿನ ಮೂಲಸೌಕರ್ಯ ಕಲ್ಪಿಸುತ್ತಿದೆ. ಹೀಗಾಗಿ ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು ಹೇಳಿದರು.

ಯಾವುದೇ ದೇಶ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಕಾಣಬೇಕು. ಕೈಗಾರಿಕೆಗಳಿಂದ ಉದ್ಯೋಗ, ವಹಿವಾಟು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆ ಕಾಣಲಿದೆ. ಅಲ್ಲದೇ, ಸರ್ಕಾರದ ಬೊಕ್ಕಸಕ್ಕೂ ಸಾಕಷ್ಟು ಪ್ರಮಾಣದಲ್ಲಿ ತೆರಿಗೆ ಹರಿದು ಬರಲಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರ್ಕಾರ ಹೊಸ ಕೈಗಾರಿಕಾ ನೀತಿ ಜಾರಿಗೆ ತಂದಿದ್ದು, ಇದರಿಂದ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಸಿಗಲಿದೆ. ಕೈಗಾರಿಕೆಗಳಿಗೆ ಭೂಮಿ ನೀಡುವ ರೈತರ ಕುಟುಂಬದ ಒಬ್ಬ ಸದಸ್ಯರಿಗೆ ಕಡ್ಡಾಯವಾಗಿ ಕೆಲಸ ಕೊಡಬೇಕೆಂದು ಉದ್ಯಮಿಗಳಿಗೆ ಸೂಚಿಸಲಾಗಿದೆ. ಸರ್ಕಾರ ಪರಿಸರಸ್ನೇಹಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುತ್ತಿದೆ ಎಂದರು.

ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್ ಹಾಗೂ ಮನಮೋಹನ್‌ ಸಿಂಗ್ ತಮ್ಮ ಅಧಿಕಾರವಧಿಯಲ್ಲಿ ದೇಶವು ಜಾಗತೀಕರಣ ಮತ್ತು ಉದಾರೀಕರಣದ ಫಲವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲು ಭದ್ರ ಬುನಾದಿ ಹಾಕಿದರು. 1991ರಿಂದ ದೇಶದಲ್ಲಿ ಉದ್ಯಮಗಳ ಸ್ಥಾಪನೆಗೆ ಹೆಚ್ಚಿನ ಬಂಡವಾಳ ಹರಿದು ಬರುವಂತಾಯಿತು ಎಂದು ತಿಳಿಸಿದರು.

₹ 50 ಕೋಟಿ: ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ವಿ.ರಂಗನಾಥನ್‌ ಮಾತನಾಡಿ, ‘ಹೊಸ ತಂತ್ರಜ್ಞಾನದ ಮೂಲಕ ದೇಶದಲ್ಲೇ ಪ್ರಥಮ ಬಾರಿಗೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಅತಿ ದೊಡ್ಡ ಮಟ್ಟದ ಇ–ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಲಾಗಿದೆ. ಈ ಘಟಕಕ್ಕೆ ಸುಮಾರು ₹ 50 ಕೋಟಿ ಬಂಡವಾಳ ಹೂಡಿದ್ದು, ಸ್ಥಳೀಯರಿಗೆ ಉದ್ಯೋಗ ನೀಡಿದ್ದೇವೆ. ಮುಂದಿನ ವರ್ಷದ ವೇಳೆಗೆ ಘಟಕವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶವಿದೆ’ ಎಂದು ವಿವರಿಸಿದರು.

ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಟಿ.ವಿ, ಮೊಬೈಲ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳ ಅನುಪಯುಕ್ತ ಬಿಡಿ ಭಾಗಗಳನ್ನು ಹೊರ ತೆಗೆದು ಹೊಸ ಉಪಕರಣಗಳನ್ನು ತಯಾರಿಸಲಾಗುವುದು. ಇ–ತ್ಯಾಜ್ಯದಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಅಲ್ಲದೇ, ಮಾನವನ ಬದುಕಿನ ಮೇಲೆ ದುಷ್ಪರಿಣಾಮವಾಗುತ್ತದೆ.

ಈ ಸಮಸ್ಯೆ ತಪ್ಪಿಸಲು ಇ–ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸಲಾಗಿದೆ. ಘಟಕಕ್ಕೆ ಸುಮಾರು 12 ಎಕರೆ ಭೂಮಿಯ ಅಗತ್ಯವಿದ್ದು, ಸರ್ಕಾರ 9 ಎಕರೆ ಮಂಜೂರು ಮಾಡಿದೆ ಎಂದು ತಿಳಿಸಿದರು.

ಕಂಪೆನಿಯ ಉದ್ಯೋಗಾವಕಾಶಗಳಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡುತ್ತೇವೆ. ಸ್ಥಳೀಯವಾಗಿ ಅರ್ಹರು ಸಿಗದಿದ್ದರೆ ಹೊರಗಿನವರನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದು. ಕಂಪೆನಿ ಗಳಿಸುವ ಲಾಭದಲ್ಲಿ ಶೇ 2ರಷ್ಟನ್ನು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ನೀಡಲಾಗುತ್ತದೆ. ಆರೋಗ್ಯ, ಶಿಕ್ಷಣ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ನೆರವು ನೀಡುತ್ತೇವೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಸೆರೆಬ್ರಾ ಕಂಪೆನಿಯ ಕಾರ್ಯದರ್ಶಿ ಮತ್ತು ಸಲಹೆಗಾರ ಕೆ.ಪಿ.ವಿಜಯಕೃಷ್ಣ, ಪಾಲುದಾರ ಶ್ರೀಧರ್ ಹೆಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.