ADVERTISEMENT

ಪಾತಾಳ ಗಂಗೆ ಯೋಜನೆ ನಿಲ್ಲಿಸುವುದಿಲ್ಲ: ಸಚಿವ

​ಪ್ರಜಾವಾಣಿ ವಾರ್ತೆ
Published 21 ಮೇ 2017, 10:34 IST
Last Updated 21 ಮೇ 2017, 10:34 IST

ಕೋಲಾರ: ‘ಪಾತಾಳ ಗಂಗೆ ಯೋಜನೆಯಿಂದ ನೀರು ಹೊರ ತೆಗೆಯುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಾತಾಳ ಗಂಗೆ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಈಗಾಗಲೇ ಯೋಚನೆ ಮಾಡಿದ್ದಾಗಿದೆ. ಇದರಿಂದ ವೈಜ್ಞಾನಿಕವಾಗಿ ಯಾವ ತೊಂದರೆಯೂ ಆಗುವುದಿಲ್ಲ. ಈ ಯೋಜನೆಯ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

‘ಪಾತಾಳ ಗಂಗೆ ಯೋಜನೆಯಿಂದ ಬಯಲುಸೀಮೆ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಅದರಿಂದ ನೀರು ಹೊರ ತೆಗೆದು ಬಳಸಿಕೊಳ್ಳಬಹುದು. ನಮ್ಮ ಜನ ಎಲ್ಲದಕ್ಕೂ ಅಡ್ಡಿಪಡಿಸುತ್ತಾರೆ. ಎತ್ತಿನ ಹೊಳೆಯಲ್ಲಿ ನೀರೇ ಇಲ್ಲ ಎನ್ನುತ್ತಾರೆ. ಕೆ.ಸಿ.ವ್ಯಾಲಿಯದು ಕೊಳಚೆ ನೀರು ಎನ್ನುತ್ತಾರೆ. ಯಾವುದೇ ಯೋಜನೆಯ ಹೆಸರೇಳಿದರೂ ಅದಕ್ಕೆ ಕಲ್ಲು ಹಾಕುವುದೇ ಇವರ ಕೆಲಸ. ನೀರು ಕೊಟ್ಟು ಜಿಲ್ಲೆಯನ್ನು ಉಳಿಸುವುದೇ ನನ್ನ ಕೆಲಸ’ ಎಂದರು.

ಬಿಜೆಪಿ ಮುಖಂಡರ ಬರ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ಬಿಜೆಪಿಯವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಯಾರು ಏನು ಬೇಕಾದರೂ ಮಾಡಬಹುದು. ಅವರವರ ಜವಾಬ್ದಾರಿ ಅವರದು. ನಾಡಿನ ಜನ ಬುದ್ಧಿವಂತರು. ಎಲ್ಲರ ಕಾರ್ಯವೈಖರಿಯನ್ನು ಜನ ಗಮನಿಸುತ್ತಿದ್ದಾರೆ. ಅದಕ್ಕೆ ಸಮಯ ಬಂದಾಗ ತಕ್ಕ ಉತ್ತರ ಕೊಡುತ್ತಾರೆ’ ಎಂದು ಹೇಳಿದರು.

ADVERTISEMENT

‘ರಾಜ್ಯದಲ್ಲಿ ನಕಲಿ ವೈದ್ಯರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಈ ತಂಡವು ತಿಂಗಳೊಳಗೆ ನಕಲಿ ವೈದ್ಯರ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕಲಿದೆ. ಎಂಬಿಬಿಎಸ್ ಪದವಿ ಪಡೆದು ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಹೋಗದವರು ದುರಾಹಂಕಾರಿಗಳು. ಗ್ರಾಮೀಣ ಭಾಗಕ್ಕೆ ಸೇವೆಗೆ ಹೋಗದ ವೈದ್ಯರನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ. ₹ 1.25 ಲಕ್ಷ ಸಂಬಳ ಕೊಟ್ಟರೂ ವೈದ್ಯರು ಸರ್ಕಾರಿ ಸೇವೆಗೆ ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.