ADVERTISEMENT

ಮಳೆಗೆ ತುಂಬುತ್ತಿವೆ ಕೆರೆಗಳು...

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 9:09 IST
Last Updated 11 ಸೆಪ್ಟೆಂಬರ್ 2017, 9:09 IST

ಮಾಲೂರು: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಉತ್ತಮವಾಗಿ ಮಳೆಯಾಗುತ್ತಿದೆ. ಬಹುತೇಕೆ ಕೆರೆಗಳಿಗೆ ನೀರು ಬಂದಿದೆ. ರೈತರ ಮೊಗದಲ್ಲಿ ಸಂತಸ ಮೂಡಿದೆ. ಇದರ ಜತೆಯಲ್ಲಿಯೇ ಹಲವು ಗ್ರಾಮಗಳ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನರಿಗೆ ತೊಂದರೆಯಾಗಿದೆ.

ಈಗಾಗಲೇ ರಾಗಿ ಬಿತ್ತನೆ ಮುಗಿದಿದೆ. ಹೊಲಗಲ್ಲಿ ಗುಂಟ್ವೆ ಕಾರ್ಯ ಆರಂಭವಾಗಿದೆ. ಶನಿವಾರ ರಾತ್ರಿ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಮಳೆ ಸುರಿದಿದೆ. ಕೆರೆ–ಕುಂಟೆಗಳಿಗೆ ನೀರು ಹರಿದು ಬಂದಿದೆ. ಲಕ್ಕೂರು ಹೋಬಳಿ ವ್ಯಾಪ್ತಿಯ ಮಾದನಹಟ್ಟಿ, ಉಪಾಸಪುರ ಗ್ರಾಮಗಳಲ್ಲಿ ಹಳೇ ಕಟ್ಟಡಗಳು ಕುಸಿದಿವೆ. ಬ್ಯಾಲಹಳ್ಳಿ ಗ್ರಾಮದ ತಿಮ್ಮರಾಯಪ್ಪ , ಮುನಿಯಮ್ಮ ,ಚಂದ್ರಪ್ಪ ಹಾಗು ಬರಗೂರು ಗ್ರಾಮದ ಮುನಿರಾಜು, ನೀಲಮ್ಮ, ಮುನಿಯಪ್ಪ, ನಾರಾಯಣಪ್ಪ, ಗಂಗಪ್ಪ ಅವರ ಮನೆಗಳಿಗೆ ಮಳೆ ನೀರು ನುಗ್ಗಿದೆ. ದವಸ–ಧಾನ್ಯಗಳು ನೀರುಪಾಲಾಗಿದೆ. ಗ್ರಾಮದ ಯಲ್ಲಮ್ಮ ದೇವಾಲಯ ನೀರಿನಿಂದ ಆವೃತವಾಗಿದೆ.

ಲಕ್ಕೂರು ಗ್ರಾಮದ ದೊಡ್ಡಕೆರೆಗೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಮಳೆ ನಿಂತ ನಂತರ ಗ್ರಾಮಸ್ಥರು ಕೆರೆ ಬಳಿ ಬಂದು ಸಂತರ ವ್ಯಕ್ತಪಡಿಸಿದರು. ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಸೆ. 10ರ ಅಂತ್ಯಕ್ಕೆ 17.0 ಮಿ.ಮೀ ಮಳೆಯಾಗಿದೆ. ಲಕ್ಕೂರು ಹೋಬಳಿ ವ್ಯಾಪ್ತಿಯಲ್ಲಿ 37.7 ಮಿ.ಮೀ ಮಳೆಯಾಗಿದೆ. ಮಾಸ್ತಿ 34.1 ಮಿ.ಮೀ ಮತ್ತು ಟೇಕಲ್ ಹೋಬಳಿಯಲ್ಲಿ 3.8 ಮಿ.ಮೀ ಮಳೆಯಾಗಿದೆ. ಇಲ್ಲಿಯವರೆಗೆ ತಾಲ್ಲೂಕಿನಾದ್ಯಂತ ಒಟ್ಟು 632.8 ಮಿ.ಮೀ ಮಳೆಯಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿ ಮುನಿರಾಜು ತಿಳಿಸಿದರು.

ADVERTISEMENT

ಎಚ್.ಎಸ್.ಕೋಟೆ, ಕೋಡೂರು ಗ್ರಾಮಗಳ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಜನರು ರಾತ್ರಿ ನಿದ್ದೆ ಇಲ್ಲದೆ ಜಾಗರಣೆ ಮಾಡಿದ್ದಾರೆ. ‘ಗ್ರಾಮಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರು ಮನೆಗಳಿಗೆ ನುಗ್ಗಿದೆ. ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಮಳೆ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ’ ಎಂದು ಜನರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.