ADVERTISEMENT

ಮಹಿಳೆಯರ ಕೈ ಹಿಡಿದ ಪೊರಕೆ ಕಡ್ಡಿ

ಆರ್.ಚೌಡರೆಡ್ಡಿ
Published 24 ಡಿಸೆಂಬರ್ 2017, 6:41 IST
Last Updated 24 ಡಿಸೆಂಬರ್ 2017, 6:41 IST
ಶ್ರೀನಿವಾಸಪುರದ ಹೊರ ವಲಯದಲ್ಲಿ ರೈತ ಮಹಿಳೆಯರು ಪೊರಕೆ ಕಡ್ಡಿ ಸಂಗ್ರಹಿಸಿ ಕೊಂಡೊಯ್ಯುತ್ತಿರುವುದು
ಶ್ರೀನಿವಾಸಪುರದ ಹೊರ ವಲಯದಲ್ಲಿ ರೈತ ಮಹಿಳೆಯರು ಪೊರಕೆ ಕಡ್ಡಿ ಸಂಗ್ರಹಿಸಿ ಕೊಂಡೊಯ್ಯುತ್ತಿರುವುದು   

ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಮಹಿಳೆಯರಿಂದ ಪೊರಕೆ ಕಡ್ಡಿ ಸಂಗ್ರಹ ಕಾರ್ಯ ಭರದಿಂದ ನಡೆಯುತ್ತಿದೆ. ಬಿಡುವಿಲ್ಲದ ಕೃಷಿ ಚಟುವಟಿಕೆ ನಡುವೆಯೂ ಈ ಕಾಯಕ ಅವರ ಕೈ ಬಿಟ್ಟಿಲ್ಲ. ಮಹಿಳೆಯ ಸಶಕ್ತೀಕರಣ ಇದರಿಂದ ಸಾಧ್ಯವಾಗುತ್ತಿದೆ.

ಡಿಸೆಂಬರ್‌ ಆರಂಭದೊಂದಿಗೆ ತಾಲ್ಲೂಕಿನಲ್ಲಿ ಪೊರಕೆ ಕಡ್ಡಿ ಸಂಗ್ರಹ ಕಾರ್ಯ ಆರಂಭಗೊಳ್ಳುತ್ತದೆ. ಗ್ರಾಮೀಣ ಪ್ರದೇಶದ ಮಹಿಳೆಯರು ಸಮೀಪದ ಕಾಡು ಮೇಡು ಸುತ್ತಿ ಪೊರಕೆ ಕಡ್ಡಿ ಸಂಗ್ರಹಿಸಿ ತರುತ್ತಾರೆ.ತಂದ ಕಡ್ಡಿಯನ್ನು ಬಿಸಿಲಲ್ಲಿ ಒಣಗಿಸಿ, ಊಗು ತೆಗೆದು, ಹಿಡಿ ಗಾತ್ರದ ಪೊರಕೆ ಕಟ್ಟುತ್ತಾರೆ. ಮನೆಗೆ ಬೇಕಾಗುವಷ್ಟು ಪೊರಕೆ ಇಟ್ಟುಕೊಂಡು ಉಳಿದ ಪೊರಕೆ ಮಾರಿ ನಾಲ್ಕು ಕಾಸು ಸಂಪಾದಿಸುತ್ತಾರೆ.

ಈ ಹಿಂದೆ ತಾಲ್ಲೂಕು ಪೊರಕೆ ಕಡ್ಡಿಗೆ ಹೆಸರಾಗಿತ್ತು. ಬೆಟ್ಟ ಗುಡ್ಡ ಹಾಗೂ ಕಾಡುಗಳಲ್ಲಿ ಮಾತ್ರವಲ್ಲದೆ, ವಿಶಾಲವಾದ ಮಾವಿನ ತೋಟಗಳು ಹಾಗೂ ಜಮೀನಿನ ಕಟವೆಗಳಲ್ಲಿ ಪೊರಕೆ ಕಡ್ಡಿ ಸಿಗುತಿತ್ತು. ಕಾಡುಗಳ ನಾಶ, ಕಟವೆಗಳ ನಿರ್ನಾಮದೊಂದಿಗೆ ಪೊರಕೆ ಗುಮ್ಮಿಗಳು ಅಸ್ತಿತ್ವ ಕಳೆದುಕೊಂಡವು. ಮಾವಿನ ತೋಟಗಳಲ್ಲಿ ಕೃಷಿ ಚಟುವಟಿಕೆ ಶುರುವಾದ ಮೇಲೆ ಪೊರಕೆ ಗುಮ್ಮಿಗಳನ್ನು ಕಿತ್ತೆಸೆಯಲಾಗಿದೆ.

ADVERTISEMENT

ಆದರೂ ರಸ್ತೆ ಬದಿ, ಕಾಡಿನ ಅಂಚು ಹಾಗೂ ಬದುಗಳ ಮೇಲೆ ಪೊರಕೆ ಕಡ್ಡಿ ಬೆಳೆದಿವೆ. ದನಗಾಹಿಗಳು ದನ ಮೇಯಿಸುತ್ತ ಪೊರಕೆ ಸಂಗ್ರಹಿಸಿ ಸಂಜೆ ಹಳ್ಳಿಗೆ ಹೊತ್ತು ತರುತ್ತಾರೆ. ಬಿಡುವಿನ ವೇಳೆಯಲ್ಲಿ ಮಹಿಳೆಯರು ಪೊರಕೆ ಕಡ್ಡಿ ಸಂಗ್ರಹಕ್ಕೆ ಹೋಗುತ್ತಾರೆ. ಈ ಹಿಂದೆ ದೂರ ಪ್ರದೇಶಗಳಿಗೆ ಕಾಲ್ನಡಿಗೆಯಲ್ಲಿ ಹೋಗಿ ಕಡ್ಡಿ ಸಂಗ್ರಹಿಸಿ ತಲೆಯ ಮೇಲೆ ಹೊತ್ತು ತರುತ್ತಿದ್ದರು. ಈಗ ಮಹಿಳೆಯರು ಗುಂಪು ಗುಂಪಾಗಿ ಬಾಡಿಗೆ ಆಟೋದಲ್ಲಿ ಹೋಗಿ ಕಡ್ಡಿ ಕೊಯ್ದು ತರುತ್ತಿರುವುದು ಹೊಸ ಬೆಳವಣಿಗೆ.

ಇದು ಪೊರಕೆ ಕಟಾವಿನ ವಿಷಯವಾಯಿತು. ಅದರ ಊಗು ಮಾಡುವ ಅವಾಂತರ ಅಷ್ಟಿಷ್ಟಲ್ಲ. ಪೊರಕೆ ಕಟ್ಟುವ ಮಹಿಳೆಯರು ಸಾಮಾನ್ಯವಾಗಿ ಹಳ್ಳಿಯ ಹೊರಗೆ ಕಾರೆ ಮತ್ತಿತರ ಮುಳ್ಳಿನ ಪೊದೆಗಳ ಮೇಲೆ ಊಗು ತೆಗೆಯುತ್ತಾರೆ. ಸಣ್ಣ ಸೂಜಿಯಂತೆ ಇರುವ ಊಗು ಬಹಳ ಸೂಕ್ಷ್ಮ. ಬೆಂಕಿ ತಗುಲಿದರೆ ಕ್ಷಣಾರ್ಧದಲ್ಲಿ ಹೊತ್ತಿ ಉರಿಯುತ್ತದೆ.

ತುಂಟ ಹುಡುಗರು ಪೊರಕೆ ಊಗಿನ ರಾಶಿಗೆ ಬೆಂಕಿ ಇಡುವುದುಂಟು. ಹಾಗೆ ಇಟ್ಟ ಬೆಂಕಿ ಪೊದೆಗಳಿಗೆ ಹರಡಿ ಮರಗಿಡ ಸಟ್ಟುಹೋಗಿರುವ ಉದಾಹರಣೆ ಇದೆ. ಮಾವಿನ ತೋಟದ ಬೇಲಿಗೆ ಬೆಂಕಿ ತಾಕಿದರಂತೂ ಬೇಲಿ ಅಂಚಿನ ಗಿಡಗಳು, ಕೆಲವೊಮ್ಮೆ ತೋಟದಲ್ಲಿ ಒಣಹುಲ್ಲು ಇದ್ದಲ್ಲಿ ಇಡೀ ತೋಟವೇ ಸುಟ್ಟುಹೋಗುತ್ತದೆ. ಹುಲ್ಲಿನ ಬಣವೆ, ರಾಗಿ ಮೆದೆಗೂ ಊಗಿನ ಬೆಂಕಿ ಗಂಡಾಂತರವಾಗಿದೆ.

ಆದ್ದರಿಂದ ಪೊರಕೆ ಊಗು ತೆಗೆಯುವ ಮಹಿಳೆಯರು ಬೆಂಕಿ ಹರಡದಂತಹ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವುದು ಕ್ಷೇಮಕರ. ಹಾಗೆ ಮಾಡುವುದರಿಂದ ಬೆಂಕಿಯಿಂದ ಸಂಭವಿಸಬಹುದಾದ ಅನಾಹುತ ತಪ್ಪಿಸಿದಂತಾಗುತ್ತದೆ.

₹ 20ಕ್ಕೆ ಪೊರಕೆ ಕಡ್ಡಿ ಮಾರಾಟ

ಕೆಲವರು ಹಳ್ಳಿಗಳಿಗೆ ಹೋಗಿ ಈ ನೈಸರ್ಗಿಕ ಪೊರಕೆಗಳನ್ನು ಖರೀದಿಸಿ ಒಂದೆಡೆ ಸಂಗ್ರಹಿಸುತ್ತಾರೆ. ಹಾಗೆ ಸಂಗ್ರಹಿಸಿದ ಪೊರಕೆಗನ್ನು ಪ್ಯಾಕ್‌ ಮಾಡಿ ದೂರದ ನಗರ ಹಾಗೂ ಪಟ್ಟಣಗಳಿಗೆ ಕೊಂಡೊಯ್ದು ಮಾರಿ ಒಳ್ಳೆಯ ಲಾಭ ಗಳಿಸುತ್ತಾರೆ. ಈಗ ಸ್ಥಳೀಯವಾಗಿ ಪೊರಕೆಯೊಂದು ₹ 20ರಂತೆ ಮಾರಾಟವಾಗುತ್ತಿದೆ. ಅದು ಪಟ್ಟಣ ಸೇರುವುದರಲ್ಲಿ ಬೆಲೆ ಹೆಚ್ಚುತ್ತದೆ. ಹೆಚ್ಚಿದ ಲಾಭ ಮಧ್ಯವರ್ತಿಗಳ ಪಾಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.