ADVERTISEMENT

ರಾಜಕಾಲುವೆಯಲ್ಲಿ ತ್ಯಾಜ್ಯ ತೆರವು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 8:36 IST
Last Updated 5 ಸೆಪ್ಟೆಂಬರ್ 2017, 8:36 IST
ಮುಳಬಾಗಿಲಿನ ಬಡಾವಣೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಡೆ ಸೋಮವಾರ ಪೈಪ್‌ಲೈನ್‌ ಹಾಕಲಾಯಿತು.
ಮುಳಬಾಗಿಲಿನ ಬಡಾವಣೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಡೆ ಸೋಮವಾರ ಪೈಪ್‌ಲೈನ್‌ ಹಾಕಲಾಯಿತು.   

ಮುಳಬಾಗಿಲು: ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದ ರಾಜಕಾಲುವೆ ಮತ್ತು ಚರಂಡಿಗಳಲ್ಲಿ ತುಂಬಿಕೊಂಡ ತ್ಯಾಜ್ಯವನ್ನು ನಗರಸಭೆ ವತಿಯಿಂದ ಸೋಮವಾರ ತೆರವುಗೊಳಿಸಲಾಯಿತು. ಶನಿವಾರ ಮತ್ತು ಭಾನುವಾರ ಉತ್ತಮ ಮಳೆಯಾದ ಕಾರಣ ತಗ್ಗು ಪ್ರದೇಶದ ಬಡಾವಣೆಗಳ ಒಳ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡು ಮಳೆ ನೀರು ಮನೆಗಳಿಗೆ ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಸಿತ್ತು.

ಈ ಸಂಬಂಧ ಸ್ಥಳೀಯರು ನಗರಸಭೆಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ನಗರಸಭೆ ಆಯುಕ್ತ ಬಿ.ಪ್ರಹ್ಲಾದ್‌ ನೇತೃತ್ವದಲ್ಲಿ ಬೆಳಿಗ್ಗೆ ಕಾರ್ಯಾಚರಣೆಗಿಳಿದ ಪೌರ ಕಾರ್ಮಿಕರು ಚರಂಡಿ ಮತ್ತು ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿದರು.

‘ಪೊಲೀಸ್ ಠಾಣೆ ಹಿಂಭಾಗದಿಂದ ಹೈದರಿ ನಗರ ಮೂಲಕ ಕೆಜಿಎಫ್ ಮುಖ್ಯರಸ್ತೆ ಹಾಗೂ ಹೈದರವಲ್ಲಿ ದರ್ಗಾ ಮೂಲಕ ಹಾದು ಹೋಗುವ ರಾಜಕಾಲುವೆ ಪಕ್ಕದ ಕೆಲ ಮನೆಗಳಿಗೆ ಮಳೆ ನೀರು ನುಗ್ಗಿತ್ತು. ರಾಜಕಾಲುವೆ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ’ ಎಂದು ಪ್ರಹ್ಲಾದ್‌ ತಿಳಿಸಿದರು.

ADVERTISEMENT

ಕೆಲ ಬಡಾವಣೆಗಳಲ್ಲಿ ಮನೆ ಮುಂಭಾಗದ ರಸ್ತೆಯಲ್ಲಿ ಚರಂಡಿ ನಿರ್ಮಾಣಕ್ಕೆ ಜಾಗವಿಲ್ಲ. ಅಂತಹ ಕಡೆ ಪೈಪ್‌ಲೈನ್‌ ಅಳವಡಿಸಲಾಗುತ್ತದೆ. ನಗರವಾಸಿಗಳು ಇದಕ್ಕೆ ಸಹಕರಿಸಬೇಕು. ಮನೆಗಳ ಅಕ್ಕಪಕ್ಕ ಮಳೆ ನೀರು ನಿಲ್ಲದಂತೆ ಜನ ಎಚ್ಚರ ವಹಿಸಬೇಕು. ನೀರು ನಿಂತಿರುವ ಸ್ಥಳಗಳಲ್ಲಿ ಸೀಮೆಎಣ್ಣೆ ಅಥವಾ ಬ್ಲೀಚಿಂಗ್‌ ಪುಡಿ ಹಾಕಬೇಕು. ಇಲ್ಲದಿದ್ದರೆ ಸೊಳ್ಳೆ ಉತ್ಪತ್ತಿಯಾಗಿ ಕಾಯಿಲೆಗಳು ಬರುತ್ತವೆ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.