ADVERTISEMENT

ರೈತರ ಸಾಂಘಿಕ ಪ್ರಯತ್ನದಿಂದ ಹುಳು ಬಾಧೆಗೆ ತಡೆ

ಮಾವು ಕಾಂಡ ಕೊರಕ ಹುಳುಬಾಧೆ ನಿವಾರಣೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 10:39 IST
Last Updated 1 ಆಗಸ್ಟ್ 2015, 10:39 IST

ಶ್ರೀನಿವಾಸಪುರ: ಮಾವಿನ ಬೇಸಾಯದಲ್ಲಿ ವೈಜ್ಞಾನಿಕ ಕ್ರಮ ಅನುಸರಿಸಬೇಕು. ಮರಗಳಿಗೆ ಮಾರಕವಾಗಿರುವ ಹುಳುಬಾಧೆ ನಿವಾರಿಸಬೇಕು ಎಂದು ತಾಲ್ಲೂಕು ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಎಂ. ಮಲ್ಲಿಕಾರ್ಜುನ ಸಲಹೆ ಮಾಡಿದರು.

ತಾಲ್ಲೂಕು ತೋಟಗಾರಿಕಾ ಇಲಾಖೆ, ಹೊಗಳಗೆರೆ ಮಾವು ಅಭಿವೃದ್ಧಿ ನಿಗಮ ಹಾಗೂ ಧರ್ಮಸ್ಥಳ ಮಂಜುನಾಥಸ್ವಾಮಿ ಗ್ರಾಮಾಭಿವೃದ್ಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ‘ಮಾವಿನ ಮರಗಳಿಗೆ ಕಾಂಡ ಕೊರಕ ಹುಳು ಬಾಧೆ ನಿವಾರಣೆ’ ಎಂಬ ವಿಷಯ ಕುರಿತು ಮಾವು ಬೆಳೆಗಾರರಿಗೆ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ಮಾವು ಬೆಳೆಗಾರ ಶ್ರೀನಿವಾಸರೆಡ್ಡಿ ಅವರ ತೋಟದಲ್ಲಿ  ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ಮಾತನಾಡಿದರು.

ಕಾಂಡ ಕೊರಕ ಹುಳು ಬಾಧೆಯಿಂದ ಪ್ರತಿ ವರ್ಷ ಸಾವಿರಾರು ಮರ ಹಾಳಾಗುತ್ತವೆ.  ಅದರಲ್ಲೂ ಬಾದಾಮಿ ಜಾತಿಯ ಮಾವಿನ ಮರಗಳು ಈ ಹುಳು ಬಾಧೆಗೆ ಹೆಚ್ಚಾಗಿ ಬಲಿಯಾಗುತ್ತಿವೆ. ಇದರಿಂದ ಬೆಳೆಗಾರರಿಗೆ ಅಪಾರ ನಷ್ಟ ಉಂಟಾಗುತ್ತಿದೆ. ಹುಳುಬಾಧೆ ತಟ್ಟಿದ ಮರಗಳಲ್ಲಿ ನಿರೀಕ್ಷಿತ ಫಸಲು ಬರುವುದಿಲ್ಲ. ಉತ್ತಮ ಗುಣಮಟ್ಟದ ಫಸಲು ಸಿಗುವುದಿಲ್ಲ. ಆದ್ದರಿಂದ ಬೆಳೆಗಾರರು ಕಾಂಡ ಕೊರಕ ಹುಳುಗಳ ನಿಯಂತ್ರಣಕ್ಕೆ ಸಾಂಘಿಕ ಪ್ರಯತ್ನ ಮಾಡಬೇಕು ಎಂದರು. ಮರದ ಕಾಂಡದಲ್ಲಿ ಹುಳುಗಳು ರಂಧ್ರ ಮಾಡಿ ಒಳಗೆ ಪ್ರವೇಶಿಸುತ್ತವೆ.

ಮರ ಕಡಿದು ಹಾಳು ಮಾಡುತ್ತವೆ. ಮೊದಲು ಕಾಂಡ ಕೊರಕ ಹುಳು ಇರುವ ರಂಧ್ರ ಪತ್ತೆ ಹಚ್ಚಬೇಕು. ನಂತರ ಲೋಹದ ಕಡ್ಡಿಯಿಂದ ತಿವಿದು ರಂಧ್ರದಲ್ಲಿನ ಹೊಟ್ಟನ್ನು ಹೊರಗೆ ತೆಗೆಯಬೇಕು. ಸಾಧ್ಯವಾದರೆ ಲೋಹದ ಕಡ್ಡಿಯಿಂದ ತಿವಿದು ಹುಳು ಕೊಲ್ಲಬೇಕು ಎಂದು ಸಲಹೆ ಮಾಡಿದರು. ಸ್ವಚ್ಛಗೊಳಿಸಿದ ರಂಧ್ರದೊಳಗೆ  ನುವಾನ್‌ ಔಷಧಿ ಸುರಿಯಬೇಕು. ಹಾಗೆ ಮಾಡುವುದರಿಂದ ರಂಧ್ರದೊಳಗಿನ ಹುಳು ಸಾಯುತ್ತವೆ. ಅನಂತರ ರಂಧ್ರದ ಸುತ್ತ ಬ್ಲೈಟಕ್ಸ್‌ ಹಾಗೂ  ಹೀಲರ್‌ ಕಂ ಸೀಲರ್‌ ಮಿಶ್ರಣ ಹಚ್ಚಬೇಕು ಎಂದು ಸಲಹೆ ನೀಡಿದರು.

ಹೊಗಳಗೆರೆ ಮಾವು ಅಭಿವೃದ್ಧಿ ನಿಗಮ ತಾಂತ್ರಿಕ ಸಹಾಯಕ ಭಾಸ್ಕರ್‌ರೆಡ್ಡಿ ಮಾತನಾಡಿ, ಕೇವಲ ಬೆರಳೆಣಿಕೆಯಷ್ಟು ಮಂದಿ ಬೆಳೆಗಾರರು ಕೈಗೊಳ್ಳುವ ನಿಯಂತ್ರಣ ಕ್ರಮದಿಂದಾಗಿ ಹೆಚ್ಚು ಪ್ರಯೋಜನವಾಗುವುದಿಲ್ಲ ಎಂದರು. ಸಮಸ್ಯೆ ಪೂರ್ಣಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರಬೇಕಾದರೆ ಮಾವು ಬೆಳೆಗಾರರು ಸಾಂಘಿಕವಾಗಿ ಪ್ರಯತ್ನಿಸಬೇಕು. ಸೂಚಿಸಲಾದ ಸರಳ ವಿಧಾನವನ್ನು ಒಟ್ಟಿಗೆ ಅನುಸರಿಸುವುದರ ಮೂಲಕ ಕಾಂಡ ಕೊರಕ ಹುಳು ಬಾಧೆಯಿಂದ ಮಾವಿನ ಮರ ರಕ್ಷಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. 

ಧರ್ಮಸ್ಥಳ ಮಂಜುನಾಥಸ್ವಾಮಿ ಗ್ರಾಮಾಭಿವೃದ್ಧಿ ಸಂಸ್ಥೆಯ ಅಧಿಕಾರಿ ಯೋಗೇಶ್‌ ಮಾತನಾಡಿ, ಸಂಸ್ಥೆ ತಾಲ್ಲೂಕಿನಲ್ಲಿ ಹಲವಾರು ಸಮುದಾಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷಿ ಹಾಗೂ ತೋಟಗಾರಿಕೆ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲಾಗುವುದು ಎಂದರು. ಮಾವು ಕೃಷಿ ಹಾಗೂ ಸಂರಕ್ಷಣೆ ಕುರಿತು ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಕೃಷಿಕರ ಪ್ರಶ್ನೆಗಳಿಗೆ ಬಿ.ಎಂ.ಮಲ್ಲಿಕಾರ್ಜುನ ಬಾಬು ಹಾಗೂ ಭಾಸ್ಕರ್‌ರೆಡ್ಡಿ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.