ADVERTISEMENT

ಲಾರಿ ಮಾಲೀಕರ ಬಂಧನಕ್ಕೆ ಸೂಚನೆ

ಮರಳು ದಂಧೆ ತಡೆಗೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2014, 9:08 IST
Last Updated 16 ಸೆಪ್ಟೆಂಬರ್ 2014, 9:08 IST

ಕೋಲಾರ: ಜಿಲ್ಲೆಯಲ್ಲಿ ಮರಳು ಖಾಲಿ­ಯಾಗಿದೆ. ಮರಳು ತೆಗೆಯಲು, ಸಾಗಿ­ಸಲು ಯಾರಿಗೂ ಪರವಾನಗಿ ನೀಡು­ತ್ತಿಲ್ಲ. ಆದರೂ ಕೆರೆಗಳಿಂದ ಮರಳು ತೆಗೆದು ಸಾಗಿಸುವ ಲಾರಿಗಳ ಮಾಲೀಕ­ರನ್ನು ಬಂಧಿಸಿ. ಆಗ ಎಲ್ಲವೂ ನಿಯಂತ್ರ­ಣಕ್ಕೆ ಬರುತ್ತದೆ ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಪೊಲೀಸರಿಗೆ ಸೂಚಿಸಿದರು.

ಜಿಲ್ಲೆಯ ಮುಳಬಾಗಲಿನಲ್ಲಿ ಇತ್ತೀ­ಚೆಗೆ ನಡೆದ ಭೀಕರ ಅಪಘಾತದಲ್ಲಿ 13 ಮಂದಿ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ, ಮರಳು ದಂಧೆ ತಡೆಯಲು ಕಠಿಣ ಕ್ರಮ ಕೈಗೊಳ್ಳುವ ಸಲುವಾಗಿ ಅವರು ನಗರದ ತಮ್ಮ ಕಚೇರಿಯಲ್ಲಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಲಾರಿಯ ಚಾಲಕ, ಕ್ಲೀನರ್‌ ಮೇಲಷ್ಟೆ ಪ್ರಕರಣ ದಾಖಲಿ­ಸಿದರೆ ನೂರು ವರ್ಷವಾದರೂ ಮರಳು ದಂಧೆ ನಿಲ್ಲಿಸಲು ಸಾಧ್ಯವಿಲ್ಲ ಎಂದರು.

ಜಿಲ್ಲೆಯಲ್ಲಿ ಮರಳು ದಂಧೆ ಕೆರೆ­ಗಳಲ್ಲಿ ನಡೆಯುತ್ತಿರುವುದರಿಂದ, ಸಂಬಂಧಿ­ಸಿದ ಹೋಬಳಿಯ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ದೂರು ನೀಡಿದರೆ, ದಂಧೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು. ಇಲ್ಲವಾದರೆ ಕೇವಲ ದಂಡ ಶುಲ್ಕ ಪಡೆದು ವಾಹನಗಳನ್ನು ವಾಪಸು ನೀಡಬೇಕಾ­ಗುತ್ತದೆ. ಅದರಿಂದ ದಂಧೆ ತಡೆಯಲು ಸಾಧ್ಯವಾಗುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ಕೋಲಾರ ಉಪ­ವಿಭಾಗದ ಡಿವೈಎಸ್‌ಪಿ ಕೆ.ಅಶೋಕ್‌­ಕುಮಾರ್‌ ಸಲಹೆ ನೀಡಿದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಎಲ್ಲ ತಾಲ್ಲೂಕುಗಳ ಕಂದಾಯ ನಿರೀಕ್ಷ­ಕರು, ಗ್ರಾಮ ಲೆಕ್ಕಿಗರು ದೂರು ನೀಡುವ ಮೂಲಕ ಪೊಲೀಸರಿಗೆ ಸಹರಿಸುವಂತೆ ಕ್ರಮ ಜರುಗಿಸಿ ಎಂದು ಎಲ್ಲ ತಹಶೀ­ಲ್ದಾರರಿಗೆ ಸೂಚಿಸಿದರು. ಎಲ್ಲ ದೂರು­ಗಳ ನಿರ್ವಹಣೆಗೆ ಉಪವಿಭಾಗಾಧಿಕಾರಿ ಸಿ.ಎನ್‌.ಮಂಜುನಾಥ್‌ ಅವರನ್ನು ಜಿಲ್ಲಾಧಿಕಾರಿ ನಿಯೋಜಿಸಿದರು.

ಗ್ರಾ.ಪಂ. ಅಧ್ಯಕ್ಷ, ಪಿಡಿಓ: ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಮೇಲೆ ಗ್ರಾಮ ಪಂಚಾ­ಯಿತಿ ಅಧ್ಯಕ್ಷರು ಮತ್ತು ಅಭಿ­ವೃದ್ಧಿ ಅಧಿಕಾರಿಗಳಿಗೆ ಸಂಪೂರ್ಣ ಅಧಿ­ಕಾರ ಮತ್ತು ಜವಾಬ್ದಾರಿ ಇರುತ್ತದೆ. ಮರಳು ದಂಧೆ ಬಗ್ಗೆ ಅವರೂ ಪೊಲೀಸ­ರಿಗೆ ದೂರು ಕೊಡಬೇಕು. ದೂರು ಕೊಡದೇ ಸುಮ್ಮನಿರುವ ಅಧ್ಯಕ್ಷ, ಅಧಿ­ಕಾರಿ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳ­ಲಾಗುವುದು ಎಂದು ತಿಳಿ­ಸಿದರು.

ಮೂರು ತಂಡ ರಚನೆ: ಮರಳು ದಂಧೆ ತಡೆಯುವ ಸಲುವಾಗಿ ಮುಳಬಾಗಲು, ಕೋಲಾರ ಮತ್ತು ಶ್ರೀನಿವಾಸಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಕಾರ್ಯಾ­ಚರಣೆ ನಡೆಸುವ ಸಲುವಾಗಿ ಮೂರು ತಂಡಗಳನ್ನು ಜಿಲ್ಲಾಧಿಕಾರಿ ಇದೇ ಸಂದರ್ಭದಲ್ಲಿ ರಚಿಸಿದರು. ಗೃಹರಕ್ಷಕ ದಳದ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ, ಅರಣ್ಯ ರಕ್ಷಕ, ಕಂದಾಯಾಧಿಕಾರಿ ಇರುವ ತಂಡಕ್ಕೆ ಪ್ರತ್ಯೇಕ ವಾಹನವನ್ನು ನೀಡಲಾಗುವುದು ಎಂದರು.

ಉತ್ಪಾದಿತ ಮರಳು: ಜಿಲ್ಲೆಯ ಮಾಲೂರು ಮತ್ತು ಮುಳಬಾಗಲು ತಾಲ್ಲೂಕಿನಲ್ಲಿ ತಲಾ ಐದು ಎಕರೆಯಂತೆ 10 ಎಕರೆ ಪ್ರದೇಶವನ್ನು ಉತ್ಪಾದಿತ ಮರಳಿಗಾಗಿ ಗುರುತಿಸಲಾಗಿದೆ. ಜಲ್ಲಿ ಕ್ರಶರ್ ನಡೆಸುತ್ತಿರುವ ಕೆಲವರೂ ಮರಳು ಉತ್ಪಾದಿಸಲು ಪರವಾನಗಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿಜ್ಞಾನಿ ಷಣ್ಮುಖಪ್ಪ ತಿಳಿಸಿದರು.

ಅವಕಾಶ ಕೊಡಿ: ಹೊಸ ನಿಯಮಗಳ ಜಾರಿಗಾಗಿ ಜಲ್ಲಿ ಕ್ರಶರ್‌ಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ಗ್ರಾಮಸ್ಥರು ಅಡ್ಡಿ ಉಂಟು ಮಾಡುತ್ತಾರೆ. ಆದರೆ ಪೊಲೀಸರ ನೆರವು ಪಡೆದು ಕಂದಾಯ ಸಿಬ್ಬಂದಿ ಹೊಸ ಪ್ರದೇಶಗಳಲ್ಲಿ ಸರ್ವೇ ನಡೆಸಿ ಪರವಾನಗಿದಾರರಿಗೆ ಕ್ರಶರ್‌ ನಡೆಸಲು ಅನುವು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಜಿ.ಪಂ. ಸಿಇಒ ಆರ್‌.ವಿನೋತ್‌ ಪ್ರಿಯಾ,  ಜಿಲ್ಲಾ ಪೊಲೀಸ್‌ ವರಿಷ್ಠಾ­ಧಿ­ಕಾ­­­-ರಿ­­ಗಳಾದ ಅಜಯ್ ಹಿಲೋರಿ ಮತ್ತು ಎಚ್‌.ಆರ್‌.ಭಗವಾನ್‌ದಾಸ್‌, ತಹಶೀ­ಲ್ದಾರ್ ರಾದ ರಂಗೇಗೌಡ, ಶಿವ­ಕುಮಾರ್‌, ಗಂಗಪ್ಪ, ಸತ್ಯವತಿ, ಮುಳ­ಬಾಗಲು ಉಪವಿಭಾಗದ ಡಿವೈಎಸ್‌ಪಿ ಸಿದ್ದೇಶ್ವರ್‌ ಇತರರು ಪಾಲ್ಗೊಂಡಿ­ದ್ದರು.

ಹೊರರಾಜ್ಯದ ಲಾರಿಗೆ ಹಸಿರು ಬಣ್ಣ..

ಆಂಧ್ರಪ್ರದೇಶ ಮತ್ತು ತಮಿಳುನಾಡಿನಿಂದ ಮರಳು ಲಾರಿಗಳು ಕೋಲಾರ ಮೂಲಕ ಬೆಂಗಳೂರು ಸೇರುತ್ತಿವೆ.  ಪುದುಚೇರಿ ಮತ್ತು ನೆಲ್ಲೂರಿನಲ್ಲಿ ಅವುಗಳಿಗೆ ಪರವಾನಗಿ ನೀಡಲಾಗುತ್ತಿದೆ. ಹೊರರಾಜ್ಯದ ಎಲ್ಲ ಮರಳು ಲಾರಿಗಳಿಗೆ ಹಸಿರು ಬಣ್ಣ ಬಳಿಯಬೇಕು. ಕೋಲಾರ ಮೂಲಕ ಸಂಚರಿಸುವ ಲಾರಿಗಳ ನೋಂದಣಿ ಸಂಖ್ಯೆ ಸೇರಿದಂತೆ ಎಲ್ಲ ಮಾಹಿತಿಯನ್ನು ಒಂದೆರಡು ದಿನ ಮುಂಚಿತವಾಗಿಯೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗುವುದು. ಜಿಲ್ಲಾಡಳಿತದ ಚೆಕ್‌ ಪೋಸ್ಟ್ ಜೊತೆಗೆ ವಾಣಿಜ್ಯ ತೆರಿಗೆ ಇಲಾಖೆಯ ಚೆಕ್‌ಪೋಸ್ಟ್‌ನಲ್ಲೂ ಹೊರರಾಜ್ಯದ ಲಾರಿಗಳ ತಪಾಸಣೆ ಮಾಡಬೇಕು. ಪರವಾನಗಿ ಮೇಲೆ ಸೀಲು ಹಾಕಿ, ಸಹಿ ಮಾಡಬೇಕು. ಅದರಿಂದ ಪರವಾನಗಿಯ ಮರುಬಳಕೆ ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿದ್ದ ಇಲಾಖೆಯ ವಿಚಕ್ಷಣ ದಳದ ಅಧಿಕಾರಿ ಸುಜಾತಾ ಅವರಿಗೆ ಸೂಚಿಸಿದರು.

ತಾಲ್ಲೂಕು ಸಮಿತಿಯ ಅಮಾನತು: ಎಚ್ಚರಿಕೆ
ಮರಳು ಅಕ್ರಮ ಸಾಗಣೆಯನ್ನು ತಡೆಯಲು ರಚಿಸಲಾಗಿರುವ ತಾಲ್ಲೂಕು ಮಟ್ಟದ ಸಮಿತಿ ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪ್ರತಿ ತಿಂಗಳೂ ನಿಯಮದಂತೆ ಪರಿಶೀಲನಾ ಸಭೆ ನಡೆಸುತ್ತಿಲ್ಲ. ಬದಲಾವಣೆ ಕಾಣದಿದ್ದರೆ ಸಮಿತಿಯ ಎಲ್ಲರನ್ನೂ ಸೇವೆಯಿಂದ ಅಮಾನತು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.

ಇತ್ತೀಚಿನ ಮುಳಬಾಗಲು ಅಪಘಾತ ಪ್ರಕರಣದಲ್ಲಿ ಗ್ರಾಮ ಲೆಕ್ಕಿಗ, ಕಂದಾಯ ನಿರೀಕ್ಷಕ, ಪೊಲೀಸ್‌ ಸರ್ಕಲ್‌ ಇನ್ ಸ್ಪೆಕ್ಟರ್‌ ಮತ್ತು ಸಬ್‌ ಇನ್ ಸ್ಪೆಕ್ಟರ್‌ ವಿರುದ್ಧ ಮಾತ್ರ ಕ್ರಮ ಕೈಗೊಂಡು ಬಲಿಪಶು ಮಾಡಲಾಗಿದೆ. ತಾಲ್ಲೂಕು ಸಮಿತಿಯ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಬಹುದಿತ್ತಲ್ಲವೇ ಎಂದು ಇದೇ ಸಂದರ್ಭದಲ್ಲಿ ಕೋಲಾರ ಗ್ರಾಮಾಂತರ ಠಾಣೆಯ ಸಬ್ ಇನ್ ಸ್ಪೆಕ್ಟರ್‌ ದೇವೇಂದ್ರಪ್ಪ ಅಭಿಪ್ರಾಯಪಟ್ಟರು.

ಆದರೆ, ಅವರ ಮಾತನ್ನು ಒಪ್ಪದ ಜಿಲ್ಲಾಧಿಕಾರಿ, ಅಪಘಾತದ ಹಿನ್ನೆಲೆಯಲ್ಲಿ ಕಂದಾಯ ಮತ್ತು ಪೊಲೀಸ್‌ ಸಿಬ್ಬಂದಿಯ ಕರ್ತವ್ಯಲೋಪ ಎದ್ದು ಕಂಡಿರುವುದರಿಂದ ಕ್ರಮ ಕೈಗೊಳ್ಳಲಾಗಿದೆ. ಲೋಪವಾಯಿತು ಎಂದು ತಹಶೀಲ್ದಾರ್, ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಎಲ್ಲರನ್ನೂ ಸೇವೆಯಿಂದ ಅಮಾನತು ಮಾಡಲಾಗುತ್ತದೆಯೇ? ಎಂದು ಪ್ರಶ್ನಿಸಿದರು.

ವಾಹನ ಬಾಡಿಗೆ: ದಿನಕ್ಕೆ ₨ 5 ಸಾವಿರ!
ಮರಳು ದಂಧೆ ತಡೆಯಲು ಕಾರ್ಯಾಚರಣೆ ನಡೆಸುವ ಸಲುವಾಗಿ ಕಳೆದ ಬಾರಿ ತಂಡಕ್ಕೆ ಪಡೆದ ವಾಹನದ ಬಾಡಿಗೆ ಮೊತ್ತ ದಿನಕ್ಕೆ ₨ 5 ಸಾವಿರ. ಇದು ಹೇಗೆ ಸಾಧ್ಯ? ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಮಾಸಿಕ ₨ 23 ಸಾವಿರದಂತೆ ಟಾಟಾ ಸುಮೋಗೆ ಬಾಡಿಗೆಯನ್ನು ಜಿಲ್ಲಾಡಳಿತ ನೀಡುತ್ತದೆ. ಇಂಥ ಸನ್ನಿವೇಶದಲ್ಲಿ ದಿನಕ್ಕೆ ₨ 5 ಸಾವಿರದಂತೆ ಬಾಡಿಗೆ ನಿಗದಿ ಮಾಡಿ ವಾಹನ ಬಳಸಿರುವುದು ಸರಿಯಲ್ಲ ಎಂದರು. ತಿಂಗಳಿಗೆ ₨ 30 ಸಾವಿರ ಬಾಡಿಗೆ ನೀಡಲಾಗುವುದು ಅಷ್ಟೆ ಎಂದು ಸ್ಪಷ್ಟಪಡಿಸಿದರು.

ವಶಪಡಿಸಿಕೊಂಡ ಲಾರಿಗಳನ್ನು ನಿಲ್ಲಿಸಲು ಠಾಣೆಗಳಲ್ಲಿ ಸ್ಥಳದ ಕೊರತೆ ಇರುವುದರ ಬಗ್ಗೆ ಪೊಲೀಸರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಠಾಣೆಗಳ ಆಸುಪಾಸಿನಲ್ಲಿ ಸರ್ಕಾರಕ್ಕೆ ಸೇರಿದ ಜಾಗವನ್ನು ಗುರುತಿಸಿದರೆ ಅದನ್ನು ನೀಡಲಾಗುವುದು. ಇಲ್ಲದಿದ್ದರೆ, ಖಾಸಗಿ ಜಾಗವನ್ನು ಬಾಡಿಗೆಗೆ ಪಡೆಯಲು ಅವಕಾಶವಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.