ADVERTISEMENT

ಸಂಘಟನೆಯಿಂದ ಅಭಿವೃದ್ಧಿ ಸಾಧ್ಯ

ನಗರದ ಪ್ರಮುಖ ರಸ್ತೆಗಳಲ್ಲಿ ಸಂಭ್ರಮದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 4:37 IST
Last Updated 10 ಏಪ್ರಿಲ್ 2017, 4:37 IST

ಕೋಲಾರ: ‘ಜೈನ ಸಮಯದಾಯದ ವರು ಸಂಘಟಿತರಾದಾಗ ಮಾತ್ರ ಸಮಾ ಜದ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ಉಪ ವಿಭಾಗಾಧಿಕಾರಿ ಸಿ.ಎನ್. ಮಂಜುನಾಥ್ ಅಭಿಪ್ರಾಯ ಪಟ್ಟರು.

ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ನಡೆದ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸಮುದಾಯದವರು ಗ್ರಾಮೀಣ ಪ್ರದೇಶಗಳಲ್ಲಿ ತುಳಿತಕ್ಕೆ ಒಳಗಾಗುತ್ತಿದ್ದು ಅವರ ಅಭಿವೃದ್ಧಿಗೆ ಸಹಕಾರ ನೀಡಬೇಕಾದ ಅಗತ್ಯವಿದೆ’ ಎಂದು ತಿಳಿಸಿದರು.

‘ವಿಶ್ವದ ವಿವಿಧ ಕಡೆಗಳಲ್ಲಿ ಹಲವು ಕಾರಣಗಳಿಂದ ಹಿಂಸಾ ಕೃತ್ಯಗಳು ನಡೆಯುತ್ತಲೇ ಇವೆ. ಆದರೆ, ಅಹಿಂಸೆಯ ಸಂಕಲ್ಪದ ಮೂಲಕ ಮಾನವ ಸಂಕುಲ ಮುಂದುವರಿಯಲು ಅಗತ್ಯವಿರುವ ಆಚರಣೆಯನ್ನು ಜೈನಧರ್ಮವು ಕಲಿಸುತ್ತಿರುವುದು ಶ್ಲಾಘನೀಯ’ ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಲಕ್ಷ್ಮಿನಾರಾಯಣ ಮಾತನಾಡಿ, ‘6ನೇ ಶತಮಾನದಲ್ಲಿಯೇ ದೇಶಕ್ಕೆ ಭದ್ರಬುನಾದಿ ಹಾಕಿದ ಕೀರ್ತಿ ಜೈನ ಸಮುದಾಯಕ್ಕೆ ಸಲ್ಲುತ್ತದೆ’ ಎಂದು ತಿಳಿಸಿದರು.

‘6ನೇ ಶತಮಾನದಲ್ಲಿ ಧಾರ್ಮಿಕ ವ್ಯವಸ್ಥೆಯು ದುಬಾರಿಯಾಗಿ ದೇವರು, ಧರ್ಮ ಎನ್ನುವುದು ಕೆಲವೇ ವರ್ಗಗಳಿಗೆ ಸೀಮಿತವಾಗಿತ್ತು. ಆ ಸಂದರ್ಭದಲ್ಲಿ ಶೋಷಣೆಯ ವಿರುದ್ಧವಾಗಿ ಜೈನಧರ್ಮ ಅಸ್ತಿತ್ವಕ್ಕೆ ಬಂದಿತು. ದುರಾಸೆ, ಸ್ವಾರ್ಥ ಇಲ್ಲದವರು ಜಿನ ಆಗುತ್ತಾರೆ’ ಎಂದು ವಿವರಿಸಿದರು.

‘ರಾಜಕೀಯ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಜೈನ ಸಮುದಾಯ ಸಾಕಷ್ಟು ಕೊಡುಗೆ ನೀಡಿದೆ.  ಅಹಿಂಸೆ ಮತ್ತು ಸತ್ಯದ ಮೂಲಕ ಸ್ವಾತಂತ್ರ್ಯ ಚಳವಳಿಗೂ ನಾಂದಿ ಹಾಡಿದೆ’ ಎಂದರು.

ಹರಿಕಥಾ ವಿದ್ವಾನ್ ಎನ್.ಆರ್.ಜ್ಞಾನಮೂರ್ತಿ 24ನೇ ತೀರ್ಥಂಕರ ವರ್ಧಮಾನ ಮಹಾವೀರರ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಜೈನ ಸಮುದಾಯದವರು ನಗರದ ಪ್ರಮುಖ ರಸ್ತೆಗಳಲ್ಲಿ ಮಹಾವೀರರ ಭಾವಚಿತ್ರದ ಮೆರವಣಿಗೆ ನಡೆಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ, ಕನ್ನಡ ಮತ್ತು ಸಂಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂದೆ, ಜೈನ ಸಮುದಾದಯ ಮುಖಂಡರಾದ ಮೀಠಾಲಾಲ್ ಹಾಜರಿದ್ದರು.

ಮಾಂಸ ಮಾರಾಟಕ್ಕೆ ಖಂಡನೆ
ಮಹಾವೀರ ಜಯಂತಿ ದಿನ  ಮಾಂಸ ಮಾರಾಟ ಸ್ಥಗಿತ ಮಾಡಬೇಕು ಎನ್ನುವ ಆದೇಶವಿದ್ದರೂ ಭಾನುವಾರ ದಂದು ಎಂದಿನಂತೆಯೇ ನಗರದಲ್ಲಿ ಮಾಂಸ ಮಾರಾಟ ನಡೆಯಿತು. ಮಾಂಸ ಮಾರಾಟದ ಅಂಗಡಿಗಳನ್ನು ಮುಚ್ಚಿಸುವುದಕ್ಕೆ ನಗರ ಸಭೆಯ ಅಧಿಕಾರಿಗಳು ಮುಂದಾಗಲಿಲ್ಲ. ಜೈನ ಮುಖಂಡರು ಅಧಿಕಾರಿಗಳ ಧೋರಣೆ ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT