ADVERTISEMENT

ಸಮಸ್ಯೆಗಳಿಂದ ನಲುಗುತ್ತಿರುವ ರಹಮತ್‌ನಗರ

33ನೇ ವಾರ್ಡ್ ವ್ಯಾಪ್ತಿಯಲ್ಲಿ ಸಮಸ್ಯೆಗಳ ಸರಮಾಲೆ, ಹಂದಿಗಳ ಕಾಟ, ದುರ್ನಾತ ಬೀರು ತ್ಯಾಜ್ಯ

ಜೆ.ಆರ್ ಗಿರೀಶ್
Published 10 ಏಪ್ರಿಲ್ 2017, 4:45 IST
Last Updated 10 ಏಪ್ರಿಲ್ 2017, 4:45 IST
ಕೋಲಾರದ 33ನೇ ವಾರ್ಡ್‌ ವ್ಯಾಪ್ತಿಯ ರಹಮತ್‌ನಗರ ಬಡಾವಣೆಯ ಚರಂಡಿಯೊಂದರಲ್ಲಿ ಕಸ ತುಂಬಿಕೊಂಡಿರುವುದು
ಕೋಲಾರದ 33ನೇ ವಾರ್ಡ್‌ ವ್ಯಾಪ್ತಿಯ ರಹಮತ್‌ನಗರ ಬಡಾವಣೆಯ ಚರಂಡಿಯೊಂದರಲ್ಲಿ ಕಸ ತುಂಬಿಕೊಂಡಿರುವುದು   

ಕೋಲಾರ: ಜೀವಜಲಕ್ಕೆ ತತ್ವಾರ... ಕಣ್ಣು ಹಾಯಿಸಿದಲ್ಲೆಲ್ಲ ಕಸದ ರಾಶಿ.... ಚರಂಡಿ ತುಂಬಿ ಮನೆಗೆ ನುಗ್ಗುತ್ತಿರುವ ಕೊಳಚೆ ನೀರು... ವಿಲೇವಾರಿಯಾಗದೆ ದುರ್ನಾತ ಬೀರುತ್ತಿರುವ ತ್ಯಾಜ್ಯ... ಹಾದಿ ಬೀದಿಯಲ್ಲಿ ನಾಯಿ ಹಂದಿಗಳ ಕಾಟ....

ಇದು ನಗರದ 33ನೇ ವಾರ್ಡ್ ವ್ಯಾಪ್ತಿಯ ರಹಮತ್‌ನಗರ ಬಡಾವ ಣೆಯ ದುಸ್ಥಿತಿ. ನೀರು, ಕಸ, ಚರಂಡಿ ಸ್ವಚ್ಛತೆ ಹೀಗೆ ಪಟ್ಟಿ ಮಾಡಿದರೆ ಸಮಸ್ಯೆಗಳ ಸರಮಾಲೆಯೇ ಇಲ್ಲಿದೆ. ಮೂಲಸೌಕರ್ಯ ಸಮಸ್ಯೆಯ ನಡುವೆ ಬದುಕು ಸಾಗಿಸುತ್ತಿರುವ ಸ್ಥಳೀಯರ ಗೋಳು ಹೇಳತೀರದು.

ಈ ವಾರ್ಡ್‌ ವ್ಯಾಪ್ತಿಯಲ್ಲಿ ಸುಮಾರು 1,500 ಮನೆಗಳಿವೆ. ಜನಸಂಖ್ಯೆ 4,000 ದಾಟಿದ್ದು, ದಿನದಿಂದ ದಿನಕ್ಕೆ ಮನೆಗಳ ಸಂಖ್ಯೆ ಹೆಚ್ಚುತ್ತಿದೆ. ಸ್ಥಳೀಯ ವಾರ್ಡ್‌ ಸದಸ್ಯರು ಹಾಗೂ ನಗರಸಭೆ ಅಧಿಕಾರಿಗಳು ಬಡಾವಣೆಯ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದು, ಸ್ಥಳೀಯರ ಅಳಲು ಕೇಳುವವರಿಲ್ಲ.

ನಗರದ ಇತರೆ ವಾರ್ಡ್‌ಗಳಂತೆ ರಹಮತ್‌ ನಗರದಲ್ಲೂ ನೀರಿನ ಸಮಸ್ಯೆ ಗಂಭೀರವಾಗಿದೆ. ವಾರ್ಡ್‌ನ ಆರು ಕೊಳವೆ ಬಾವಿಗಳ ಪೈಕಿ ನಾಲ್ಕರಲ್ಲಿ ನೀರು ಬತ್ತಿದೆ. ಹೀಗಾಗಿ ಎರಡು ಕೊಳವೆ ಬಾವಿಗಳಿಂದ ಇಡೀ ವಾರ್ಡ್‌ಗೆ ನೀರು ಪೂರೈಸಬೇಕಾದ ಪರಿಸ್ಥಿತಿ ಎದುರಾಗಿದೆ. ವಾರ್ಡ್‌ನ ಕೆಲ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ.

ಆದರೆ, ಕೊಳವೆ ಬಾವಿಗಳ ನೀರು ಸಾಕಾಗದ ಕಾರಣ ನಗರಸಭೆ ವತಿಯಿಂದ ಟ್ಯಾಂಕರ್‌ ಮೂಲಕ 15 ದಿನಕ್ಕೊಮ್ಮೆ ಬಡಾವಣೆಗೆ ಉಚಿತವಾಗಿ 20 ಬಿಂದಿಗೆ ನೀರು ಕೊಡಲಾಗುತ್ತಿದೆ. ಕೆಲ ಮನೆಗಳಲ್ಲಿ ನಲ್ಲಿಗಳಿಗೆ ನಿಯಮಬಾಹಿರವಾಗಿ ಮೋಟರ್‌ ಅಳವಡಿಸಿಕೊಂಡಿರುವುದರಿಂದ ಅಕ್ಕಪಕ್ಕದ ಮನೆಗಳ ನಲ್ಲಿಗಳಲ್ಲಿ ನೀರು ಬರುತ್ತಿಲ್ಲ.

ಹೀಗಾಗಿ ಸ್ಥಳೀಯರು ಖಾಸಗಿ ಟ್ಯಾಂಕರ್‌ ಮಾಲೀಕರಿಗೆ ಹಣ ಕೊಟ್ಟು ನೀರು ಖರೀದಿಸುವಂತಾಗಿದೆ. ಒಂದು ಟ್ಯಾಂಕರ್‌ ಲೋಡ್‌ ನೀರಿನ ದರ ₹ 500 ಇದ್ದು, ಸ್ಥಳೀಯರು ತಮ್ಮ ದುಡಿಮೆಯ ಬಹುಪಾಲು ಹಣವನ್ನು ನೀರಿಗೆ ಖರ್ಚು ಮಾಡುವಂತಾಗಿದೆ,

ಮನೆಗೆ ಕೊಳಚೆ ನೀರು: ವಾರ್ಡ್‌ನ ಬಹುಪಾಲು ಚರಂಡಿಗಳನ್ನು ಏಳೆಂಟು ತಿಂಗಳಿಂದ ಸ್ವಚ್ಛಗೊಳಿಸಿಲ್ಲ. ಇದರಿಂದ ಚರಂಡಿಗಳಲ್ಲಿ ಕಸ ಕಟ್ಟಿಕೊಂಡಿದ್ದು, ಕೊಳಚೆ ನೀರಿನ ಹರಿವಿಗೆ ಅಡ್ಡಿಯಾಗಿದೆ. ಮತ್ತೊಂದೆಡೆ ಮ್ಯಾನ್‌ಹೋಲ್‌ ಮತ್ತು ಯುಜಿಡಿ ಪೈಪ್‌ಗಳು ಹಾಳಾಗಿದ್ದು, ಮನೆ ಗಳ ನಲ್ಲಿಗಳಲ್ಲಿ ಚರಂಡಿ ಹಾಗೂ ಮ್ಯಾನ್‌ ಹೋಲ್‌ನ ಕೊಳಚೆ ನೀರು ಬರುತ್ತಿದೆ.

ಮ್ಯಾನ್‌ಹೋಲ್‌ ಮುಚ್ಚಳಗಳು ಹಾಳಾಗಿ ವರ್ಷವೇ ಕಳೆದರೂ ಅವುಗಳನ್ನು ಬದಲಿಸಿಲ್ಲ. ಕೆಲವೆಡೆ ಮ್ಯಾನ್‌ಹೋಲ್‌ ಗಳಿಗೆ ಮುಚ್ಚಳಗಳೇ ಇಲ್ಲ. ಮನೆಗಳ ತೊಟ್ಟಿಯ ನೀರಿನಲ್ಲಿ ಹುಳುಗಳು ಉತ್ಪತ್ತಿಯಾಗಿ ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ.

ಹಳಿ ತಪ್ಪಿದೆ: ವಾರ್ಡ್‌ನಲ್ಲಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಸಂಪೂರ್ಣ ಹಳಿ ತಪ್ಪಿದೆ. ಪೌರ ಕಾರ್ಮಿಕರು ಪ್ರತಿನಿತ್ಯ ಮನೆ ಬಳಿ ಬಂದು ಕಸ ಸಂಗ್ರಹಿಸುತ್ತಿಲ್ಲ. ಹೀಗಾಗಿ ಸ್ಥಳೀಯರು ರಸ್ತೆಯ ಅಕ್ಕಪಕ್ಕ, ಚರಂಡಿಗಳ ಪಕ್ಕ ಹಾಗೂ ಖಾಲಿ ನಿವೇಶ ನಗಳಲ್ಲಿ ಕಸ ಎಸೆಯುತ್ತಿದ್ದಾರೆ. ಕಸ ಚರಂಡಿ, ರಸ್ತೆಗಳಿಗೆ ಹರಡಿ ಕೊಂಡಿದ್ದು, ಇಡೀ ಪ್ರದೇಶ ಕೊಳೆಗೇರಿ ಯಂತಾಗಿದೆ.

ವಾರ್ಡ್‌ನ ವಿವಿಧೆಡೆ ರಾಶಿಯಾಗಿರುವ ಬಿದ್ದಿರುವ ಕಸದ ತೆರವಿಗೆ ಪೌರ ಕಾರ್ಮಿ ಕರು ಕ್ರಮ ಕೈಗೊಂಡಿಲ್ಲ. ಇದರಿಂದ ಕಸ ಸ್ಥಳದಲ್ಲೇ ಕೊಳೆತು ದುರ್ನಾತ ಬೀರುತ್ತಿದೆ. ಕಸದ ರಾಶಿಯಿಂದ ಸೊಳ್ಳೆ, ನೊಣ, ಹಂದಿ ಹಾಗೂ ಬೀದಿ ನಾಯಿಗಳ ಕಾಟ ಹೆಚ್ಚಿದೆ. ಒಟ್ಟಾರೆ ಮೂಲಸೌಕರ್ಯ ಸಮಸ್ಯೆಯಿಂದ ವಾರ್ಡ್‌ ಜನರ ಬದುಕು ನರಕ ಸದೃಶವಾಗಿದೆ.

*
ಇಬ್ಬರೇ ಕಾರ್ಮಿಕರು ವಾರ್ಡ್‌ ನಲ್ಲಿ ಕಸ ಸಂಗ್ರಹ, ಚರಂಡಿ ಸ್ವಚ್ಛತೆ  ನಿರ್ವಹಿಸ ಬೇಕಿದೆ. ಹೆಚ್ಚಿನ ಕಾರ್ಮಿಕರನ್ನು ನಿಯೋಜಿಸುವಂತೆ ಮನವಿ ಮಾಡಿ ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.
-ಮಹಮ್ಮದ್‌ ಅಸ್ಲಂ, 33ನೇ ವಾರ್ಡ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT