ADVERTISEMENT

ಸಾಮಾಜಿಕ ಮೌಲ್ಯ ಬೆಳೆಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 10:13 IST
Last Updated 8 ಮಾರ್ಚ್ 2017, 10:13 IST

ಕೋಲಾರ: ‘ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಂಡಾಗ ಮಾತ್ರ ಗುರಿ ಮುಟ್ಟಲು ಸಾಧ್ಯ’ ಎಂದು ಮಹಿಳಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯರಾಮ ರೆಡ್ಡಿ ತಿಳಿಸಿದರು.

ತಾಲ್ಲೂಕಿನ ಹೊಳಲಿ ಗ್ರಾಮದಲ್ಲಿ ನಗರದ ಸರ್ಕಾರಿ ಮಹಿಳಾ ಕಾಲೇಜಿ ನಿಂದ ಹಮ್ಮಿಕೊಂಡಿರುವ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಉದ್ಯೋಗಕ್ಕಾಗಿ ಶಿಕ್ಷಣ ಎಂಬ ತಪ್ಪು ಕಲ್ಪನೆ ಇದೆ. ಶಿಕ್ಷಣ ನಿಮ್ಮ ಬದುಕು ರೂಪಿಸುವುದರ ಜತೆಗೆ ಸಾಮಾಜಿಕ, ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಲು ನೆರವಾಗಬೇಕು. ಗ್ರಾಮೀಣ ಜನರ ಪದವಿಗಳನ್ನು ಗಳಿಸದಿದ್ದರೂ, ಅನಕ್ಷರಸ್ಥ ರಾದರೂ, ಅವರು ಮನೆಗೆ ಬಂದವರ ನ್ನು ಸತ್ಕರಿಸುವ ಮನೋಭಾವ, ಹೃದಯ ಶ್ರೀಮಂತಿಕೆ ಸ್ನಾತಕೋತ್ತರ ಪದವಿಗಿಂ ತಲೂ ಹೆಚ್ಚು ಮಹತ್ವದ್ದು’ ಎಂದರು.

‘ಗಾಂಧೀಜಿಯವರ ಶ್ರಮದಾನದ ಕನಸು ಹಳ್ಳಿಗಳಿಂದಲೇ ಆರಂಭವಾಗಿದೆ. ಗ್ರಾಮದ ಅನೇಕ  ಕೆಲಸಗಳನ್ನು ಜನರು ಒಟ್ಟಾಗಿ ಮನೆಗೊಬ್ಬರಂತೆ ಮಾಡುತ್ತಿದ್ದ ಕಾಲ ಮತ್ತೆ ಮರುಕಳಿಸಬೇಕು. ಗ್ರಾಮೀ ಣರಲ್ಲಿ ಶೈಕ್ಷಣಿಕ ಅರಿವು ಮೂಡಿಸಲು ಮುಂದಾಗಬೇಕು’ ಎಂದರು.

ಎನ್‍ಎಸ್‍ಎಸ್ ಶಿಬಿರಾಧಿಕಾರಿ ಪ್ರೊ.ಬೃಂದಾದೇವಿ, ‘ಏಳು ದಿನಗಳ  ಶಿಬಿರದಲ್ಲಿ 150 ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದು, ಗ್ರಾಮದಲ್ಲಿ ಸ್ವಚ್ಚತೆ, ಚರಂಡಿ ಶುದ್ಧೀಕರಣ, ರಸ್ತೆ,ಮನೆಗಳ ಬಳಿ ಗಿಡ ನೆಡುವುದು, ಗ್ರಾಮದ ದೇವಾಲಯಗಳ ಸುತ್ತ ಸ್ವಚ್ಚತಾ ಕಾರ್ಯ, ಗ್ರಾಮೀಣರಲ್ಲಿ ಆರೋಗ್ಯ ಕಾಳಜಿ ಬೆಳೆಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು’ ಎಂದರು.

ಸಮಾಜವಿಜ್ಞಾನ ವಿಭಾಗದ ಮುಖ್ಯಸ್ಥ ಗೋವಿಂದಪ್ಪ, ಪ್ರಾಧ್ಯಾಪಕ ಡಾ.ಎಚ್.ಸಿ .ಮಂಜುನಾಥ್, ಜೀವ ವಿಜ್ಞಾನ ವಿಭಾಗದ ಮುಖ್ಯಸ್ಥ ಅಣ್ಣಪ್ಪ ಪೂಜಾರಿ, ಪ್ರೊ.ರಾಧಮ್ಮ, ಪ್ರೊ.ವಿನುತಾ ಸಮಾರೋಪದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.