ADVERTISEMENT

ಕೆ.ಸಿ ವ್ಯಾಲಿ ಯೋಜನೆ ಪುನರಾರಂಭಕ್ಕೆ ಸಿದ್ಧತೆ

ಮೊದಲ ಭೇಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2018, 11:28 IST
Last Updated 10 ಆಗಸ್ಟ್ 2018, 11:28 IST
ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಕೋಲಾರಕ್ಕೆ ಶುಕ್ರವಾರ ಮೊದಲ ಬಾರಿಗೆ ಭೇಟಿ ನೀಡಿದ ಸಚಿವ ಕೃಷ್ಣಬೈರೇಗೌಡ ಅವರನ್ನು ಶಾಸಕರು ಹಾಗೂ ಕಾಂಗ್ರೆಸ್‌ ಮುಖಂಡರು ಸನ್ಮಾನಿಸಿ ಸ್ವಾಗತ ಕೋರಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಕೋಲಾರಕ್ಕೆ ಶುಕ್ರವಾರ ಮೊದಲ ಬಾರಿಗೆ ಭೇಟಿ ನೀಡಿದ ಸಚಿವ ಕೃಷ್ಣಬೈರೇಗೌಡ ಅವರನ್ನು ಶಾಸಕರು ಹಾಗೂ ಕಾಂಗ್ರೆಸ್‌ ಮುಖಂಡರು ಸನ್ಮಾನಿಸಿ ಸ್ವಾಗತ ಕೋರಿದರು.   

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯಕ್ಕೆ ಸತ್ಯಾಂಶ ಮನವರಿಕೆ ಮಾಡಿಕೊಟ್ಟು ಯೋಜನೆ ಪುನರಾರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಶುಕ್ರವಾರ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೆ.ಸಿ ವ್ಯಾಲಿ ಯೋಜನೆ ನೀರನ್ನು 2 ಹಂತದಲ್ಲಿ ಸಂಸ್ಕರಿಸಿ ಜಿಲ್ಲೆಗೆ ಹರಿಸಲಾಗಿತ್ತು. ನೀರನ್ನು 3ನೇ ಹಂತದಲ್ಲಿ ಸಂಸ್ಕರಿಸಬೇಕೆಂಬುದು ಜನರ ಬೇಡಿಕೆಯಾಗಿದೆ. ಮುಂದಿನ ದಿನಗಳಲ್ಲಿ 3ನೇ ಹಂತದ ಸಂಸ್ಕರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ನ ನಿಯಮಾವಳಿ ಪ್ರಕಾರ ಕೆ.ಸಿ ವ್ಯಾಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಯೋಜನೆ ಜಾರಿಯಲ್ಲಿ ಯಾವುದೇ ಮಾನದಂಡ ಉಲ್ಲಂಘಿಸಿಲ್ಲ. ಬೆಂಗಳೂರಿನಿಂದ ಜಿಲ್ಲೆಗೆ ನೀರು ಹರಿದಿದ್ದು, ನೊರೆ ಕಾಣಿಸಿಕೊಂಡ ಒಂದೇ ಕಾರಣಕ್ಕೆ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ’ ಎಂದರು.

ADVERTISEMENT

‘ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಪರಿಸರ ಮಂಡಳಿಯವರು ಬೆಂಗಳೂರಿನ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ ವರದಿ ನೀಡಿದ ನಂತರವಷ್ಟೇ ತಜ್ಞರ ಸಮಿತಿ ರಚಿಸಿ ಯೋಜನೆ ಕೈಗೆತ್ತಿಕೊಳ್ಳಲಾಯಿತು. ಅಂತರ್ಜಲ ವೃದ್ಧಿಸುವುದು ಯೋಜನೆಯ ಪ್ರಮುಖ ಉದ್ದೇಶ. ಯೋಜನೆ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸುವ ಚಿಂತನೆಯಿಲ್ಲ. ಆದರೂ ಕೆಲವರು ತಪ್ಪು ಮಾಹಿತಿ ನೀಡಿ ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಭಿವೃದ್ಧಿಗೆ ಶ್ರಮಿಸುತ್ತೇನೆ: ‘ಸರ್ಕಾರ ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ವಹಿಸಿದೆ. ಜತೆಗೆ ಕಾನೂನು ಸಂಸದೀಯ ಹಾಗೂ ಪಂಚಾಯತ್‌ರಾಜ್ ಇಲಾಖೆ ಸಚಿವ ಸ್ಥಾನ ನೀಡಿದೆ. ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತೇನೆ’ ಎಂದು ತಿಳಿಸಿದರು.

‘ಹಿಂದಿನ ಸರ್ಕಾರದಲ್ಲಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಜಿಲ್ಲೆಯ ಸಮಸ್ಯೆಗಳ ಅರಿವಿದ್ದು, ಎರಡೂ ಪಕ್ಷಗಳ ಶಾಸಕರ ಸಹಕಾರದಿಂದ ಜಿಲ್ಲೆಯ ಆಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುತ್ತೇನೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ತೊಡಕು ನಿವಾರಣೆ: ‘ಜೆಡಿಎಸ್– ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯ ಆರಂಭದಲ್ಲಿ ಎದುರಾಗಿದ್ದ ತೊಡಕುಗಳೆಲ್ಲಾ ನಿವಾರಣೆಯಾಗಿವೆ. ಈಗ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸರ್ಕಾರ ಸಮನ್ವಯದಿಂದ ನಡೆಯುತ್ತಿದೆ’ ಎಂದು ವಿವರಿಸಿದರು.

‘ಮದುವೆಯಾದ ಆರಂಭದ ದಿನಗಳಲ್ಲಿ ಗಂಡ ಹೆಂಡತಿ ಪರಸ್ಪರ ಅರ್ಥ ಮಾಡಿಕೊಂಡಿರುವುದಿಲ್ಲ. ಹೀಗಾಗಿ ಸಂಸಾರದಲ್ಲಿ ಏಳು ಬೀಳು ಸಹಜ. ಅದೇ ರೀತಿ ಸರ್ಕಾರದ ಮೈತ್ರಿ ಪಕ್ಷಗಳ ನಡುವೆ ಗೊಂದಲಗಳಿದ್ದವು. ಈಗ ಅದೆಲ್ಲಾ ಸರಿ ಹೋಗಿದೆ. ಏನೇ ತೀರ್ಮಾನ ಕೈಗೊಳ್ಳಬೇಕಾದರೂ ಸಮನ್ವಯ ಸಮಿತಿ ನಿರ್ಧಾರದಂತೆ ನಡೆಯುತ್ತದೆ’ ಎಂದು ಸ್ಪಷ್ಟಪಡಿಸಿದರು.

ಕಾಲಾವಕಾಶ ಬೇಕಾಯಿತು: ‘ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಆಗಿರುವುದರಿಂದ ಅದರ ಕಾರ್ಯ ವೈಖರಿಯೇ ಬೇರೆಯಿದೆ. ಜೆಡಿಎಸ್ ಪ್ರಾದೇಶಿಕ ಪಕ್ಷವಾದ ಕಾರಣ ಅದರ ಕಾರ್ಯ ವೈಖರಿಯೇ ಬೇರೆ. ಎರಡೂ ಪಕ್ಷಗಳ ಮುಖಂಡರು ಪರಸ್ಪರ ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಾಲಾವಕಾಶ ಬೇಕಾಯಿತು’ ಎಂದು ಹೇಳಿದರು.

‘ಜನ ಚುನಾವಣೆಯಲ್ಲಿ ಜೆಡಿಎಸ್‌ಗೆ ನಿರೀಕ್ಷಿತ ಮಟ್ಟದಲ್ಲಿ ಮತ ನೀಡಿಲ್ಲ. ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿಲ್ಲವೆಂಬ ಬೇಸರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿರಬಹುದು. ಆದರೆ, ಅವರ ಬೇಸರಕ್ಕೆ ಕಾಂಗ್ರೆಸ್‌ನವರೇ ಕಾರಣವೆಂದು ಬಿಂಬಿಸಲಾಗಿದೆ. ಇದು ಸರಿಯಲ್ಲ. ಕುಮಾರಸ್ವಾಮಿ ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ನಾಗೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋದಾ, ಜಿಲ್ಲಾಧಿಕಾರಿ ಜಿ.ಮಂಜುನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.