ADVERTISEMENT

ಅಧಿಕಾರ ದುರುಪಯೋಗವೂ ಅಪರಾಧ

ಅಂಚೆ ನೌಕರರ ಸಂಘದ ಚಿಂತನ–ಮಂಥನ ಸಭೆಯಲ್ಲಿ ಚಂದ್ರಶೇಖರ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 7:03 IST
Last Updated 30 ಜನವರಿ 2017, 7:03 IST
ಅಧಿಕಾರ ದುರುಪಯೋಗವೂ ಅಪರಾಧ
ಅಧಿಕಾರ ದುರುಪಯೋಗವೂ ಅಪರಾಧ   
ಕೊಪ್ಪಳ:ಅಂಚೆ ಇಲಾಖೆಯಲ್ಲಿ ಲಂಚಗುಳಿತನ, ಭ್ರಷ್ಟಾಚಾರವಿಲ್ಲ. ಆದರೆ ಇಲ್ಲಿನ ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಳ್ಳುವುದು ಭ್ರಷ್ಟಾಚಾರ ಮಾಡುವುದಕ್ಕಿಂತಲೂ ದೊಡ್ಡ ಅಪರಾಧ ಎಂದು ಅಖಿಲ ಭಾರತ ಅಂಚೆ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಅಭಿಪ್ರಾಯಪಟ್ಟರು.
 
ನಗರದ ಜ.ಚ.ನಿ ಭವನದಲ್ಲಿ ಭಾನುವಾರ ಜಿಲ್ಲೆಯಲ್ಲಿ ವಿಭಾಗೀಯ ಅಂಚೆ ಕಚೇರಿ ಪ್ರಾರಂಭದ ಒತ್ತಾಯಕ್ಕಾಗಿ ನಡೆದ ಚಿಂತನ–ಮಂಥನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
 
ಅಂಚೆ ಇಲಾಖೆ ನ್ಯೂನತೆಗಳ ಕುರಿತು ಈ ರೀತಿಯ ಸಭೆ ಕರೆದಿರುವುದು ಸ್ವಾಗತಾರ್ಹ. ಕೊಪ್ಪಳ ಜಿಲ್ಲೆಯಾಗಿ 20 ವರ್ಷ ಕಳೆದರೂ ಇಲ್ಲಿ ವಿಭಾಗೀಯ ಅಂಚೆ ಕಚೇರಿ ಇಲ್ಲ. ಹೈದರಾಬಾದ್‌ ಕರ್ನಾಟಕ ಭಾಗ ಸರ್ಕಾರದ ಅಸಡ್ಡೆಯಿಂದ ಹಿಂದುಳಿದಿದೆ. ಜಿಲ್ಲೆಯಲ್ಲಿ ಪ್ರತ್ಯೇಕ ವಿಭಾಗೀಯ ಅಂಚೆ ಕಚೇರಿ ಪ್ರಾರಂಭಿಸುವ ಕುರಿತು ಮೇಲ್ಮಟ್ಟದ ಅಧಿಕಾರಿಗಳು ತಾಂತ್ರಿಕ ಕಾರಣ ಒಡ್ಡಿ ಕಚೇರಿ ಆರಂಭ ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಆದರೆ ಇಲ್ಲಿನ ಸಾರ್ವಜನಿಕರು ಮನಸ್ಸು ಮಾಡಿದರೆ ಹೋರಾಟದ ಮೂಲಕ ವಿಭಾಗೀಯ ಕಚೇರಿ ಪ್ರಾರಂಭಿಸಬಹುದು. ಅಧಿಕಾರಿಗಳು ತಮ್ಮ ಅನುಕೂಲಕ್ಕಾಗಿ ಅಂಚೆ ಇಲಾಖೆಯ ವಿಕೇಂದ್ರೀಕರಣ ಮಾಡುತ್ತಿಲ್ಲ. ಕೇಂದ್ರೀಕರಣದಿಂದ ಸಿಬ್ಬಂದಿಗಳು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಇಲ್ಲಿನ ಅಂಚೆ ಕಚೇರಿಗಳಲ್ಲಿ ನಾಲ್ವರು ಮಾಡುವ ಕೆಲಸವನ್ನು ಇಬ್ಬರು ದಿನದ 10 ರಿಂದ 12 ಗಂಟೆ ಕಾಲ ನಿರ್ವಹಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.  
 
ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ, ನಿರಂತರ ಹೋರಾಟಕ್ಕೆ ಹೆಸರಾಗಿರುವ ನಾವು ಜಿಲ್ಲೆಯಲ್ಲಿ ವಿಭಾಗೀಯ ಅಂಚೆ ಕಚೇರಿ ಇಲ್ಲ ಎನ್ನುವ ಪರಿಜ್ಞಾನವಿಲ್ಲದೆ ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದೇವೆ. ಜನರಿಗೆ ವಿವಿಧ ಕಡೆಯಿಂದ ಬರುವ ಆಹ್ವಾನ ಪತ್ರಿಕೆಗಳು, ಸಭಾ ಕಾರ್ಯಕ್ರಮದ ಪತ್ರಿಕೆಗಳು  ಸಭೆ ಅಥವಾ ಕಾರ್ಯಕ್ರಮ ಮುಗಿದ ಮೇಲೆ ಗ್ರಾಹಕರ ಸೇರುತ್ತಿವೆ. ಇದಕ್ಕೆ ಅಂಚೆ ಕಚೇರಿಯ ಹಲವು ಸಮಸ್ಯೆಗಳು ಕಾರಣ. ನಾಗರಿಕರಾಗಿ ನಮ್ಮ ಜವಾಬ್ದಾರಿಗಳು ಏನು ಎನ್ನುವುದನ್ನು ನಾವು ಮೊದಲು ಅರಿತುಕೊಳ್ಳಬೇಕು. ಇಲ್ಲಿನ ಜನಪ್ರತಿನಿಧಿಗಳಿಗೆ ಈ ಬಗ್ಗೆ ಚಿಂತನೆ ಇಲ್ಲವಾಗಿದೆ. ಸರ್ಕಾರಗಳ ನಿರ್ಲಕ್ಷ್ಯಕ್ಕೆ ಒಳಗಾದ ಜಿಲ್ಲೆಯ ಜನರು ಇಂದು ಮಲತಾಯಿ ಧೋರಣೆ ಎದುರಿಸುತ್ತಿದ್ದೇವೆ. ಇದನ್ನು ಪ್ರಶ್ನಿಸುವ ನಿಟ್ಟಿನಲ್ಲಿ ಧರಣಿ  ಹಮ್ಮಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಬೇಕು ಎಂದರು.
 
ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ವಿಠ್ಠಪ್ಪ ಗೋರಂಟ್ಲಿ, ಡಾ.ಮಹಾಂತೇಶ ಮಲ್ಲನಗೌಡರ, ಎ.ಎಂ.ಮದರಿ, ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ, ಸಿ.ವಿ.ಜಡಿಯವರ, ಬಸವರಾಜ ಆಕಳವಾಡಿ, ನಿರ್ಮಲಾ ಬಳ್ಳೊಳ್ಳಿ, ಹೇಮಲತಾ ನಾಯಕ್‌, ಸಂಗಮೇಶ ಡಂಬಳ, ಶಿವಾನಂದ ಹೊದ್ಲೂರು, ಸಾವಿತ್ರಿ ಮುಜುಂದಾರ್‌, ಹನುಮಂತಪ್ಪ ಅಂಡಗಿ ಇದ್ದರು. ಲಕ್ಷ್ಮೀನಾರಾಯಣ ಪ್ರಾರ್ಥಿಸಿದರು. ಬಿ.ವಿ.ಅಂಗಡಿ ಸ್ವಾಗತಿಸಿದರು. ಜಿ.ಎಲ್‌.ಹಳ್ಳಿ ನಿರೂಪಿಸಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.