ADVERTISEMENT

ಕುಮಾರರಾಮನ ಜಾತ್ರೆ ಇಂದಿನಿಂದ

​ಪ್ರಜಾವಾಣಿ ವಾರ್ತೆ
Published 19 ಮೇ 2017, 6:28 IST
Last Updated 19 ಮೇ 2017, 6:28 IST

ಗಂಗಾವತಿ: ಸಾಂಸ್ಕೃತಿಕ ಮೇರುಪುರುಷ ಹಾಗೂ ಗಂಡುಗಲಿ ಎಂಬ ಬಿರುದಾಂಕಿತ ಇಲ್ಲಿಗೆ ಸಮೀಪದ ಕುಮ್ಮಟದುರ್ಗದ ಕುಮಾರರಾಮನ ಜಾತ್ರಾ ಮಹೋತ್ಸವ ಮೇ 19ರಿಂದ ಆರಂಭವಾಗಲಿದೆ. ಅಂದು ಇಂದ್ರಗಿಯಲ್ಲಿ ಕುಮಾರರಾಮನ ಪ್ರತಿಕೃತಿಗಳನ್ನು ಇಟ್ಟು ಹೋಲಿಕೆ ರಾಮ ಎಂದು ಜನ ಗ್ರಾಮದಲ್ಲಿ ಮೆರವಣಿಗೆ ಮಾಡುವ ಮೂಲಕ ಜಾತ್ರೆ ಆರಂಭಿಸುತ್ತಾರೆ.

ಬಳಿಕ ಕುಮ್ಮಟದುರ್ಗದಲ್ಲಿರುವ ಕುಮಾರರಾಮನ ಕೋಟೆಯ ಅವಶೇಷಗಳಲ್ಲಿನ ದೇಗುಲಗಳಲ್ಲಿ ಮೇ 20ರಂದು (ಆಗಿ ಹುಣ್ಣಿಮೆಯ ಎಂಟನೇ ದಿನಕ್ಕೆ) ಜಾತ್ರೆ ಆಚರಿಸಲಾಗುತ್ತದೆ. ಪಾಳೆಗಾರರಾದ ಮುಮ್ಮಡಿ ಸಿಂಗನಾಯಕ ಕಂಪಲಿರಾಯ, ಕುಮಾರರಾಮ (ರಾಮಸ್ವಾಮಿ) ಮತ್ತು ಹೋಲಿಕೆರಾಮ (ಹಕ್ಕ-ಬುಕ್ಕರ ತಂದೆ ಸಂಗಮದೇವ) ಸಹಚಾರರ ತಲೆಗಳಿಗೆ ವಿಶೇಷ ಪೂಜೆ, ಮೆರವಣಿಗೆ ಮಾಡಲಾಗುತ್ತದೆ.

ಕೊಪ್ಪಳ ಸುತ್ತಲಿನ ಜಿಲ್ಲೆಗಳಿಂದ ಜನ ಹೆಚ್ಚಾಗಿ ಇಲ್ಲಿಗೆ ಬರುತ್ತಾರೆ. ಕೇವಲ ಹಿಂದೂಗಳು ಮಾತ್ರವಲ್ಲ, ಮುಸ್ಲಿಮರೂ ಹೆಚ್ಚಿನ ಸಂಖ್ಯೆಯಲ್ಲಿ ಕುಮಾರರಾಮನ ಜಾತ್ರೆಯಲ್ಲಿ ಪಾಲ್ಗೊಳ್ಳುವುದು ವಿಶೇಷ. ವಾಲ್ಮಿಕಿ ನಾಯಕ ಸಮಾಜವು ಜಾತ್ರೆಯನ್ನು ಹಬ್ಬದಂತೆ ಆಚರಿಸುತ್ತದೆ.

ADVERTISEMENT

ಕೋಟೆಯಲ್ಲಿ ಅಕ್ಕಿದೀಪ ಬೆಳಗುವುದು,  ಶಸಸ್ತ್ರಗಳೊಂದಿಗೆ ಬೇಟೆಗೆ ಹೋಗುವುದು, ನಿರ್ಗೋಳ ತುಳಿಯುವುದು ಬಳಿಕ ಹಂಚುವುದು, ಗಂಗೆಸ್ಥಳಕ್ಕೆ ಹೋಗಿ ಬರುವಂತ ವಿವಿಧ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ವಿಶೇಷ ಎಂದರೆ ಕುಮಾರರಾಮನ ಜಾತ್ರೆಯಲ್ಲಿ ಮಾಡಿದ ಅಕ್ಕಿಪಡಿ ನೈವೇದ್ಯೆಯದ ರೂಪದಲ್ಲಿ ಹುಲಗಿಗೆ ಕೊಂಡೊಯ್ದ ಬಳಿಕವೇ ಐತಿಹಾಸಿಕ ಜಾತ್ರೆಗೆ ಚಾಲನೆ ಸಿಗುತ್ತದೆ.

ಐತಿಹಾಸಿಕ ಹಿನ್ನೆಲೆ:  ಬಳ್ಳಾರಿ ಜಿಲ್ಲೆಯ ಸಂಡೂರು, ಹೊಸಮಲೆ ದುರ್ಗವನ್ನು ಸಾಮ್ರಾಜ್ಯವನ್ನಾಗಿಸಿಕೊಂಡು ಕಂಪಲಿರಾಯ 13ನೇ ಶತಮಾನದಲ್ಲಿ ಆಳ್ವಿಕೆ ನಡೆಸುತ್ತಿದ್ದ. ಆತನ ಮಗನೇ ಕುಮಾರರಾಮ. ಈತ ಕುಮ್ಮಟದುರ್ಗವನ್ನು 2ನೇ ರಾಜಧಾನಿಯನ್ನಾಗಿಸಿಕೊಂಡು ರಾಜ್ಯಭಾರ ಮಾಡುತ್ತಿದ್ದ. ರಾಮನ ಕಾಲದಲ್ಲಿ ಕಾವ್ಯ, ಸಂಸ್ಕೃತಿ, ಜಾನಪದ ಸಾಹಿತ್ಯ ಉತ್ತುಂಗದಲ್ಲಿತ್ತು. ನಾಡದೇವಿ ಭುವನೇಶ್ವರಿಯ ಆರಾಧನೆಯ ಮೂಲಸ್ಥಾನ ಕುಮ್ಮಟದುರ್ಗ ಎಂಬ ವಾದವೂ ಇದೆ.

ಹಂಪಿಯ ವಿಜಯನಗರ ಸಾಮ್ರಾಜ್ಯ ಉದಯಕ್ಕೂ ಮುನ್ನವೇ ಕುಮ್ಮಟದುರ್ಗವನ್ನು ಪಾಳೆಪಟ್ಟಾಗಿಸಿಕೊಂಡು 13ನೇ ಶತಮಾನದಲ್ಲಿ ಕುಮಾರರಾಮ ಆಳ್ವಿಕೆ ನಡೆಸಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಜನಾನುರಾಗಿ ಯೋಜನೆಗಳ ಅನುಷ್ಠಾನ, ನೀರಾವರಿ ಯೋಜನೆ, ಸ್ತ್ರೀಯರ ರಕ್ಷಣೆಯಂತ ವಿಷಯಗಳಲ್ಲಿ ಪ್ರಖ್ಯಾತನಾಗಿದ್ದ. 

ಜನಮಾನಸದಲ್ಲಿ ಉಳಿದು ಜನರಿಂದ ದೇವಸ್ಥಾನ ನಿರ್ಮಿಸಿಕೊಂಡು ಪೂಜಿಸಲ್ಪಡುತ್ತಿರುವ ಏಕೈಕ ಐತಿಹಾಸಿಕ ಪುರುಷ ಕುಮಾರರಾಮ. ಕೊಪ್ಪಳ, ಗಂಗಾವತಿ ಮುಖ್ಯ ರಸ್ತೆಯಿಂದ ಸುಮಾರು 4 ಕಿ.ಮೀ ಅಂತರದಲ್ಲಿರುವ ಬೆಟ್ಟದ ಮೇಲಿನ ವಿಶಾಲವಾದ ಕುಮ್ಮಟದುರ್ಗದಲ್ಲಿ ಜಾತ್ರೆ ನಡೆಯುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.