ADVERTISEMENT

ಕ್ಷಯರೋಗ ಪತ್ತೆಯಲ್ಲಿ ಕೊಪ್ಪಳ ಪ್ರಥಮ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 11:25 IST
Last Updated 24 ಮಾರ್ಚ್ 2018, 11:25 IST

ಕೊಪ್ಪಳ: ರಾಜ್ಯದಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮೂಲಕ ತೀವ್ರತರದ ಕ್ಷಯ ರೋಗ ಪತ್ತೆಹಚ್ಚುವ ಕಾರ್ಯಕ್ರಮವನ್ನು ಮೊದಲ ಬಾರಿಗೆ ಆರಂಭಿಸಿದೆ.

2017ರ ಜುಲೈ 15ರಿಂದ 31ರ ವರೆಗೆ ಮೊದಲ ಹಂತದ‌ಲ್ಲಿ ಕಾರ್ಯಕ್ರಮ 11 ಜಿಲ್ಲೆಗಳಲ್ಲಿ ಮಾಡಲಾಗಿತ್ತು. ಈಗ 2ನೇ ಹಂತದ ಕ್ಷಯರೋಗ ಪತ್ತೆ ಹಚ್ಚುವ ಕಾರ್ಯಕ್ರಮವೂ ಡಿ. 4ರಿಂದ ಆರಂಭವಾಗಿ 18ರಂದು ಮುಕ್ತಾಯವಾಗಿದೆ. ಈ ಸಮೀಕ್ಷೆಯ ಪ್ರಕಾರ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು ಬೆಳಗಾವಿಯಲ್ಲಿ. ಆದರೆ ಜನಸಂಖ್ಯೆಯನ್ನು ಆಧರಿಸಿ ನೋಡುವುದಾದರೆ ಕೊಪ್ಪಳ ಜಿಲ್ಲೆಯಲ್ಲಿ ಅತೀ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ಈ ಪ್ರಕಾರ ಬೆಳಗಾವಿಯಲ್ಲಿ 7,06,911 ಜನಸಂಖ್ಯೆಯಲ್ಲಿ 490 ಪ್ರಕರಣ ಪತ್ತೆಯಾಗಿವೆ. ಆದರೆ ಕೊಪ್ಪಳದಲ್ಲಿ ಕೇವಲ 2,28,508 ಜನಸಂಖ್ಯೆಯಲ್ಲಿ 222 ಪ್ರಕರಣಗಳು ಪ‍ತ್ತೆಯಾಗಿವೆ. ಹಾಗಾಗಿ ಜನಸಂಖ್ಯೆ ಆಧರಿಸಿದರೆ ಕೊಪ್ಪಳ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.  ರಾಮನಗರದಲ್ಲಿ ಕೇವಲ 18 ಪ್ರಕರಣಗಳು ಪತ್ತೆಯಾಗಿವೆ. ಹಾಗಾಗಿ ಈ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ADVERTISEMENT

ಈ ಸಮೀಕ್ಷೆಯೂ ಮೂರು ಹಂತದಲ್ಲಿ ನಡೆದಿದೆ. ಮೊದಲು ಮೈಕ್ರೋಸ್ಕೋಪ್‌, 2ನೇ ಎಕ್ಸ್‌ರೇ, ಮೂರನೆಯದಾಗಿ ಸಿಬಿನೆಟ್‌ ಯಂತ್ರದ ಮೂಲಕ ಪತ್ತೆ ಹಚ್ಚಲಾಗಿದೆ. ಪತ್ತೆಯಾದ ರೋಗಿಗಳಿಗೆ 6ರಿಂದ 9 ತಿಂಗಳ ಕಾಲ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಎರಡು ದಿನಗಳಿಗೊಮ್ಮೆ ಔಷಧಿ ನೀಡಲಾಗುತ್ತಿತ್ತು. ಆದರೆ ಈಗ ದಿನಾಲೂ ಔಷಧ ನೀಡಲಾಗುತ್ತದೆ. ಅಲ್ಲದೆ ಔಷಧಿಯನ್ನು ಆಶಾ ಕಾರ್ಯಕರ್ತೆಯರ ಮುಂದೆ 6 ತಿಂಗಳು ಕಾಲ ಸೇವಿಸಿದರೆ ಕಾರ್ಯಕರ್ತೆಯರಿಗೆ ಗೌರವಧನ ನೀಡಲಾಗುತ್ತದೆ.

ಅನಿಲ್‌ ಬಾಚನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.