ADVERTISEMENT

ಗುಣಮಟ್ಟದ ಬಿತ್ತನೆ ಬೀಜ ವಿತರಣೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2017, 6:58 IST
Last Updated 19 ಡಿಸೆಂಬರ್ 2017, 6:58 IST
ಕೊಪ್ಪಳ ಸಮೀಪ ಬಿತ್ತನೆ ನಿರತ ಮಹಿಳೆಯರು (ಸಾಂದರ್ಭಿಕ ಚಿತ್ರ)
ಕೊಪ್ಪಳ ಸಮೀಪ ಬಿತ್ತನೆ ನಿರತ ಮಹಿಳೆಯರು (ಸಾಂದರ್ಭಿಕ ಚಿತ್ರ)   

ಕೊಪ್ಪಳ: ಸಮೃದ್ಧ ಬೆಳೆಗೆ ಗುಣಮಟ್ಟ ಪ್ರಮಾಣೀಕೃತ ಬಿತ್ತನೆ ಬೀಜ ನೀಡಲು ಕೃಷಿ ಇಲಾಖೆ ಮುಂದಾಗಿದೆ. ಸತತ ಬರಗಾಲದಿಂದ ಸಂಕಟಕ್ಕೊಳಗಾಗಿರುವ ರೈತರಿಗೆ ಹಿಂಗಾರು ಮಳೆ ಸ್ವಲ್ಪ ಭರವಸೆ ಮೂಡಿಸಿದೆ. ಅವರನ್ನು ಉತ್ತೇಜಿಸಲು ಈ ಕ್ರಮಕ್ಕೆ ಇಲಾಖೆ ಮುಂದಾಗಿದೆ.

ಮುಂಗಾರು ಹಂಗಾಮಿನಲ್ಲಿ ಇಲಾಖೆ ವತಿಯಿಂದ ರಿಯಾಯಿತಿ ದರದಲ್ಲಿ ವಿವಿಧ ಬಿತ್ತನೆ ಬೀಜಗಳನ್ನು 'ಬೀಜಗಳ ಪೂರೈಕೆ ಹಾಗೂ ಇತರ ಹೂಡುವಳಿ' ಯೋಜನೆ  ಅಡಿ ವಿತರಿಸಲಾಗಿತ್ತು.

ಸಾಮಾನ್ಯ ರೈತರಿಗೆ ಶೇ 50 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ 75ರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಇದುವರೆಗೆ ವಿತರಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವೀರೇಶ ಹುನಗುಂದ ಮಾಹಿತಿ ನೀಡಿದರು. ಪ್ರಮಾಣಿತ ಹಾಗೂ ಉತ್ತಮ ಗುಣಮಟ್ಟದ ಬಿತ್ತನೆ ಬೀಜವನ್ನು ರೈತರಿಗೆ ಸಕಾಲದಲ್ಲಿ ಒದಗಿಸುವುದು ಈ ಹೊಸ ಯೋಜನೆಯ ಉದ್ದೇಶ.

ADVERTISEMENT

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ಎಲ್ಲಾ ವರ್ಗದ ರೈತರಿಗೆ ಮುಖ್ಯ ಬೆಳೆಗಳ ಹೈಬ್ರಿಡ್, ಅಧಿಕ ಇಳುವರಿ ತಳಿಗಳು ಮತ್ತು ತಳಿಗಳ ಉತ್ತಮ ಗುಣಮಟ್ಟದ ಪ್ರಮಾಣಿತ ಹಾಗೂ ನಿಜ ಚೀಟಿ ಬಿತ್ತನೆ ಬೀಜಗಳನ್ನು ಮುಂಗಾರು, ಹಿಂಗಾರು/ಬೇಸಿಗೆ ಹಂಗಾಮುಗಳಲ್ಲಿ ರಿಯಾಯಿತಿ ದರದಲ್ಲಿ ಸಕಾಲದಲ್ಲಿ ರೈತರಿಗೆ ಒದಗಿಸಿ ಅಧಿಕ ಇಳುವರಿ ಪಡೆಯಲು ನೆರವಾಗುವುದು ಎಂದು ಅವರು ಅಭಿಪ್ರಾಯಪಟ್ಟರು.

ಸಸ್ಯ ಸಂರಕ್ಷಣೆಗೆ ನೆರವು: ಬೆಳೆಗಳಿಗೆ ಬಾಧಿಸುವ ಕೀಟ, ರೋಗ, ಕಳೆಗಳ ನಿರ್ವಹಣೆಗೆ ತುರ್ತು ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿರುವ ಇಲಾಖೆ ಕೀಟನಾಶಕ, ಜೈವಿಕ ಪೀಡೆ ನಾಶಕಗಳನ್ನು ರಿಯಾಯತಿ ದರದಲ್ಲಿ ಒದಗಿಸಲು ಮುಂದಾಗಿದೆ. ಶೇ 50ರ ರಿಯಾಯಿತಿ ದರದಲ್ಲಿ ₹ 500ರವರೆಗಿನ ಕೀಟನಾಶಕಗಳನ್ನು ಇಲಾಖೆ ಒದಗಿಸಲಿದೆ.

ಆದರೆ, ಇದು 2 ಹೆಕ್ಟೇರ್‌ವರೆಗೆ ಮಾತ್ರ ಸೀಮಿತ ಎಂದು ಇಲಾಖೆ ಹೇಳಿದೆ. ಇದರ ಜತೆಗೆ ಧಾನ್ಯಗಳನ್ನು ಇಲಿ, ಹೆಗ್ಗಣಗಳಿಂದ ಸಂರಕ್ಷಿಸಲು 10 ಕ್ವಿಂಟಲ್‌ವರೆಗಿನ ಧಾನ್ಯ ಸಂಗ್ರಹಣಾ ಪೆಟ್ಟಿಗೆಗಳನ್ನು ವಿತರಿಸಲು ಇಲಾಖೆ ಮುಂದಾಗಿದೆ.

ಯುವ ರೈತರು ಅನಕ್ಷರಸ್ಥ ರೈತರಿಗೆ ಕೃಷಿ ಇಲಾಖೆಯ ಸೌಲಭ್ಯಗಳ ಮನವರಿಕೆ ಮಾಡಿಕೊಡಬೇಕು. ಕೃಷಿಯನ್ನು ಒಂದು ಉದ್ಯಮವನ್ನಾಗಿ ಮಾಡಿ ತೋರಿಸಬಹುದು ಎಂದು ವೀರೇಶ್‌ ಹೇಳಿದರು.

* * 

ಜಿಲ್ಲೆಯ ರೈತರಿಗೆ ಕೃಷಿ ಇಲಾಖೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು, ಕೃಷಿಕರು ಹಾಗೂ ರೈತರು ಈ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು.
ವೀರೇಶ ಹುನಗುಂದ,
ಕೃಷಿ ಇಲಾಖೆ ಜಂಟಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.