ADVERTISEMENT

‘ಗುರುಕೃಪೆ; ಉತ್ತಮ ಸಂಸ್ಕಾರ, ನೆಮ್ಮದಿ ಬದುಕು’

​ಪ್ರಜಾವಾಣಿ ವಾರ್ತೆ
Published 12 ಜುಲೈ 2017, 6:30 IST
Last Updated 12 ಜುಲೈ 2017, 6:30 IST

ಮುನಿರಾಬಾದ್‌: ಇಲ್ಲಿಗೆ ಸಮೀಪದ ಹಿಟ್ನಾಳ ಗ್ರಾಮದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಗದಗ ಜಿಲ್ಲೆ ಮುಂಡರಗಿ ಸಂಸ್ಥಾನ ಮಠದ ಡಾ.ಅನ್ನದಾನೇಶ್ವರ ಸ್ವಾಮೀಜಿಯವರಿಗೆ ಭಕ್ತಿಯ ಗುರುವಂದನೆ ಹಾಗೂ ಸಂಗೀತ ಸುಧೆ ಕಾರ್ಯಕ್ರಮ ಸೋಮವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಕೊಪ್ಪಳದ ಶ್ರೀಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳು ಗುರುಪೂರ್ಣಿಮೆ ಪ್ರಯುಕ್ತ ಸ್ವಾಮೀಜಿಯವರಿಗೆ ಭಕ್ತಿಯಿಂದ ಗುರುವಂದನೆ ಸಲ್ಲಿಸಿದರು.

ಹೊಸಪೇಟೆಯ ನಿವೃತ್ತ ಉಪನ್ಯಾಸಕ ಡಾ.ಎಸ್‌.ಶಿವಾನಂದ ಮಾತನಾಡಿ, ‘ಕೊಪ್ಪಳ ಸಂಸ್ಥಾನ ಗವಿಮಠದ ಆಶ್ರಯದಲ್ಲಿ ಸಂಗೀತ ಅಭ್ಯಾಸ ಮಾಡುವ ಮಕ್ಕಳು ಪ್ರತಿ ತಿಂಗಳು ವಿವಿಧ ಗ್ರಾಮಗಳಿಗೆ ತೆರಳಿ ‘ಸ್ವರಸಂಚಾರ’ ಕೈಗೊಳ್ಳುತ್ತಾರೆ. ಅಲ್ಲಿ ಸಂಗೀತದ ಅಲೆ ಎಬ್ಬಿಸುತ್ತಾರೆ. ಇಂಥ ಮಕ್ಕಳು 75 ಸಂವತ್ಸರ ಕಂಡ ನಾಡೋಜ ಪ್ರಶಸ್ತಿ ಪುರಸ್ಕೃತ ಡಾ.ಅನ್ನದಾನೇಶ್ವರ ಸ್ವಾಮೀಜಿ ಅವರನ್ನು ವಂದಿಸುತ್ತಿರವುದು  ಅರ್ಥಪೂರ್ಣ. ‘ಹರಮುನಿದರೆ ಗುರು ಕಾಯ್ವನು’ ಎಂಬಂತೆ ಗುರು ನಮ್ಮೊಳಗಿನ ಉಸಿರಾಗಬೇಕು’ ಎಂದು ಅವರು ತಿಳಿಸದರು.

‘ಮಾನವನನ್ನು ದೇವಮಾನವನನ್ನಾಗಿ ಮಾಡುವ ಶಕ್ತಿ ಗುರುವಿಗೆ ಮಾತ್ರ ಇದೆ. ಅರಿವೇ ಗುರು ಎಂಬಂತೆ ಅರಿವನ್ನು ದಯಪಾಲಿಸುವ ಮೂರ್ತಿಯೇ ಗುರು. ಸ್ವಾಮೀಜಿ ಮುಂಡರಗಿ ಪರಿಸರದಲ್ಲಿ ಸುಮಾರು 30ವಿದ್ಯಾಸಂಸ್ಥೆಗಳು, 5 ವಸತಿ ನಿಲಯಗಳನ್ನು ತೆರೆದು ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ನೀಡುತ್ತಿದ್ದಾರೆ.

ADVERTISEMENT

ಆರೋಗ್ಯಶಿಬಿರ, ಕೃಷಿಗೆ ಪೂರಕ ವಿಚಾರಸಂಕಿರಣ, ಜಾತ್ರೆ, ಸಾಮೂಹಿಕ ವಿವಾಹದಂತಹ ಸಮಾಜಮುಖಿ ಕಾರ್ಯಗಳಲ್ಲಿ ಶ್ರೀಗಳು ತೊಡಗಿ ಕೊಂಡಿದ್ದಾರೆ. ಸಾಹಿತ್ಯಕೃಷಿಯನ್ನೂ ಸ್ವಾಮೀಜಿ ಕೈಗೊಂಡಿದ್ದಾರೆ’ ಎಂದು ಅವರು ಶ್ಲಾಘಿಸಿರು.

ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸ್ವಾಮೀಜಿಗೆ ಗುರುವಂದನೆ ಸಲ್ಲಿಸಿದರು. ಲಿಂ.ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಪ್ರಯುಕ್ತ ‘ನೆನಹು ನಿನಾದ’ ಸಂಗೀತ ಕಾರ್ಯಕ್ರಮ ನಡೆಯಿತು.

ಅನನ್ಯದೇಸಾಯಿ ಹಿಂದೂಸ್ಥಾನಿ ಗಾಯನ, ಸಂಗೀತ ಶಿಕ್ಷಕ ಅಂಬಣ್ಣ ಕೊಪ್ಪರದ ಅವರ ಕೊಳಲುನಾದನ, ರಮೇಶ ಪೂಜಾರ ಅವರಿಂದ ಶ್ರೀಗಳ ವಚನ, ಭಕ್ತಿಗೀತೆಗಳ ಗಾಯನ ನಡೆಯಿತು. ವಿವಿಧ ಕಲಾವಿದರ ಗಾಯನ ಮತ್ತು ಸಂಗೀತವು ಅಲ್ಲಿ ನೆರೆದವರ ಮನಸೊರೆಗೊಳಿಸಿತು.

ಸಂಚಾಲಕ ವೀರೇಶ್‌ ಹಿಟ್ನಾಳ, ವೀಣಾ ಅರಕೇರಿ, ಮೇಘಾ ಮೋರಗೇರಿ, ಶಶಾಂಕ ಅವರಾಧಿ, ಸಂಜಯ್‌, ನಿಶಾಂತ, ಶಿವಶಾಂತಗೌಡ ಸಂಗೀತಸಾಥ್‌ ನೀಡಿದರು. ಮಾಜಿಶಾಸಕ ಕೆ.ಬಸವ ರಾಜ, ಗಣ್ಯರಾದ ಪಂಪಣ್ಣಪಲ್ಲೇದ, ಕೋನಪ್ಪತಾವರಗೆರೆ, ರಾಜಶೇಖರಯ್ಯ, ಗಂಗಾಧರಯ್ಯ, ಪ್ರಭು ರಾಜಪಾಟೀಲ, ರಾಜುಬಂಡಿಹಾಳ ಮತ್ತು ಅಗಳಕೇರಾ, ಹುಲಿಗಿ ಗ್ರಾಮಸ್ಥರು ಪಾಲ್ಗೊಂಡಿದ್ದರು. ಅಂಬಣ್ಣ ಕೊಪ್ಪರದ ಮತ್ತು ವೀರೇಶ್‌ ಹಿಟ್ನಾಳ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.