ADVERTISEMENT

ಚತುರ್ಭಾಷಾ ಪ್ರಭುವಿಗೆ ಒಲಿದ ಸಮ್ಮೇಳನಾಧ್ಯಕ್ಷ ಪಟ್ಟ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 9:11 IST
Last Updated 24 ಮಾರ್ಚ್ 2017, 9:11 IST
ರಂಗಣ್ಣ ಮಾಸ್ತರ
ರಂಗಣ್ಣ ಮಾಸ್ತರ   

ಹನುಮಸಾಗರ: ರಂಗಣ್ಣ ಮಾಸ್ತರ, ಬರೆದ ಸಾಹಿತ್ಯದ ಅರ್ಧ ಭಾಗವಾದರೂ ನಾಡಿಗೆ ಪರಿಚಿತವಾಗಿದ್ದರೆ, ನಾಡಿನ ಪ್ರಸಿದ್ಧ ಸಾಹಿತ್ಯ ಕಲಿಗಳ ಸಾಲಿನಲ್ಲಿ ಇವರೂ ಒಬ್ಬರಾಗಿರುತ್ತಿದ್ದರು. ನಾಡಿಗೆ ತಾವೂ ಪರಿಚಿತವಾಗಲಿಲ್ಲ ಜತೆಗೆ ತಮ್ಮ ಸಾಹಿತ್ಯವೂ ಪರಿಚಯವಾಗಲಿಲ್ಲ.

ಮೂಟೆಗಟ್ಟಲೇ ಬರೆದ ಅವರ ಸಾಹಿತ್ಯ ಮೂಲೆ ಸೇರಿದರೆ ಪರಭಾಷೆಯಲ್ಲಿ ಬರೆದ ಸಾಹಿತ್ಯ ಮಾತ್ರ ಕನ್ನಡ ನಾಡಿನ ಸೀಮೆಯ ಆಚೆ ಕೊಂಚ ಪ್ರಚಾರ ಪಡೆದಿದೆ. ಜೀವನದ ಸಂಧ್ಯಾಕಾಲದಲ್ಲಿರುವ ರಂಗಣ್ಣ ಮಾಸ್ತರ (94) (ರಂಗರಾವ್‌ ನಿಡಗುಂದಿ) ಅವರನ್ನು ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಕೊನೆಗೂ ಅವರ ಸಾಹಿತ್ಯ ಸೇವೆಗೆ ಸಲ್ಲಿಸಿದ ಗೌರವ ಎನ್ನುತ್ತಾರೆ ಸಾಹಿತ್ಯಾಸಕ್ತರು.

ಇವರು ಕುಕನೂರಿನ ರಂಗಣ್ಣ ಮಾಸ್ತರ ಎಂದೇ ಪರಿಚಿತರು. ಶಿಸ್ತುಬದ್ಧ ಜೀವನ ಪದ್ಧತಿ, ಈಜು, ಯೋಗ, ಮಲ್ಲಕಂಬದಂಥ ಆರೋಗ್ಯಕರ ಹವ್ಯಾಸಗಳು ಅವರಿಗಿದೆ. ಕನ್ನಡ, ಹಿಂದಿ, ಸಂಸ್ಕೃತ, ಉರ್ದು ಭಾಷೆಯಲ್ಲಿ ಪ್ರಭುತ್ವ ಸಾಧಿಸಿದ ಈ ರಂಗಣ್ಣ ನಿಂಡಗುಂದಿ ಮಾಸ್ತರ, ಪ್ರಸಿದ್ಧ ಸಾಹಿತಿ ಸಿದ್ದಯ್ಯ ಪುರಾಣಿಕ ಸಮಕಾಲೀನರು. ಕುಕನೂರಿನ ಗುರುಕುಲದಲ್ಲಿಯೇ ಓದಿ ಅಲ್ಲಿಯೇ ಶಿಕ್ಷಕರಾಗಿದ್ದವರು. ಅವರ ಶಿಷ್ಯ ಬಳಗವೂ ದೊಡ್ಡದು.

ವೇದ, ಉಪನಿಷತ್, ಮಂತ್ರ, ಸ್ತೋತ್ರ, ಭಕ್ತಿಗೀತೆ, ಸ್ತುತಿಗಳು... ಹೀಗೆ ಎಲ್ಲವೂ ಸಂಸ್ಕೃತಮಯ. ಈ ಎಲ್ಲ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಬೇಕು. ಜೊತೆಗೆ ತಾವು ಬಲ್ಲ ಇತರ ಭಾಷೆಗಳ ಸಾಹಿತ್ಯವನ್ನು ಕನ್ನಡಕ್ಕೆ ತರಬೇಕು ಎಂಬ ಗುರಿ ಅವರದಾಗಿತ್ತು.

ವಿವಿಧ ಭಾಷೆಯಲ್ಲಿನ ಅಪಾರ ಸಾಹಿತ್ಯವನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಹಾಗೆ ಕನ್ನಡದಲ್ಲಿನ ಅಪಾರ ಸಾಹಿತ್ಯ ಉರ್ದು, ಮರಾಠಿ, ಹಿಂದಿ ಭಾಷೆಗೆ ಇವರ ಬರವಣಿಗೆಯ ಮೂಲಕ ಹರಿದು ಹೋಗಿದೆ.

ಕೃತಿಗಳು: ಏಳು ದಶಕಗಳ ಈ ಅವಧಿಯಲ್ಲಿ ಹಿಂದಿ ಭಾಷೆಯಿಂದ ಸತ್ಕಥಾ ಮಂಜರಿ, ಕರ್ಮಫಲ (ಗದ್ಯ), ಪಂಚವಟಿ, ಬಾಳಲರಿಯನು ಭಿರುವು, ಪ್ರಸ್ಥಾನ (ಪದ್ಯ) ಸಂಕಲನಗಳು ಅವರಿಂದ ಕನ್ನಡಕ್ಕೆ ಅನುವಾದಿತ ಕೃತಿಗಳು. ಸಂಸ್ಕೃತ ಭಾಷೆಯಿಂದ ಆತ್ಮಸಿದ್ಧಿ, ಕಲ್ಯಾಣ ಮಂದಿರ ಸ್ತೋತ್ರಂ, ಹರಿಪಾಠ, ಮುಕುಂದ ಮಾಲಾ, ತುಳಸಿದಾಸರ ಹನುಮಾನ ಚಾಲೀಸಾ, ಶಂಕರ, ಮಧ್ವ, ರಾಮಾನುಜರ ಹಲವಾರು ಸ್ತೋತ್ರಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕನ್ನಡದಿಂದ ಹಿಂದಿ ಹಾಗೂ ಉರ್ದು ಭಾಷೆಗೆ ಪೈದಾ ಹುವೆ ಕಿಂವ್, ಸುನೆ ಕೌನ್ ಹಮಾರಿ, ರಾಮ ಕಹಾನಿ, ಮೇರಿ ಸಜನಿ, ತನ್ ತುಮ್ಹಾರಾ, ಮನ್ ತುಮ್ಹಾರಾ, ಶೀಲಾಭೇರಿ, ಸುಬಹ ಇವು ರಂಗಣ್ಣ ಮಾಸ್ತರ ಅನುವಾದಿಸಿದ ಕೃತಿಗಳಲ್ಲಿ ಮಹತ್ವವಾದವುಗಳಾಗಿವೆ. ಇತ್ತೀಚೆಗೆ ಹೊರಬಂದ ಎರಡು ನೂರು ಪುಟದ ವಿಷ್ಣು, ಶಿವ ಹಾಗೂ ದೇವಿಯನ್ನು ಕುರಿತು ರಚಿಸಿರುವ ‘ವರದ ಹನುಮ ಸ್ತೋತ್ರ’  ಕೂಡಾ ಸಾಹಿತ್ಯ ಕೃಷಿ ಸಾಲಿಗೆ ಸೇರುತ್ತದೆ.

ಸುಕನ್ಯಾ, ಭಗವನ್ನಾಮಸ್ಮರಣೆ, ಜೀವನದಿ, ನನ್ನ ದೇವರಿಗೆ ಒಗಟುಗಳು (ಗದ್ಯ),  ದಿವ್ಯ ಜೀವನ, ಆಹಾಹಾ ವರದಕ್ಷಿಣೆ, ಓಹೊಹೊ ಪ್ರಗತಿ, ತಾತಾ ಬಾರೈ, ಶ್ರೀರಾಮ ಕೃಷ್ಣ ಲೀಲಾ ವಿಲಾಸ, ಧ್ವೈತಾದ್ವೈತ, ಏನು ಖಂಡಿಸುವೆ ಹೀಗೆ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಬರೆದ ಸಾಹಿತ್ಯ ಕೃತಿಗಳು.

ರಂಗಣ್ಣ ಅವರಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು. ಅವರ ಸಾಹಿತ್ಯ ರಚನೆಗೆ ಅವರ ಪತ್ನಿ ಶಾಂತಾಬಾಯಿ ಅವರ ಸಹಕಾರವಿದೆ. ಹಿರಿಯ ಮಗ ರಾಮಚಂದ್ರ ಕುಲಕರ್ಣಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕಿನಲ್ಲಿ ವ್ಯವಸ್ಥಾಪಕ.  ಎರಡನೇಯ ಮಗ ಕೃಷ್ಣರಾವ್‌ ಕುಲಕರ್ಣಿ ಕುಕನೂರಿನ ವಿದ್ಯಾನಂದ ಗುರುಕುಲದಲ್ಲಿ ಪ್ರಾಚಾರ್ಯ. ಕಿರಿಯ ಪುತ್ರಿ ಉಮಾ ಕುಲಕರ್ಣಿ ಅಪ್ಪನ ಸಾಹಿತ್ಯ ಕ್ಷೇತ್ರದ ಹಾದಿ ಹಿಡಿದಿದ್ದಾರೆ.
-ಕಿಶನ್‌ರಾವ್ ಕುಲಕರ್ಣಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.