ADVERTISEMENT

ಜಲಕ್ಷಾಮ ತಡೆಗೆ ಜಾಗೃತಿಯೇ ಪರಿಹಾರ

ನ್ಯಾಯಾಧೀಶ ಎನ್‌.ಎಸ್‌.ಕುಲಕರ್ಣಿ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2018, 11:43 IST
Last Updated 23 ಮಾರ್ಚ್ 2018, 11:43 IST

ಕುಷ್ಟಗಿ: ಈಗ ನಾವು ನೀರಿನ ಮಹತ್ವ ಅರಿಯದಿದ್ದರೆ ಭವಿಷ್ಯದಲ್ಲಿ ನೀರಿಗಾಗಿ ಕಾದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಇಲ್ಲಿಯ ಹಿರಿಯ ಶ್ರೇಣಿ ನ್ಯಾಯಾಧೀಶ ಎನ್‌.ಎಸ್‌.ಕುಲಕರ್ಣಿ ಹೇಳಿದರು.

‘ವಿಶ್ವ ಜಲ ದಿನ’ದ ನಿಮಿತ್ತ ನ್ಯಾಯಾಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭವಿಷ್ಯದಲ್ಲಿ ಜಲಕ್ಷಾಮ ಉಂಟಾಗದಂತೆ ನೋಡಿಕೊಳ್ಳಲು ಜನ ಈಗಲೇ ಎಚ್ಚರಗೊಳ್ಳುವುದು ಕ್ಷೇಮ ಎಂದರು.

ADVERTISEMENT

ಕೈಗಾರಿಕೀಕರಣ, ಜನವಸತಿ ಪ್ರದೇಶ, ಹೆದ್ದಾರಿ, ರಸ್ತೆಗಳ ನಿರ್ಮಾಣಕ್ಕಾಗಿ ಅರಣ್ಯ ನಾಶ ಮಾಡಲಾಗುತ್ತಿದೆ. ಗಿಡಗಳನ್ನು ಬೆಳೆಸುವುದಕ್ಕಿಂತ ಕಡಿಯುವುದೇ ಹೆಚ್ಚಾಗಿದೆ ಎಂದು ಹೇಳಿದರು.

ಲಭ್ಯ ಇರುವ ನೀರನ್ನು ಮಲೀನಗೊಳಿಸುತ್ತಿದ್ದೇವೆ. ಶುದ್ಧ ನೀರು ಅಪರೂಪವಾಗುತ್ತಿದೆ. ದುಬೈ ಸೇರಿದಂತೆ ಅರಬ್‌ ರಾಷ್ಟ್ರಗಳಲ್ಲಿ ನೀರು ಮಾರಾಟದ ವಸ್ತುವಾಗಿದೆ. ನಮ್ಮಲ್ಲಿಯೂ ಈಗೀಗ ಅಂಥ ಸ್ಥಿತಿ ನಿರ್ಮಾಣವಾಗುತ್ತಿದೆ. ನೀರನ್ನು ಮಿತವಾಗಿ ಬಳಸಬೇಕು ಎಂದು ಕಿವಿಮಾತು ಹೇಳಿದರು.

ಗುಣಮಟ್ಟದ ವಸ್ತುಗಳನ್ನು ಖರೀದಿಸಬೇಕು ಎಂದು ಹೇಳಿದ ನ್ಯಾಯಾಧೀಶ ಎನ್‌.ಎಸ್‌.ಕುಲಕರ್ಣಿ, ಔಷಧ, ಬೀಜ, ಗೊಬ್ಬರ ಸೇರಿದಂತೆ ಯಾವುದೇ ವಸ್ತುಗಳನ್ನು ಖರೀದಿಸಿದಾಗ ಅದಕ್ಕೆ ರಶೀದಿಯನ್ನು ಪಡೆಯಬೇಕು. ಅಂದಾಗ ಮಾತ್ರ ಗ್ರಾಹಕರ ಕಾಯ್ದೆಯ ಮೂಲಕ ನ್ಯಾಯ ಪಡೆಯಲು ಸಾಧ್ಯ ಎಂದು ಅವರು ಹೇಳಿದರು.

ನ್ಯಾಯಾಧೀಶರಾದ ಬಿ.ಕೇಶವಮೂರ್ತಿ, ರಫಿಕ್‌ ಅಹ್ಮದ್‌, ವಕೀಲರ ಸಂಘದ ಅಧ್ಯಕ್ಷ ಪರಸಪ್ಪ ಗುಜಮಾಗಡಿ, ನಾಗಪ್ಪ ಸೂಡಿ ಇದ್ದರು. ವಿಶ್ವ ಜಲ ದಿನ ಕುರಿತು ವಕೀಲ ವಿ.ಕೆ.ಕುಷ್ಟಗಿ, ಗ್ರಾಹಕರ ಹಿತರಕ್ಷಣೆ ಕಾಯ್ದೆ ಕುರಿತು ಸಿ.ಎನ್‌.ಉಪ್ಪಿನ, ಪರಿಹಾರ ಯೋಜನೆಗಳ ಕುರಿತು ಪಿ.ಆರ್‌.ಹುನಗುಂದ ಮಾಹಿತಿ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸದಸ್ಯರು, ವಕೀಲರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.