ADVERTISEMENT

ಜೆಇ ಅವ್ಯವಹಾರ ಪ್ರಸ್ತಾಪ: ಅನ್ಸಾರಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 10:41 IST
Last Updated 30 ಜುಲೈ 2014, 10:41 IST

ಗಂಗಾವತಿ: ನೀರಾವರಿ ಇಲಾಖೆ ವಡ್ಡರಹಟ್ಟಿ ವಿಭಾಗದ ಕಿರಿಯ ಎಂಜಿನಿಯರ್ ಅಮರೇಶ, ಟೆಂಡರ್ ಕರೆಯದೆ ಕಾಮಗಾರಿ ಕೈಗೆತ್ತಿಕೊಂಡು ರೈತರ ಮಧ್ಯ ಗೊಂದಲ ಸೃಷ್ಟಿಸಿ ಕಾನೂನು ಸುವ್ಯವಸ್ಥೆ ಹದಗೆಡಿಸಿದ್ದಾರೆ ಎಂದು ಶಾಸಕ ಇಕ್ಬಾಲ್ ಅನ್ಸಾರಿ ಆರೋಪಿಸಿದರು.

ಗಂಗಾವತಿ ಕ್ಷೇತ್ರದ ಮಲ್ಲಾಪುರ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಕಾಲುವೆ ಕಾಮಗಾರಿಗೆ ಸಂಬಂಧಿಸಿದಂತೆ ಮಂಗಳವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಮಗಾರಿಗೆ ಸರ್ಕಾರ ಅನುಮೋದನೆ ನೀಡಿಲ್ಲ. ಅನುದಾನವೂ ಮೀಸಲಿಟ್ಟಿಲ್ಲ ಎಂದು ಹೇಳಿದರು.

ಕಾಮಗಾರಿಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರಕ್ಕೆ ಸ್ವತಃ ಇಲಾಖೆಯ ಕಿರಿಯ ಎಂಜಿನಿಯರ್‌ ಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ. ಆ.2ರಂದು ಮುನಿರಾಬಾದ್‌ನಲ್ಲಿ ನಡೆಯುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ (ಕಾಡಾ) ಪ್ರಸ್ತಾಪಿಸಿ ಅಧಿಕಾರಿಯ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು.

ರಾಯಚೂರು ಮೂಲದ ಗುತ್ತಿಗೆದಾರರೊಬ್ಬರೊಂದಿಗೆ ಶಾಮೀಲಾದ ಎಂಜಿನಿಯರ್ ಕಾನೂನು ಬಾಹಿರವಾಗಿ ₨ 80 ಲಕ್ಷ ಮೊತ್ತದ ಕಾಮಗಾರಿ ಮಾಡಿಸುವ ಮೂಲಕ ಬಹಿರಂಗವಾಗಿಯೇ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಅನ್ಸಾರಿ ಆರೋಪಿಸಿದರು.

ಮಲ್ಲಾಪುರ ಗ್ರಾಮದಲ್ಲಿನ ಕಾಲುವೆಯ ಮೂಲ ವಿನ್ಯಾಸ 3.3 ಅಡಿ ಎತ್ತರ ಮತ್ತು ಅಗಲವಿತ್ತು. ಆದರೆ ಯಾವ ಇಲಾಖೆಯ ಅನುಮತಿ ಇಲ್ಲದೇ ಏಕಾಏಕಿ ಕಾಲುವೆಯ ಗಾತ್ರ­ವನ್ನು 5.5 ಅಡಿಗೆ ವಿಸ್ತರಿಸುವ ಮೂಲಕ ಅಮರೇಶ ಕೆಳ ಮತ್ತು ಮೇಲ್ಭಾಗದ ರೈತದ ಮಧ್ಯೆ ಕಲಹಕ್ಕೆ ಕಾರಣ­ವಾ­ಗಿದ್ದಾರೆ. ಕಾಮಗಾರಿಯ ಮಾಹಿತಿ ಕೋರಿದರೂ ನೀಡುತ್ತಿಲ್ಲ. ಮಾತು ಮಾತಿಗೂ ತಾನು ಮುಖ್ಯಮಂತ್ರಿ ಆಪ್ತ, ಜಿಲ್ಲಾ ಉಸ್ತುವಾರಿ ಸಚಿವರ ಸ್ನೇಹಿತ ಎಂದು ಹೇಳಿಕೊಳ್ಳುತ್ತಿರುವ ಬಗ್ಗೆಯೂ ದೂರು ಕೇಳಿ ಬಂದಿವೆ ಎಂದರು.

ಅಮರೇಶ ವಿರುದ್ಧ ಕ್ರಮ: ತಹಶೀಲ್ದಾರ
ಗಂಗಾವತಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆಯದೆ ಹಾಗೂ ನನ್ನ ಗಮನಕ್ಕೆ ತಾರದೇ ಮಲ್ಲಾಪುರದ ಸರ್ಕಾರಿ ಜಮೀನಿನ ಮೊರಮ್‌ನ್ನು ಅಕ್ರಮವಾಗಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಿಯ ಎಂಜಿನಿಯರ್‌  ಅಮರೇಶ ಮೇಲೆ ಕಾನೂನು ಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದು ತಹಶೀಲ್ದಾರ ವೆಂಕನಗೌಡ ಪಾಟೀಲ್ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಲುವೆ ಕಾಮಗಾರಿಗೆ ಬಳಸಿದ ಮುರುಮ್‌ಗೆ ಅನುಮತಿ ಪಡೆದಿರಲಿಲ್ಲ. ಕಂದಾಯ ಸಿಬ್ಬಂದಿ ದಾಳಿ ಮಾಡಿದಾಗ ಗ್ರಾಮಸ್ಥರು ಸಿಬ್ಬಂದಿ ಮೇಲೆ ಮರು ದಾಳಿ ಮಾಡಿದರು. ಇದಕ್ಕೆ ಅಧಿಕಾರಿಯ ಕುಮ್ಮಕ್ಕು ಕಾರಣ ಎಂಬುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಈ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಮೊರಮ್ ಅಕ್ರಮ ಸಾಗಣೆಗೆ ಸೋಮವಾರ ರಾತ್ರಿಯಿಂದ ನಿರಾತಂಕವಾಗಿ ಮತ್ತೆ ಸಾಗಿದೆ. ಉಪ ವಿಭಾಗಾಧಿಕಾರಿಗೆ ಪತ್ರ ಬರೆದು ಶುಲ್ಕ, ದಂಡದ ಜೊತೆಗೆ ಗುತ್ತಿಗೆದಾರನಿಗೆ ಬಿಲ್ ಪಾವತಿಸದಂತೆ ಕೋರಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.