ADVERTISEMENT

ಧರ್ಮ, ಜಾತಿಗೆ ಒಡೆದು ಆಳುವ ಸರ್ಕಾರ

ಪ್ರಧಾನಿ ಮೋದಿ ವಿರುದ್ಧ ಮಾಣಿಕ್‌ ಸರ್ಕಾರ್‌್ ಆರೋಪ; ಸಿಪಿಎಂ ಎಡಪಂಥೀಯ ಸಮಾವೇಶ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 6:52 IST
Last Updated 17 ಜನವರಿ 2017, 6:52 IST
ಧರ್ಮ, ಜಾತಿಗೆ ಒಡೆದು ಆಳುವ ಸರ್ಕಾರ
ಧರ್ಮ, ಜಾತಿಗೆ ಒಡೆದು ಆಳುವ ಸರ್ಕಾರ   

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜನರನ್ನು ಧರ್ಮ, ಜಾತಿ ಆಧಾರದ ಮೇಲೆ ಒಡೆದು ಆಳುವ ಮಾರ್ಗ ಅನುಸರಿಸುತ್ತಿದೆ ಎಂದು ತ್ರಿಪುರಾದ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌್ ಆರೋಪಿಸಿದರು.

ಗಂಗಾವತಿಯಲ್ಲಿ ಭಾರತ ಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಸಮಿತಿ ಆಶ್ರಯದಲ್ಲಿ ನಡೆದ ಎಡ ಪರ್ಯಾಯ ಧೋರಣೆಗಳು ಕುರಿತ ಬಹಿರಂಗ ಸಭೆಯಲ್ಲಿ ಸೋಮವಾರ ಅವರು ಮಾತನಾಡಿದರು.

ತನ್ನ ಆಡಳಿತ ವಿಫಲತೆ ಮುಚ್ಚಿಕೊಳ್ಳಲು ಬಜರಂಗದಳ, ವಿಶ್ವಹಿಂದೂ ಪರಿಷತ್‌, ದುರ್ಗಾವಾಹಿನಿಯಂಥ ಸಂಘಟನೆಗಳ ಮೂಲಕ ಜನರನ್ನು ಒಡೆಯುತ್ತಿದೆ. ಹೀಗೆ ಜನರ ಗಮನ ಬೇರೆಡೆ ಸೆಳೆಯುವಂತೆ ಮಾಡುತ್ತಿದೆ. ಮುಸ್ಲಿಂ, ಕ್ರೈಸ್ತ ಅಲ್ಪಸಂಖ್ಯಾತರ ಮೇಲೆ ಸಾವಿರಕ್ಕೂ ಹೆಚ್ಚು ದಾಳಿಗಳು ನಡೆದಿವೆ. ಈ ನಿಟ್ಟಿನಲ್ಲಿ ದೇಶದ ದುಡಿಯುವ ಜನ ಎಚ್ಚರಿಕೆಯಿಂದ ಇರಬೇಕಿದೆ ಎಂದರು.

ಮೋದಿ ಸರ್ಕಾರದ ಅವಧಿಯ ಮೂರು ವರ್ಷಗಳ ಬಜೆಟ್‌ ಕೂಡಾ ಜನವಿರೋಧಿಯಾಗಿದೆ. ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಅನುದಾನ ಕಡಿತ ಮಾಡಲಾಗಿದೆ.

ಹೀಗೆ ಎಲ್ಲ ಜನವಿರೋಧಿ ನೀತಿಗಳ ವಿರುದ್ಧ 2015 ಮತ್ತು 2016ರ ಸೆ. 2ರಂದು ನೀಡಲಾದ ಬಂದ್‌ ಕರೆಗೆ ದೇಶದ 15 ಕೋಟಿಗೂ ಹೆಚ್ಚು ಜನ ಸ್ಪಂದಿಸಿದ್ದರು. ಅದರ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ನುಡಿದರು.

ಗರಿಷ್ಠ ಮುಖಬೆಲೆಯ ನೋಟುಗಳ ಅಪಮೌಲ್ಯದಿಂದಾಗಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ರೈತರ ಮೇಲೆ ಗಂಭೀರ ಪರಿಣಾಮ ಆಗಿದೆ. ದೇಶದ ಶೇ 32ರಷ್ಟು ಆರ್ಥಿಕ ವಹಿವಾಟು ಕುಸಿದಿದೆ.

ಈ ಬಗ್ಗೆ ಸಂಸತ್‌ನ ಒಳಗೆ ಮಾತನಾಡದ ಪ್ರಧಾನಿ  ಹೊರಗೆ ಮಾತನಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.  ದೇಶದ ಶೇ 60ರಷ್ಟು ಹಳ್ಳಿಗಳಲ್ಲಿ ಬ್ಯಾಂಕ್‌, ಇಂಟರ್‌ನೆಟ್‌ ಇಲ್ಲ. ಶೇ 35ರಿಂದ 40 ಕೋಟಿಯಷ್ಟು ಜನ ಅನಕ್ಷರಸ್ಥರಿದ್ದಾರೆ.

ಇಂಥವರು ನಗದುರಹಿತ ವಹಿವಾಟು ಹೇಗೆ ನಡೆಸುತ್ತಾರೆ? ಇದು ಬಹುರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲಕರ ಮಾತ್ರವಲ್ಲ. ಜನವಿರೋಧಿಯೂ ಆಗಿದೆ ಎಂದರು.  ರೈತರ ಆತ್ಮಹತ್ಯೆ ತಡೆಯಲು ಕೃಷಿ ಉತ್ಪನ್ನಗಳನ್ನು ಉತ್ಪಾದನಾ ವೆಚ್ಚದ ಒಂದೂವರೆಪಟ್ಟು ಹೆಚ್ಚು ಬೆಲೆಗೆ ಖರೀದಿಸುವುದಾಗಿ ಮೋದಿ ಭರವಸೆ ನೀಡಿದ್ದರು. ಅದು ಈಡೇರಲಿಲ್ಲ. ಒಳ್ಳೆಯ ದಿನಗಳ ಬಗ್ಗೆ ಭರವಸೆ ಕೊಟ್ಟಿದ್ದರು. ಆದರೆ, ಮಾರುಕಟ್ಟೆಯಲ್ಲಿ ಆಹಾರ ಸೇರಿ ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇದೆ. ಬೆಲೆ ಏರಿಕೆ, ಹಣದುಬ್ಬರ ನಿಯಂತ್ರಿಸಲು ಮೋದಿ ಸರ್ಕಾರ ಸಕಾರಾತ್ಮಕ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯು.ಬಸವರಾಜ ಪ್ರಾಸ್ತಾವಿಕ ಮಾತನಾಡಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಶ್ರೀರಾಮರೆಡ್ಡಿ, ನಿತ್ಯಾನಂದ ಸ್ವಾಮಿ, ಜಿ.ಎನ್‌.ನಾಗರಾಜ್‌ ಇದ್ದರು. ಪಕ್ಷದ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿ ಆರ್‌.ಎಸ್‌.ಬಸವರಾಜ್‌ ಸ್ವಾಗತಿಸಿದರು. ನಿರುಪಾದಿ ಬೆಣಕಲ್‌ ಕಾರ್ಯಕ್ರಮ ನಿರೂಪಿಸಿದರು. ಶೇಖ್‌ಷಾ ಖಾದ್ರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.