ADVERTISEMENT

ಧಾರಾಕಾರ ಮಳೆ: ತುಂಬಿಹರಿದ ಹಳ್ಳ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 7:04 IST
Last Updated 9 ಸೆಪ್ಟೆಂಬರ್ 2017, 7:04 IST

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಗುರುವಾರ ರಾತ್ರಿ ಭಾರಿ ಮಳೆಯಾಗಿದ್ದು, ಅನೇಕ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಹೊಲ ಗದ್ದೆಗಳಿಗೆ ಹಾಕಿದ್ದ ಒಡ್ಡುಗಳು ನೀರಿನಿಂದ ಭರ್ತಿಯಾಗಿವೆ.

ಪಟ್ಟಣದ ಮಳೆ ಮಾಪನ ಕೇಂದ್ರದಲ್ಲಿ 82 ಮಿ.ಮೀ ಮಳೆ ದಾಖಲಾಗಿದೆ. ತಾವರಗೇರಾದಲ್ಲಿ 53, ದೋಟಿಹಾಳದಲ್ಲಿ 34, ಕಿಲಾರಟ್ಟಿಯಲ್ಲಿ 25, ಹನುಮನಾಳದಲ್ಲಿ 17 ಮತ್ತು ಹನುಮಸಾಗರದಲ್ಲಿ 14 ಮಿ.ಮೀ ಪ್ರಮಾಣದ ಮಳೆಯಾಗಿದೆ.

ಕುಷ್ಟಗಿ ಮತ್ತು ಯಲಬುರ್ಗಾ ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ಭಾರಿ ಮಳೆ ಸುರಿದಿದ್ದರಿಂದ ನಿಡಸೇಸಿ ಕೆರೆಗೆ ಉತ್ತಮ ಪ್ರಮಾಣದಲ್ಲಿ ನೀರು ಬಂದಿದೆ. ಸಿಂಧನೂರು ರಸ್ತೆಯಲ್ಲಿ ಬರುವ ಎರೆಹಳ್ಳ ತುಂಬಿ ಹರಿದಿದೆ ಎಂದು ಜನರು ತಿಳಿಸಿದ್ದಾರೆ. ಹಳ್ಳಕ್ಕೆ ಪ್ರವಾಹ ಉಂಟಾಗಿದ್ದರಿಂದ ಬಿಜಕಲ್ ಬಳಿ ಇರುವ ರಾಜ್ಯ ಹೆದ್ದಾರಿ ಸೇತುವೆ ಮೇಲೆ ನೀರು ಹರಿದು ರಸ್ತೆ ಸಂಚಾರ ಕೆಲಕಾಲ ಸ್ಥಗಿತಗೊಂಡಿತ್ತು.

ADVERTISEMENT

ಬಿಜಕಲ್ ಬಳಿ ರಸ್ತೆ ಸೇತುವೆ ಕೆಲಸ ಅಸಮರ್ಪಕ ಮತ್ತು ಅಪೂರ್ಣಗೊಂಡಿದ್ದು ಇದರಿಂದ ರಸ್ತೆ ಪಕ್ಕದ ಗೋಡೆ ಕುಸಿದುಬಿದ್ದಿದೆ. ಇದರಿಂದ ರಸ್ತೆಗೆ ಧಕ್ಕೆಬರುವ ಸಾಧ್ಯತೆ ಇದೆ. ಅಧಿಕಾರಿಗಳು ಈ ಬಗ್ಗೆ ತಕ್ಷಣ ಗಮನಹರಿಸಬೇಕಿದೆ ಎಂದು ಗ್ರಾಮಸ್ಥ ಮನೋಹರ ಬಡಿಗೇರ ಹೇಳಿದರು.

ಶಾಖಾಪುರ ಗ್ರಾಮದ ಬಳಿ ಇರುವ ಕೆರೆ ಭರ್ತಿಯಾಗಿ ನೀರು ಕೋಡಿ ಮೂಲಕ ಹರಿಯುತ್ತಿದ್ದುದು ಕಂಡುಬಂತು. ತಳುವಗೇರಾ ಗ್ರಾಮದಲ್ಲಿ ಅನೇಕ ಹೊಲಗದ್ದೆಗಳಲ್ಲಿ ನೀರು ಸಂಗ್ರಹವಾಗಿದೆ ಎಂದು ತಳುವಗೇರಾ ಗ್ರಾಮಸ್ಥ ಪರಶುರಾಮ ತಿಳಿಸಿದರು. ಕೆಲವು ಕೃಷಿ ಹೊಂಡಗಳು ಕೊಚ್ಚಿಹೋಗಿವೆ ಎಂದು ಪಟ್ಟಣದ ರಮೇಶ ಕೋನಸಾಗರ ವಿವರಿಸಿದರು.

ತೇವಾಂಶ ಕೊರತೆಯಿಂದ ಬಳಲುತ್ತಿದ್ದ ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ, ಎಳ್ಳು, ಶೇಂಗಾ ಮತ್ತಿತರ ಬೆಳೆಗಳಿಗೆ ಉತ್ತಮವಾಗಿದೆ ಎಂದು ಯಲಬುರ್ತಿಯ ರೈತ ಹನುಮಗೌಡ ಪಾಟೀಲ ಸಂತಸ ಹಂಚಿಕೊಂಡರು. ಅಲ್ಲದೆ ಹಿಂಗಾರು ಬೆಳೆಗಳ ಬಿತ್ತನೆ ಕಾರ್ಯಕ್ಕೆ ಮಳೆ ಅನುಕೂಲ ಒದಗಿಸಿದೆ ಎಂದು ಇತರ ರೈತರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.