ADVERTISEMENT

ನಾಲೆ ನೀರು ಬಿಡಿಸಲು ಒತ್ತಾಯಿಸಿ ಬಿಜೆಪಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2017, 7:04 IST
Last Updated 30 ಆಗಸ್ಟ್ 2017, 7:04 IST

ಕಾರಟಗಿ: ನಾಲೆಗೆ ನೀರು ಬಿಡಿಸಲು ಮತ್ತು ರೈತರ ನೋವಿಗೆ ಸ್ಪಂದಿಸಲು ಆಗ್ರಹಿಸಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ವಿಶೇಷ ಎಪಿಎಂಸಿಯಿಂದ ಪ್ರತಿಭಟನಾ ಮೆರವಣಿಗೆ ಕೈಗೊಂಡರು. ಹಳೆಯ ಬಸ್ ನಿಲ್ದಾಣದಿಂದ ಕನಕದಾಸ ವೃತ್ತಕ್ಕೆ ತೆರಳಿ ಮಾನವ ಸರಪಳಿ ನಿರ್ಮಿಸಿದರು. ರಾಜ್ಯ ಹೆದ್ದಾರಿಯಲ್ಲೇ ಸಭೆ ನಡೆಸಿದರು.

ರಸ್ತೆತಡೆ ಕೈಗೊಂಡರು. ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ‘ಗಂಗಾವತಿ ಮತ್ತು ಕನಕಗಿರಿ ಶಾಸಕರಿಗೆ ರೈತರ ಬಗ್ಗೆ ಕಳಕಳಿಯಿದ್ದಲ್ಲಿ, ನಾಲೆಗೆ ನೀರು ಬಿಡಿಸಿಯೇ ಕ್ಷೇತ್ರಕ್ಕೆ ಕಾಲಿಡಬೇಕು. ತುಂಗಭದ್ರಾ ಜಲಾಶಯದ ನೀರನ್ನೇ ನೆಚ್ಚಿಕೊಂಡಿರುವ ರೈತರ ಅಹವಾಲಿಗೆ ಸ್ಪಂದಿಸಬೇಕು. ಅವರ ಬೇಡಿಕೆ ಈಡೇರಿಸಬೇಕು’ ಎಂದು ಆಗ್ರಹಿಸಿದರು.

ರೈತಮೋರ್ಚಾ ರಾಜ್ಯ ಘಟಕದ ಕಾರ್ಯದರ್ಶಿ ತಿಪ್ಪೇರುದ್ರಸ್ವಾಮಿ ಮಾತನಾಡಿ, ‘ಗಂಗಾವತಿ ಮತ್ತು ಕನಕಗಿರಿ ಶಾಸಕರು ಮತ್ತು  ರೈತರ ಬಗ್ಗೆ ಕಾಳಜಿ ಹೊಂದಿಲ್ಲ. ಆಸ್ತಿ ಸಂಪಾದನೆಯಲ್ಲಿ ಮಗ್ನರಾಗಿರುವ ಉಭಯ ಶಾಸಕರು ತಮ್ಮ ಆಸ್ತಿ ಮಾರಿ ರೈತರಿಗಾಗುವ ₹ 5,500 ಕೋಟಿ ನಷ್ಟವನ್ನು ಪರಿಹಾರ ರೂಪದಲ್ಲಿ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ‘ಅನ್ನದ ಬಟ್ಟಲಿನ ಈ ಭಾಗದಲ್ಲಿ ಕಣ್ಣೀರ ಬಟ್ಟಲನ್ನಾಗಿಸಿದ ಕೀರ್ತಿ ನಮ್ಮ ಜಿಲ್ಲೆಯ ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಸಲ್ಲುತ್ತದೆ’ಎಂದು ವ್ಯಂಗ್ಯವಾಡಿದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಸವರಾಜ್ ದಡೇಸ್ಗೂರ, ಮುಖಂಡ ಮುಕುಂದರಾವ್ ಭವಾನಿಮಠ, ನಾಗರಾಜ್ ಬಿಲ್ಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.