ADVERTISEMENT

ನೀರು ಶುದ್ಧೀಕರಣ ಘಟಕ ಅನುಪಯುಕ್ತ

ಕುಡಿಯುವ ನೀರಿಗಾಗಿ ಪ್ರತಿನಿತ್ಯ ತೋಟಗಳಿಗೆ ಅಲೆಯುತ್ತಿರುವ ಮೆಣೆದಾಳ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 5:27 IST
Last Updated 18 ಏಪ್ರಿಲ್ 2017, 5:27 IST
ನೀರು ಶುದ್ಧೀಕರಣ ಘಟಕ ಅನುಪಯುಕ್ತ
ನೀರು ಶುದ್ಧೀಕರಣ ಘಟಕ ಅನುಪಯುಕ್ತ   
ತಾವರಗೇರಾ:  ಸಮೀಪದ ಮೆಣೆದಾಳ ಗ್ರಾಮದಲ್ಲಿ ಕುಡಿವ ನೀರಿಲ್ಲದೆ ಸಮೀಪದ ತೋಟಗಳಿಂದ ಜನರು ನೀರು ತರುತ್ತಿದ್ದಾರೆ.  ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕ ಕಾಮಗಾರಿ ಮುಗಿದಿದ್ದರೂ ನೀರು ಸರಬರಾಜು ಮಾಡುತ್ತಿಲ್ಲ. ಇದರಿಂದ ಕುಡಿಯುವ ನೀರಿಗಾಗಿ ಜನರು ಪರದಾಡುವಂತಾಗಿದೆ.
 
ಸಾರ್ವಜನಿಕರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ವಿಫಲವಾಗಿದ್ದಾರೆ. ವಿಶೇಷವಾಗಿ ಗ್ರಾಮದ ಗುಂಪು ಓಣಿಯಲ್ಲಿ ನೀರಿಗಾಗಿ ರೈತರ ತೋಟಗಳಿಗೆ ಹೋಗುತ್ತಿದ್ದಾರೆ. 
 
ನೀರು ಶುದ್ಧೀಕರಣ ಘಟಕ ಗುತ್ತಿಗೆ ಪಡೆದ ಕಂಪೆನಿ ಯಂತ್ರಜೋಡಣೆ ಮಾಡಿದ್ದರೂ ಉದ್ಘಾಟನೆಗೆ ಮುಂದಾಗಿಲ್ಲ. ಕಟ್ಟಡ ಮತ್ತು ಯಂತ್ರಗಳು ನಿರುಪಯುಕ್ತವಾಗಿವೆ. ಈಗಾಗಲೇ ಸಹಕಾರ ಸಂಘದಿಂದ ನಡೆಸುತ್ತಿರುವ ಶುದ್ಧೀಕರಣ ಘಟಕದಲ್ಲಿ ಅಂತರ್ಜಲ ಕೊರತೆಯಿಂದ ನೀರು ಪೂರೈಕೆ ಸ್ಥಗಿತವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
 
ರೈತರಿಗೆ ಇನ್ನೂ ಬೆಳೆ ಹಾನಿ ಪರಿಹಾರ ನೀಡಿಲ್ಲ. ಖಾತ್ರಿ ಯೋಜನೆಯಡಿ ತೋಟಗಾರಿಕೆ ಸಸಿ ನಾಟಿ ಮಾಡಿದವರಿಗೆ 2013ರಿಂದ ಕೂಲಿ ಸಿಕ್ಕಿಲ್ಲ. 
ಪ್ರಮುಖ ಬೀದಿಗಳ ಚರಂಡಿಗಳು ಸ್ವಚ್ಛತೆಗೆ ಕಾದಿವೆ. ಗ್ರಾಮಲ್ಲಿ ಇನ್ನೂ ಕೆಲವು ಓಣಿಯಲ್ಲಿ ಸಿ.ಸಿ ರಸ್ತೆ ನಿರ್ಮಾಣ ಮಾಡಬೇಕಿದೆ. ಹೀಗೆ ಮೆಣೆದಾಳ ಗ್ರಾಮದಲ್ಲಿ ಸಮಸ್ಯೆಗಳ ಸಾಲು ಕಂಡು ಬರುತ್ತದೆ. 
 
ಉದ್ಯೋಗ ಖಾತ್ರಿ ಯೋಜನೆ ಅಡಿ ಶರಣಪ್ಪ ಕುಂಬಾರ ಅವರ 2 ಎಕರೆ ತೋಟದಲ್ಲಿ ಮೂರು ವರ್ಷದ ಹಿಂದೆ ಪೇರಲ ಸಸಿ ನಾಟಿ ಮಾಡಲಾಗಿತ್ತು. ತೋಟಗಾರಿಕಾ ಇಲಾಖೆಯ ಮೂಲಕ ಕಾಮಗಾರಿ ಮಾಡಲಾಗಿದೆ.

ಆದರೆ ಕೂಲಿ ಹಣ ಪಾವತಿ ಮಾಡಿಲ್ಲ ಎಂದು ರೈತ ಶರಣಪ್ಪ ಆರೋಪಿಸಿದರು. ಗ್ರಾಮಕ್ಕೆ ಸರ್ಕಾರದ ಯಾವುದೇ ಕೆಲಸ ಸಮರ್ಪಕವಾಗಿ ತಲುಪುತ್ತಿಲ್ಲ. ಈ ಬಗ್ಗೆ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಕೆ.ಶರಣಬಸವ ನವಲಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.