ADVERTISEMENT

ಬೇಸಿಗೆ ಶಿಬಿರದಲ್ಲಿ ಆಧ್ಯಾತ್ಮಿಕ ಶಿಕ್ಷಣ

ಕಿಶನರಾವ್‌ ಕುಲಕರ್ಣಿ
Published 18 ಮೇ 2017, 8:48 IST
Last Updated 18 ಮೇ 2017, 8:48 IST
ಹನುಮಸಾಗರ ಬನಶಂಕರಿ ದೇವಸ್ಥಾನದ ಉಚಿತ ಆಧ್ಯಾತ್ಮಿಕ ಶಿಬಿರದಲ್ಲಿ ಪ್ರವಚನಕಾರ ರಾಜೇಶ ಕಂಬದ ವ್ಯಾಕರಣ ಬೋಧಿಸುತ್ತಿರುವುದು
ಹನುಮಸಾಗರ ಬನಶಂಕರಿ ದೇವಸ್ಥಾನದ ಉಚಿತ ಆಧ್ಯಾತ್ಮಿಕ ಶಿಬಿರದಲ್ಲಿ ಪ್ರವಚನಕಾರ ರಾಜೇಶ ಕಂಬದ ವ್ಯಾಕರಣ ಬೋಧಿಸುತ್ತಿರುವುದು   

ಹನುಮಸಾಗರ: ಇಲ್ಲಿನ ಬನಶಂಕರಿ ದೇವಸ್ಥಾನದಲ್ಲಿ ಆದಿಗುರು ಫೌಂಡೇಷನ್ ಮತ್ತು ದೇವಾಂಗ ಸಮಾಜದ ವತಿಯಿಂದ ಕಳೆದ ಒಂದು ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಉಚಿತ ಆಧ್ಯಾತ್ಮಿಕ ಶಿಕ್ಷಣ ನೀಡಲಾಗುತ್ತಿದೆ.

ಆಧ್ಯಾತ್ಮಿಕ ಶಿಕ್ಷಣದ ಜೊತೆಗೆ, ಕನ್ನಡ ವ್ಯಾಕರಣ, ಯೋಗ, ಶುದ್ಧಬರಹ, ಸರಳ ಗಣಿತ, ಧ್ಯಾನ ಹಾಗೂ ಸರಳ ಪೂಜಾ ವಿಧಾನವನ್ನು ಮಕ್ಕಳಿಗೆ ಬೋಧಿಸಲಾಗುತ್ತಿದೆ. ಪ್ರವಚನಕಾರ ರಾಜೇಶ ಕಂಬದ ಹಾಗೂ ಯೋಗಶಿಕ್ಷಕ ಶಿವಶಂಕರ ಮೆದಿಕೇರಿ ಸ್ವಯಂಪ್ರೇರಿತರಾಗಿ ಬೆಳಿಗ್ಗೆ ಹಾಗೂ ಸಂಜೆ ವೇಳೆ  ಮಕ್ಕಳಿಗೆ ಪಾಠ ಬೋಧನೆ ಮಾಡುತ್ತಿದ್ದಾರೆ. 

‘ಬೇಸಿಗೆ ವೇಳೆ  ಸಾಕಷ್ಟು ಶಿಬಿರಗಳು ನಡೆಯುತ್ತವೆ. ಆದರೆ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ತಿಳಿಸುವ ಶಿಕ್ಷಣ ಮಾತ್ರ ನೀಡುತ್ತಿಲ್ಲ. ಬದುಕಿನ ಅರಿವು ಮೂಡಿಸುವುದೇ ಈ ಆಧ್ಯಾತ್ಮಿಕ ಶಿಕ್ಷಣದಿಂದ. ಮಕ್ಕಳು ಸಂಪೂರ್ಣ ಇದೇ ಶಿಕ್ಷಣ ಪಡೆಯಬೇಕೆಂಬ ಒತ್ತಾಯ ನಮ್ಮದಲ್ಲ. ಆದರೆ ಬದುಕಿಗೆ  ಅವಶ್ಯವೆನಿಸುವ ಮಟ್ಟಿಗಾದರೂ ಆಧ್ಯಾತ್ಮಿಕ ಶಿಕ್ಷಣ ಬೇಕು ಎಂಬ ಉದ್ದೇಶದಿಂದ ಈ ಶಿಬಿರ ನಡೆಸುತ್ತಿದ್ದೇವೆ’ ಎಂದು ರಾಜೇಶ ಕಂಬದ ಹೇಳಿದರು.

ADVERTISEMENT

ಶಿಬಿರದಲ್ಲಿ ಪಾಲ್ಗೊಂಡಿರುವ ಮಕ್ಕಳಿಗೆ ಧ್ಯಾನ, ಪ್ರಾಣಾಯಾಮ, ಆರೋಗ್ಯ ನೈರ್ಮಲ್ಯದ ಬಗ್ಗೆ ಮೂಲಪಾಠಗಳನ್ನು ಕಲಿಸಿ, ವಿದ್ಯಾಪ್ರಧಾನವಾದ ಕ್ರೀಡೆಗಳನ್ನು ತಿಳಿಸಿಕೊಡುವ ಉದ್ದೇಶ ಇಟ್ಟುಕೊಂಡಿದ್ದಾರೆ. ಪ್ರತಿ ನಿತ್ಯ ಮಕ್ಕಳು ಸಾಮೂಹಿಕವಾಗಿ ಮಂತ್ರಗಳನ್ನು ಪಠಣ ಮಾಡಿ, ಹಾಡು ಹೇಳುತ್ತಿರುವುದು ಪೋಷಕರಿಗೆ ಇದೊಂದು ಆಕರ್ಷಣೆಯ ಕೇಂದ್ರವಾಗಲು ಕಾರಣವೂ ಆಗಿದೆ. ಶಿಬಿರದಲ್ಲಿಯ ಮಕ್ಕಳ ಕಲಿಕೆ ಕಂಡು ಆಸಕ್ತಿಯಿಂದ ಕೆಲ ಪಾಲಕರು ತಮ್ಮ ಮಕ್ಕಳನ್ನು ಶಿಬಿರಕ್ಕೆ ಹಾಜರುಪಡಿಸಿದ್ದಾರೆ. ವಿದ್ಯಾರ್ಥಿಗಳ ಕ್ರಿಯಾತ್ಮಕ ಚಟುವಟಿಕೆಗಳಾದ ನೃತ್ಯ, ಸಂಗೀತ, ರೇಖಾ ಚಿತ್ರ ಮತ್ತು ಚಿತ್ರಕಲೆಯನ್ನು ಮುಂದಿನ ದಿನಗಳಲ್ಲಿ ಅಳವಡಿಸುವ ಉದ್ದೇಶ ಹಾಕಿಕೊಳ್ಳಲಾಗಿದೆ ಎಂದು ಆದಿಗುರು ಫೌಂಡೇಷನ್ ಪದಾಧಿಕಾರಿಗಳು ಹೇಳುತ್ತಾರೆ.

'ಆಧ್ಯಾತ್ಮಿಕ, ಔದ್ಯೋಗಿಕ, ವ್ಯಾವಹಾರಿಕ ಶಿಕ್ಷಣ ಈ ಮೂರೂ ತೆರನಾದ ಶಿಕ್ಷಣ ದೊರೆಯದೆ ಮಕ್ಕಳ ವ್ಯಕ್ತಿತ್ವ ವಿಕಾಸವಾಗದು. ಈ ವಿಷಯವಾಗಿಯೇ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಧ್ಯೆ ಈಗ ಕಂದಕವಿದೆ, ಅದನ್ನು ದೂರ ಮಾಡುವ ಸಣ್ಣ ಪ್ರಯತ್ನ ನಮ್ಮದಾಗಿದೆ. ಅಲ್ಲದೆ ಸಾಮಾನ್ಯ ಜ್ಞಾನವನ್ನು ನೀಡುವಲ್ಲಿ ನಮ್ಮ ಶಿಕ್ಷಣ ಪದ್ಧತಿ ಸೋಲುತ್ತಿದೆ.  ಮಕ್ಕಳಿಗೆ ಜ್ಞಾನ ಕ್ಷಿತಿಜವನ್ನು ವಿಸ್ತರಿಸುವ ಕೆಲಸವನ್ನು ನಡೆಸಬೇಕಾಗಿದೆ’ ಎಂದು ಯೋಗ ಶಿಕ್ಷಕ ಶಿವಶಂಕರ ಮೆದಿಕೇರಿ ಹೇಳಿದರು.
ಕಿಶನರಾವ್‌ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.