ADVERTISEMENT

ಭಾಷೆ ಬೆಳೆಯುವುದು ಜನರಿಂದ: ಕಾಪಸೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2017, 6:29 IST
Last Updated 28 ಆಗಸ್ಟ್ 2017, 6:29 IST

ಕೊಪ್ಪಳ: ಭಾಷೆ ಜನರಿಂದ ಬೆಳೆಯುತ್ತದೆಯೇ ಹೊರತು, ಸಾಹಿತ್ಯದಿಂದಲ್ಲ ಎಂದು ಧಾರಾವಾಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಗುರುಲಿಂಗ ಕಾಪಸೆ ಹೇಳಿದರು.
ನಗರದಲ್ಲಿ ಭಾನುವಾರ ನಾಗರಿಕ ವೇದಿಕೆ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ತಿರುಳುಗನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

'ತಿರುಳುಗನ್ನಡ ಎಂದರೆ ಸತ್ವಯುತವಾದ ಕನ್ನಡ ಎಂದರ್ಥ. ಇದನ್ನು ಕವಿರಾಜ ಮಾರ್ಗಕಾರ ಗುರುತಿಸಿದರು. 9ನೇ ಶತಮಾನದಲ್ಲಿ ಶಾಸ್ತ್ರೀಯ ಭಾಷೆಯನ್ನಾಗಿ ಘೋಷಿಸುವಾಗ ಕೊಪ್ಪಳದಲ್ಲಿನ ಆಧಾರವನ್ನು ಪರಿಗಣಿಸಲಾಗಿದೆ. ಈ ಭಾಷೆಯಲ್ಲಿ ವೈವಿಧ್ಯವಿದೆ. ಹರಿಹರ, ಪಂಪ, ರಾಘವಾಂಕ ಹೀಗೆ ಹಲವು ಮಂದಿ ಕವಿಗಳು ಈ ಭಾಷೆಯನ್ನು ಬೆಳೆಸಿದರು’ ಎಂದರು.

‘ಕನ್ನಡಿಗರು ಯಾವುದರಲ್ಲಿಯೂ ಹಿಂದಿಲ್ಲ. ಬಸವಕಾಲೀನ ಯುಗದಲ್ಲಿ 35 ಮಹಿಳಾ ವಚನಕಾರ್ತಿಯರು ಇದ್ದರು. ವಚನಕಾರರು ಜನವಾಣಿಯನ್ನು ದೇವವಾಣಿಯಾಗಿಸಿದರು. ಹೊಸರೂಪದ ಸಾಹಿತ್ಯವನ್ನು ಅಂದಿನಿಂದಲೂ ಕವಿಗಳು ನೀಡುತ್ತಾ ಬಂದಿದ್ದಾರೆ. ಅದನ್ನು ಈಗಲೂ ಬಂಡಾಯ ಸಾಹಿತ್ಯವೆಂಬ ಹೊಸ ಪ್ರಕಾರವನ್ನು ಈ ಭಾಗದ ಲೇಖಕರು, ಕವಿಗಳು ನೀಡುತ್ತಾ ಬಂದಿದ್ದಾರೆ. ಈ ಭಾಷೆ ಮರಾಠಿ, ಉರ್ದು ಹಾಗೂ ಬ್ರಿಟಿಷರು ಬಂದ ಮೇಲೆ ಇಂಗ್ಲೀಷ್‌ ಹೀಗೆ ಹಿಂದಿನಿಂದಲೂ ಅನ್ಯ ಭಾಷೆಗಳ ದಾಳಿಗೆ ಒಳಗಾಗಿತ್ತು.

ADVERTISEMENT

ಆದರೂ ವಿಸ್ತಾರವಾಗಿ ಬೆಳೆಯಿತು. ರಾಜ್ಯ ಭೌಗೋಳಿಕವಾಗಿ ಬೇರೆ ರಾಜ್ಯಗಳಿಗಿಂತ ಸಣ್ಣದಾಗಿರಬಹುದು. ಆದರೆ ಸಾಹಿತ್ಯಿಕವಾಗಿ ಬಹಳಷ್ಟು ದೊಡ್ಡದಾಗಿದೆ. ಅಂತರ್ಜಾಲದ ಮೂಲಕವೂ ತಿರುಳುಗನ್ನಡ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಸಂಸದ ಸಂಗಣ್ಣ ಕರಡಿ ಹಾಗೂ ಮಹಿಳಾ ಆಯೋಗದ ಅಧ್ಯಕ್ಷೆ ಕೆ.ಜಿ. ನಾಗಲಕ್ಷ್ಮೀಬಾಯಿ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ರಾಜಶೇಖರ ಅಂಗಡಿ, ಸಿದ್ದಲಿಂಗಪ್ಪ ಕೊಟ್ನೇಕಲ್‌, ಕಾಂಗ್ರೆಸ್‌ ಮುಖಂಡ ಕರಿಯಪ್ಪ ಮೇಟಿ, ಉಪನ್ಯಾಸಕ ಶರಣಪ್ಪ ಬಿಳೆಎಲಿ ಇದ್ದರು. ಜಿ.ಎಸ್‌.ಗೋನಾಳ ಸ್ವಾಗತಿಸಿದರು. ಮಹೇಶಬಾಬು ಸುರ್ವೆ ಪ್ರಾಸ್ತಾವಿಕ ಮಾತನಾಡಿದರು. ಉಮೇಶ ಸುರ್ವೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.