ADVERTISEMENT

ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಿದ ಸಂಗೀತ ಶಾಲೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 9:03 IST
Last Updated 23 ಏಪ್ರಿಲ್ 2017, 9:03 IST

ಕುಷ್ಟಗಿ: ಅವರೆಲ್ಲ 10– 12 ವರ್ಷದೊಳಗಿನ ಚಿಣ್ಣರು, ಹಾರ್ಮೋನಿಯಂ, ತಬಲ ವಾದ್ಯಗಳ ಮೇಲೆ ಕೈಯಾಡಿಸುತ್ತ ‘ಶಿವ ಶಿವ ಶಿವ ಎಂದೊಮ್ಮೆ ಶಿವನಾಗಿ ಶಿವನ ಪೂಜಿಸೊ ಮನವೇ......’ ಹೀಗೆಂದು ತಮ್ಮ ಇಂಪಾದ ದನಿಯೊಂದಿಗೆ ಸ್ವರ, ಶೃತಿ ಶುದ್ಧವಾಗಿ ಹಾಡುತ್ತಾರೆ.ಈ ಹಾಡು ಕಿವಿಗೆ ಬಿದ್ದೊಡನೆ ನಿಂತು ಆಲಿಸದೆ ಹೋಗಲು ಮನಸ್ಸಾಗುವುದಿಲ್ಲ. ಇಲ್ಲಿನ ಸಂಗೀತ ಪಾಠಶಾಲೆಯಿಂದ ಕೇಳಿ ಬರುವ ಸಂಗೀತ ಮಾಧುರ್ಯವಿದು.ಇಲ್ಲಿನ ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಿದೆ.

ಬಡಕುಟುಂಬದಿಂದ ಬಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಸಂಗೀತ ಅಭ್ಯಾಸ ಮಾಡಿ ಉತ್ತಮ ಸಾಧನೆಗೈದಿರುವ ಲಿಂಗನಬಂಡಿ ಗ್ರಾಮದ ಹನುಮಂತಕುಮಾರ, ಮೌನೇಶ್‌ ದಾಸರ, ಮುದುಕೇಶ ಮತ್ತು ಶಾಂತಾನಂದ ಸಹೋದರರು ಈ ಸಂಗೀತ ಶಾಲೆ ಆರಂಭಿಸಿದ್ದು ಮಕ್ಕಳಿಗೆ ಸಂಗೀತದ ಜ್ಞಾನ ಉಣಬಡಿಸುತ್ತಿದ್ದಾರೆ.ಇಲ್ಲಿ ದಶಕಗಳ ಹಿಂದೆ ಅಸ್ತಿತ್ವದಲ್ಲಿದ್ದ ಸಾಂಸ್ಕೃತಿಕ ಕಲಾಕೂಟ ವಿದ್ಯಾರ್ಥಿಗಳಿಗೆ ಸಂಗೀತ ಕಲಿಯುವುದಕ್ಕೆ ವೇದಿಕೆ ಕಲ್ಪಿಸಿತ್ತು. ಆದರೆ ಕೆಲ ವರ್ಷಗಳ ನಂತರ ಸಂಸ್ಥೆ ಚಟುವಟಿಕೆ ಸ್ಥಗಿತಗೊಂಡನಂತರ ಸಂಗೀತ ಕಲಿಯುವ ಮಕ್ಕಳಿಗೆ ಅವಕಾಶ ಇಲ್ಲದಂತಾಗಿತ್ತು. ಇತ್ತೀಚಿನ ದಿನಗಳಲ್ಲಿ ಅನೇಕ ಪಾಲಕರಲ್ಲಿ ತಮ್ಮ ಮಕ್ಕಳು ಸಂಗೀತ ಜ್ಞಾನ ಪಡೆಯಬೇಕು ಎಂಬ ಅಪೇಕ್ಷೆ ಹೆಚ್ಚುತ್ತಿದೆ

ಕೆಲ ಖಾಸಗಿ ವಾಹಿನಿಗಳು ಸಂಗೀತದ ಪ್ರತಿಭೆಗೆ ವೇದಿಕೆ ಕಲ್ಪಿಸುತ್ತಿರುವುದರಿಂದ  ಸಹಜವಾಗಿ ಮಕ್ಕಳಲ್ಲಿ ಸಂಗೀತ ಕಲಿಯುವ ಆಸಕ್ತಿ ಬೆಳೆಯತ್ತಿದೆ. ಶಾಸ್ತ್ರೀಯವಾಗಿ ಸಂಗೀತ ಕಲಿಯುವ ಮಕ್ಕಳ ಆಸಕ್ತಿಗೆ ಶ್ರೀಗುರು ಪುಟ್ಟರಾಜ ಸಂಗೀತ ಪಾಠಶಾಲೆ ನೀರೆರೆಯುತ್ತಿದೆ.‘ಶಾಲೆಗೆ ಹೋಗುವ ಅನೇಕ ಮಕ್ಕಳು, ಶಿಕ್ಷಕರು ಸೇರಿದಂತೆ ಅನೇಕ ಹಿರಿಯರೂ ಸಹ ಪಾಠಶಾಲೆಯಲ್ಲಿ ಸಂಗೀತ ಕಲಿಯುತ್ತಿದ್ದಾರೆ. ಸುಮಾರು ಐವತ್ತಕ್ಕೂ ಅಧಿಕ ಮಕ್ಕಳು ಹಾಡುಗಾರಿಕೆಯ ಜೊತೆಗೆ ಹಾರ್ಮೋನಿಯಂ, ತಬಲ ವಾದ್ಯಗಳನ್ನೂ ಕಲಿಯುತ್ತಿದ್ದಾರೆ. ಪುಟ್ಟ ಪುಟ್ಟ ಮಕ್ಕಳು ವಾದ್ಯಗಳ ಮೇಲೆ ಬೆರಳಾಡಿಸುವುದು, ಶೃತಿ ಶುದ್ಧವಾಗಿ ಆಲಾಪದೊಂದಿಗೆ ರಾಗಬದ್ಧವಾಗಿ ಹಾಡುವುದು ಕೇಳುಗರ ಮನಸ್ಸಿಗೆ ಮುದನೀಡುತ್ತದೆ. ಭವಿಷ್ಯದಲ್ಲಿ ಉತ್ತಮ ಸಂಗೀತಗಾರರಾಗುವ ಲಕ್ಷಣಗಳು ಪ್ರತಿ ಮಗುವಿನಲ್ಲಿದೆ’ ಎಂದು ಸಂಗೀತ ಶಿಕ್ಷಕ ಹನುಮಂತಕುಮಾರ ಹೆಮ್ಮೆ ಪಡುತ್ತಾರೆ.

ADVERTISEMENT

ಜೂನಿಯರ್‌, ಸೀನಿಯರ್‌, ವಿದ್ವತ್‌ಪೂರ್ವ ಮತ್ತು ವಿದ್ವತ್‌ ಅಂತಿಮ ಸಂಗೀತ ಇವನ್ನೆಲ್ಲ ಪರಿಪೂರ್ಣ ಕಲಿಕೆಗೆ ಪಾಠಶಾಲೆಯಲ್ಲಿ ದಾಸರ ಸಹೋದರರು ಅವಕಾಶ ಕಲ್ಪಿಸಿದ್ದಾರೆ. ಸಂಗೀತವನ್ನೇ ಉಸಿರಾಗಿಸಿಕೊಂಡಿರುವ ಈ ಸಹೋದರರು ಬಿಡುವಿನ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಪುರಾಣ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಗೀತ ಕಚೇರಿ ನಡೆಸಿಕೊಡುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.

‘ಸಂಗೀತ ಶಾಲೆಯಿಂದಲೇ ಹಣ ಗಳಿಸಬೇಕೆಂಬ ಅಪೇಕ್ಷೆ ಇಲ್ಲ. ಗುರುವಿನಿಂದ ಕಲಿತ ವಿದ್ಯೆ ನಿಂತ ನೀರಾಗಬಾರದು, ಬೇರೆಯವರಿಗೂ ಸಂಗೀತ ಜ್ಞಾನ ಹಂಚಬೇಕು ಎಂಬ ಅಭಿಲಾಷೆಯಿಂದ ಮಕ್ಕಳಿಗೆ ಸಂಗೀತ ಪಾಠ ಕಲಿಸುತ್ತಿದ್ದೇವೆ’ ಎನ್ನುತ್ತಾರೆ ಹನುಮಂತ ಕುಮಾರ, ಮೌನೇಶ್‌. ಇಲ್ಲಿ ಸಾಕಷ್ಟು ಬಾಲ ಪ್ರತಿಭೆಗಳಿವೆ ಆದರೆ ಕಲಿಕೆಗೆ ಅವಕಾಶ ಇರಲಿಲ್ಲ.  ಈ ಸಂಗೀತ ಶಾಲೆಯಿಂದ ಅನೇಕ ಪ್ರತಿಭೆಗಳು ಹೊರಹೊಮ್ಮುವುದಕ್ಕೆ ಸಾಧ್ಯವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಪಾಲಕ ಎನ್‌.ಮುಖೇಶ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.