ADVERTISEMENT

‘ಮಕ್ಕಳ ಹಕ್ಕು ರಕ್ಷಣೆ ಎಲ್ಲರ ಕರ್ತವ್ಯ’

ಜಾಲಿಹಾಳದಲ್ಲಿ ‘ಮಕ್ಕಳ ಹಕ್ಕುಗಳ ಗ್ರಾಮಸಭೆ’

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 12:00 IST
Last Updated 7 ಡಿಸೆಂಬರ್ 2017, 12:00 IST

ಕುಷ್ಟಗಿ: ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ಸರ್ಕಾರ ಹಲವು ಕಾನೂನುಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಸಬ್‌ ಇನ್‌ಸ್ಪೆಕ್ಟರ್‌ ವಿಶ್ವನಾಥ ಹಿರೇಗೌಡರ ಹೇಳಿದರು.

ತಾಲ್ಲೂಕಿನ ಜಾಲಿಹಾಳ ಗ್ರಾಮದಲ್ಲಿ ಬುಧವಾರ ನಡೆದ ಶಿರಗುಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಶಾಲೆಗಳ ‘ಮಕ್ಕಳ ಹಕ್ಕುಗಳ ಗ್ರಾಮಸಭೆ’ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ದೇಶದ ಭವಿಷ್ಯದ ಸಂಪತ್ತು. ಅವರಿಗೆ ಇತರರಂತೆ ಜೀವಿಸುವ, ಅಭಿವೃದ್ಧಿ ಹೊಂದುವ, ಶಿಕ್ಷಣ ಪಡೆಯುವ ಹಕ್ಕುಗಳನ್ನು ಕಾನೂನು ನೀಡಿದೆ. ಒಂದೊಮ್ಮೆ ಹಕ್ಕುಗಳಿಂದ ವಂಚಿತರಾದರೆ ಅಥವಾ ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ಕಾನೂನಿನ ನೆರವು ಕೂಡ ದೊರೆಯುತ್ತದೆ ಎಂದರು.

ADVERTISEMENT

ಸಾಮಾಜಿಕ ವ್ಯವಸ್ಥೆ ಸುಧಾರಿಸಿದರೂ ಸಮಾಜದಲ್ಲಿ ಇನ್ನೂ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಹೆಣ್ಣು ಮಕ್ಕಳಿಗೆ ಅಗತ್ಯ ಶಿಕ್ಷಣ ಕೊಡಿಸದೆ ಇರುವ ಸಂಗತಿಗಳೂ ಬೆಳಕಿಗೆ ಬರುತ್ತಿವೆ. ಎಲ್ಲ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡುವುದಕ್ಕೆ ಪಾಲಕರು ಮುಂದಾಗಬೇಕು. ಬಾಲ್ಯದಲ್ಲಿ ದೊರೆಯಬೇಕಾದ ಅವಕಾಶಗಳಿಂದ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯವತಿ ಮೇಗೂರು ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಬದಾಮಿ, ಎಸ್‌.ಡಿ.ಎಂ.ಸಿ ಅಧ್ಯಕ್ಷೆ ಶಕುಂತಲ ಬುರ್ಲಿ, ಎಪಿಎಂಸಿ ಸದಸ್ಯ ಶಂಕರಗೌಡ ಪಾಟೀಲ, ಸಂಗನಗೌಡ ನಿಡಶೇಸಿ, ದೊಡ್ಡಬಸಪ್ಪ ಜಂಬಲದಿನ್ನಿ, ಅಮರೇಶ ಅಕ್ಕಿ, ಪ್ರಮುಖರಾದ ಪರಸಪ್ಪ ಮೇಗೂರು, ಪ್ರಕಾಶ ಮನ್ನೇರಾಳ, ವಿರಭದ್ರಪ್ಪ ಲಿಂಗಸಗೂರು, ಅಮರೇಶ ಕರಡಿ ಮತ್ತು ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪಾಲಕರು, ಶಿಕ್ಷಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.