ADVERTISEMENT

ಮಾನವ ಸಂತತಿ ಬೆಳೆಸುವ ಹೊಣೆ ತಾಯ್ತನ

ಕೊಪ್ಪಳ ನಗರದಲ್ಲಿ ಸಡಗರದ ಅವ್ವನ ಹಬ್ಬ ಕಾರ್ಯಕ್ರಮ: ಸಂಪನ್ಮೂಲ ವ್ಯಕ್ತಿ ವಾಣಿ ಪೆರಿಯೋಡಿ

​ಪ್ರಜಾವಾಣಿ ವಾರ್ತೆ
Published 24 ಮೇ 2016, 9:44 IST
Last Updated 24 ಮೇ 2016, 9:44 IST

ಕೊಪ್ಪಳ: ತಾಯ್ತನ ಎಂಬುದು ಮಾನವ ಸಂತತಿ ಬೆಳೆಸುವ ಗುರುತರವಾದ ಜವಾಬ್ದಾರಿ ಎಂದು ಸಂಪನ್ಮೂಲ ವ್ಯಕ್ತಿ ದಕ್ಷಿಣ ಕನ್ನಡ ಜಿಲ್ಲೆ ಯ ವಾಣಿ ಪೆರಿಯೋಡಿ ಹೇಳಿದರು. ನಗರದ ವಾಲ್ಮೀಕಿ ಭವನದಲ್ಲಿ ಸೋಮವಾರ ಜಿಲ್ಲಾ ತಾಯ್ತನ ರಕ್ಷಣಾ ವೇದಿಕೆ ವತಿಯಿಂದ ನಡೆದ ಅವ್ವನ ಹಬ್ಬ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

‘ಪ್ರತಿಯೊಬ್ಬ ಮಹಿಳೆಯ ಜೀವನದ ಪ್ರಮುಖ ಘಟ್ಟವಾಗಿರುವ ತಾಯ್ತನದಲ್ಲಿ ಹೆರಿಗೆ ಸಂಬಂಧಿತ ಕಾರಣಗಳಿಂದ ಮಹಿಳೆ ತನ್ನ ಪ್ರಾಣ ಕಳೆದುಕೊಳ್ಳುತ್ತಿದ್ದಾಳೆ. ಈ ಸಾವಿನ ಸಂಖ್ಯೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ತಾಯ್ತನ ಆಂದೋಲನ ಸಂಸ್ಥೆ ಆಶ್ರಯದಲ್ಲಿ ಜಿಲ್ಲಾ ತಾಯ್ತನ ರಕ್ಷಣಾ ವೇದಿಕೆ ಕಾರ್ಯ ನಿರ್ವಹಿಸುತ್ತಿದೆ.

ವೇದಿಕೆಯು ಸಾರ್ವಜನಿಕರಲ್ಲಿ ತಾಯ್ತನದ ಆರೋಗ್ಯ ಸೇವೆ, ಬಾಲ್ಯವಿವಾಹ ತಡೆ, ಸುರಕ್ಷಿತ ತಾಯ್ತನದ ಕುರಿತು ಜಾಗೃತಿ ಮೂಡಿಸುತ್ತಿದೆ. ಜಿಲ್ಲೆಯಲ್ಲಿ ವೈದ್ಯಕೀಯ ಸೇವೆಗಳು ಎಷ್ಟೇ ಮುಂದುವರಿದರೂ ತಾಯಂದಿರ ಸಾವು ಮುಂದುವರಿದಿದೆ. ಅದನ್ನು ತಪ್ಪಿಸುವಲ್ಲಿ ಪ್ರತಿಯೊಬ್ಬರೂ ವೇದಿಕೆಯೊಂದಿಗೆ ಕೈಜೋಡಿಸಬೇಕು. ಎಲ್ಲರೂ ಜಿಲ್ಲೆಯನ್ನು ತಾಯಿ–ಮಗು ಮರಣಮುಕ್ತ ಜಿಲ್ಲೆಯನ್ನಾಗಿಸಲು ಪಣ ತೊಡಬೇಕು’ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ಆರೋಗ್ಯಾಧಿಕಾರಿ ಶಿವಾನಂದ ಪೂಜಾರ ಮಾತನಾಡಿ, ‘ತಾಯಂದಿರಿಗಾಗಿ ಆಚರಿಸಲಾಗುತ್ತಿರುವ ಅವ್ವನ ಹಬ್ಬ ಮಹತ್ವಪೂರ್ಣ ಕಾರ್ಯಕ್ರಮ. ಕಸ್ತೂರಬಾ ಅವರ ಜನ್ಮದಿನಾಚರಣೆಯಾಗಿರುವ ಇಂದು ಈ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಪ್ರತಿಯೊಬ್ಬರ ಜೀವನಕ್ಕೂ ತಾಯಿ ಅತ್ಯವಶ್ಯಕ. ಈ ಹಿಂದೆ ಜಿಲ್ಲೆಯಲ್ಲಿ ನಡೆಯುವ 1ಲಕ್ಷ ಹೆರಿಗೆಯಲ್ಲಿ 150–160 ತಾಯಿ ಶಿಶು ಮರಣಗಳು ದಾಖಲಾಗುತ್ತಿದ್ದವು.

ಆದರೆ ಜಿಲ್ಲೆಯಲ್ಲಿ ಪ್ರಸ್ತುತ ತಾಯಿ ಶಿಶು ಮರಣ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ಆರೋಗ್ಯ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಕಾರ ಹಾಗೂ ಹೆರಿಗೆ ಆಸ್ಪತ್ರೆಯಲ್ಲಿ ನಡೆಯುತ್ತಿರುವುದು ಕಾರಣ. ತಾಯಿ ಮಗುವಿಗೆ ಜನ್ಮ ನೀಡುವಾಗ ತಾನೂ ಸಹ ಪುನರ್‌ಜನ್ಮ ಪಡೆಯುತ್ತಾಳೆ. ಅಂತಹ ಕಷ್ಟಕರ ಸಂದರ್ಭ ಎದುರಿಸುವ ತಾಯಂದಿರಿಗೆ ಈ ಹಬ್ಬದ ಮೂಲಕ ಗೌರವ ಸಲ್ಲಿಸಲಾಗುತ್ತಿದೆ’ ಎಂದು ಹೇಳಿದರು.

ತಾಯಂದಿರಿಗೆ ಆಹಾರ, ವಾತಾವರಣ, ಗರ್ಭಿಣಿಯರಲ್ಲಿ ರಕ್ತಹೀನತೆಗೆ ಸಂಬಂಧಿಸಿದ ವಿಶೇಷ ವಸ್ತುಪ್ರದರ್ಶನ ನಡೆಯಿತು. ವೇದಿಕೆ ಕಾರ್ಯಕ್ರಮದ ಬಳಿಕ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಮಾಡಲಾಯಿತು. ಜಿಲ್ಲಾ ತಾಯ್ತನ ರಕ್ಷಣಾ ವೇದಿಕೆ ಅಧ್ಯಕ್ಷ ಆದಪ್ಪ ಮುರಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾನ ಇಲಾಖೆ ಸಲಹೆಗಾರರಾದ ಶಾಂತಾ ಕಟ್ಟಿಮನಿ, ಬೆಂಗಳೂರಿನ ಸಂಪನ್ಮೂಲ ವ್ಯಕ್ತಿ ವಿನಾಲಿನಿ ಮಾರ್ತಾನಿ, ಶರಣಮ್ಮ ಇದ್ದರು.

** *** **
ತಾಯಿ ಮಗುವಿಗೆ ಜನ್ಮ ನೀಡುವಾಗ ತಾನೂ ಸಹ ಪುನರ್‌ಜನ್ಮ ಪಡೆಯುತ್ತಾಳೆ.
-ಶಿವಾನಂದ ಪೂಜಾರ, 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಉಪ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.