ADVERTISEMENT

ರೈತರಿಂದ ಜೆಸಿಬಿಗೆ ಬೆಂಕಿ ಹಚ್ಚಲು ಯತ್ನ

​ಪ್ರಜಾವಾಣಿ ವಾರ್ತೆ
Published 4 ಮೇ 2016, 11:31 IST
Last Updated 4 ಮೇ 2016, 11:31 IST

ಗಂಗಾವತಿ: ಅನಧಿಕೃತ ಕೆರೆ ನಿರ್ಮಾಣಕ್ಕೆ ಮುಂದಾದ ಕಾಂಗ್ರೆಸ್ ನಾಯಕ ಹಾಗೂ ಸಚಿವ ಶಿವರಾಜ ತಂಗಡಗಿ ಅವರ ಆಪ್ತರೊಬ್ಬರ ಕಾರ್ಯವೈಖರಿಯಿಂದ ಆಕ್ರೋಶಗೊಂಡ ರೈತರು ಜೆಸಿಬಿ ಹಾಗೂ ಮೊರಂ ಸಾಗಿಸಲು ಯತ್ನಿಸಿದ್ದ ಟಿಪ್ಪರ್‌ಗಳಿಗೆ ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ತಾಲ್ಲೂಕಿನ ಮರಳಿ ಹೋಬಳಿಯ ಆಚಾರ ನರಸಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಕಂದಾಯ ಇಲಾಖೆಯ ನಿರೀಕ್ಷಕ ಹನುಮಂತಪ್ಪ ಅವರನ್ನು, ಅಕ್ರಮ ನಡೆಯುತ್ತಿದ್ದರೂ ತಡೆಯುವಲ್ಲಿ ವಿಫಲರಾಗಿದ್ದೀರಿ ಎಂದು ಆರೋಪಿಸಿ ರೈತರು ತರಾಟೆಗೆ ತೆಗೆದುಕೊಂಡರು. 

‘ಗ್ರಾಮದ ಸರ್ವೇ ನಂಬರ್ 61ರಲ್ಲಿ ಹರಿಯುತ್ತಿರುವ ಹಳ್ಳದ ಪಕ್ಕದಲ್ಲಿ ಕಾಂಗ್ರೆಸ್ ಮುಖಂಡ ರೆಡ್ಡಿ ವೀರರಾಜು ಅವರು ತಮ್ಮ ಒಂದೂವರೆ ಎಕರೆ ತಮ್ಮ ಜಮೀನು ಹಾಗೂ ಹಳ್ಳದ ಮುಕ್ಕಾಲು ಎಕರೆ ಸ್ಥಳ ಅತಿಕ್ರಮಿಸಿ ಟ್ಯಾಂಕ್ ನಿರ್ಮಿಸಲು ಮುಂದಾಗಿದ್ದಾರೆ. ಇದರಿಂದಾಗಿ ಟ್ಯಾಂಕ್ ಮೇಲ್ಭಾಗದ ರೈತರಿಗೆ ನೀರಿನ ಸಮಸ್ಯೆ ಎದುರಾಗುತ್ತದೆ. ಈ ಬಗ್ಗೆ ಪ್ರಶ್ನಿಸಿದರೆ  ಉದ್ಧಟತನ ಪ್ರದರ್ಶಿಸುತ್ತಿದ್ದಾರೆ’ ಎಂದು ರೈತರಾದ ಶರಣಪ್ಪ, ಬಸವರಾಜ, ಬಸಪ್ಪ ಮೊದಲಾದವರು ಆರೋಪಿಸಿದರು.

‘ಕೆರೆ ಸ್ಥಳ ಒತ್ತುವರಿ ಮಾಡಿ ಕೆರೆಗೆ ಟ್ಯಾಂಕ್ ನಿರ್ಮಿಸುತ್ತಿರುವ ಬಗ್ಗೆ ರೈತರಿಂದ ದೂರು ಬಂದ ಹಿನ್ನೆಲೆ ತಹಶೀಲ್ದಾರ ಸ್ಥಳಕ್ಕೆ ಭೇಟಿ ನೀಡಿ ವರದಿ ಬಂದಿತ್ತು. ಇಲ್ಲಿ ರೈತರು ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ’ ಎಂದು ಕಂದಾಯ ನಿರೀಕ್ಷಕ ಹನುಮಂತಪ್ಪ ತಿಳಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಯಾವುದೇ ತೆರಿಗೆ ಪಾವತಿಸದೇ ಕೆರೆಯಲ್ಲಿ ಬಂದ ಮೊರಂನ್ನು ಅನಧಿಕೃತವಾಗಿ ರೈಲ್ವೆ ಕಾಮಗಾರಿಗೆ ಬಳಸಲಾಗುತ್ತಿದೆ ಎಂದು ರೈತರು ದೂರಿದರು. ‘ಕೆರೆ ನಿರ್ಮಾಣ ಮತ್ತು ಅಕ್ರಮ ಮೊರಂ ಸಾಗಾಣಿಕೆ  ಬಗ್ಗೆ ಪರಿಶೀಲಿಸಿ ದೂರು ದಾಖಲಿಸಲಾಗುವುದು ಎಂದು ತಹಶೀಲ್ದಾರ್‌ ಚಂದ್ರಕಾಂತ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.