ADVERTISEMENT

ವಿದ್ಯಾರ್ಥಿನಿಯರ ಗೋಳು ಕೇಳೋರಿಲ್ಲ

ತಾವರಗೇರಾ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 13:08 IST
Last Updated 15 ಜೂನ್ 2018, 13:08 IST
ತಾವರಗೇರಾ ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ಮಹಿಳಾ ವಸತಿ ಶಾಲೆಯ ವಿದ್ಯಾರ್ಥಿಗಳು ತರಗತಿ ಕೊಠಡಿಯಲ್ಲಿ ನೆಲದ ಮೇಲೆ ಕುಳಿತಿರುವದು.
ತಾವರಗೇರಾ ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ಮಹಿಳಾ ವಸತಿ ಶಾಲೆಯ ವಿದ್ಯಾರ್ಥಿಗಳು ತರಗತಿ ಕೊಠಡಿಯಲ್ಲಿ ನೆಲದ ಮೇಲೆ ಕುಳಿತಿರುವದು.   

ತಾವರಗೇರಾ: ಪಟ್ಟಣದ ಕಿತ್ತೂರರಾಣಿ ಚನ್ನಮ್ಮ ಮಹಿಳಾ ವಸತಿ ಶಾಲೆಯು ಆರಂಭಗೊಂಡು 9 ವರ್ಷ ಕಳೆದರು ಇಲ್ಲಿಯವರೆಗೆ ತರಗತಿಯಲ್ಲಿ ಮಕ್ಕಳು ಕುಳಿತು ಕೊಳ್ಳಲು ಡೆಸ್ಕ್‌ಗಳು ಇಲ್ಲ. ಎಮ್ಮೆ ಖರೀದಿಸಿ ಹಗ್ಗ ಖರೀದಿಗೆ ಹಿಂಜರಿದರು ಎಂಬ ಮಾತಿನಂತೆ ಇದೆ.

2009ನೇ ಸಾಲಿನಲ್ಲಿ ಕ್ಷೇತ್ರದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ಈ ಶಾಲೆಯ ಮುಂಜೂರಾತಿ ಮಾಡಿಸಿದರು. 6 ವರ್ಷಗಳ ಕಾಲ ಈ ವಸತಿ ಶಾಲೆ ಬಾಡಿಗೆ ಶೆಡ್ ನಲ್ಲಿ ನಡೆದಿತ್ತು. ನಂತರ 5 ಕೋಟಿಗಿಂತ ಹೆಚ್ಚು ಅನುದಾನ ಮಂಜೂರಾತಿ ಮಾಡಿಸಿ ಗಾಂವ್ ಠಾಣಾ ಜಾಗದಲ್ಲಿ ಸುಸಜ್ಜಿತವಾದ ಕಟ್ಟಡಗಳನ್ನು ನಿರ್ಮಿ ಸಲು ಜಾಲನೆ ನೀಡಿದ್ದರು.

2015 ರಲ್ಲಿ ಈ ನೂತನ ಸ್ಥಳದಲ್ಲಿ ವಸತಿ ಶಾಲೆಯ ಆಡಳಿತ ಭವನ, ತರಗತಿಗಳ ಕಟ್ಟಡ, ಭೋಜನಾಲಯ, ಬಾಲಕಿಯರಿಗೆ ವಸತಿ ನಿಲಯ, ಶೌಚಾಲಯ ನಿರ್ಮಾಣಗೊಂಡು ಬಾಡಿಗೆ ಶೆಡ್ ನಿಂದ ಹೊಸ ಕಟ್ಟಡಕ್ಕೆ ಶಾಲೆಯ ಸ್ಥಳಾಂತರ ಮಾಡಲಾಯಿತು.

ADVERTISEMENT

ಆದರೆ, 250 ವಿದ್ಯಾರ್ಥಿನಿಯರು ತರಗತಿಯ ಬೋಧನೆಗಾಗಿ ನೆಲದ ಮೇಲೆ ಕುಳಿತು ಅಭ್ಯಾಸ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು.

ಈ ಮೊದಲು ಶಾಲೆ ತಲುಪಲು ಸರಿಯಾದ ರಸ್ತೆ ಇಲ್ಲದ ಕಾರಣ ಮಕ್ಕಳ ಪಾಲಕರು ಬಹಳ ಪ್ರಯಾಸ ಪಡಬೇಕಾಗಿತ್ತು. ಅದಕ್ಕೆ ರೈತರೊಬ್ಬರ ಜಮೀನಿನಲ್ಲಿ ರಸ್ತೆಗಾಗಿ ಅವರ ಜಮೀನನ್ನು ಖರೀದಿಸಿ ಡಾಂಬರಿಕರಣ ನಿರ್ಮಾಣ ಮಾಡಿದ್ದು, ಸದ್ಯ ಸಮರ್ಪಕ ದಾರಿಯಾಗಿದೆ.

ಇದೀಗ ಶಾಲಾ ಆವರಣದಲ್ಲಿ , ಕರ್ನಾಟಕ ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ, 3 ಕೋಟಿ 60 ಲಕ್ಷ ರೂಗಳ ಅನುದಾನದಲ್ಲಿ ಒಂದು ಪ್ರಾಚಾರ್ಯರ ವಸತಿ ಗೃಹ, ನಾಲ್ಕು ಬೋಧಕೇತರ ಸಿಬ್ಬಂದಿಗೆ, ಎಂಟು ಬೋಧಕರ ಸಿಬ್ಬಂದಿಗೆ ವಸತಿ ಗೃಹಗಳು ನಿರ್ಮಾಣವಾಗಿದ್ದು, ಉದ್ಘಾಟನೆಗಾಗಿ ಕಾಯ್ದು ನಿಂತಿವೆ. ಇದೇ ಅನುದಾನದಲ್ಲಿ ರಸ್ತೆಗಾಗಿ ನೀಡಿದ ಜಮೀನಿನಲ್ಲಿ 700 ಮೀಟರ್ ಲಿಂಗಸೂರು ಮುಖ್ಯ ರಸ್ತೆಯಿಂದ ಶಾಲೆಯ ವರೆಗೆ ಡಾಂಬರೀಕರಣ ಮಾಡಲಾಗಿದೆ. ಸುಸಜ್ಜಿತ ಕಟ್ಟಡ ಈ ವಸತಿ ಶಾಲೆಗೆ ಮೂಲಸೌಲಭ್ಯ ಒದಗಿಸುವ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಕುಳಿತು ಕೊಳ್ಳಲು ಡೆಸ್ಕ್‌ಗಳು ಈಗಾಗಲೇ ವಿಶೇಷ ಅನುದಾನದಲ್ಲಿ ಮುಂಜೂರಾಗಿದ್ದು, ಇಲ್ಲಿಗೆ ತಲುಪುವ ವ್ಯವಸ್ಥೆ ಮಾಡಲಾಗುವದು
ನಾಗರಾಜ ಸಂಗನಾಳ , ಪ್ರಾಚಾರ್ಯ

ಕೆ.ಶರಣಬಸವ ನವಲಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.