ADVERTISEMENT

ಕಲ್ಲುಪುಡಿ ಘಟಕದಿಂದ ದೂಳು: ಬೆಳೆಗೆ ಹಾನಿ

ನಾರಾಯಣರಾವ ಕುಲಕರ್ಣಿ
Published 21 ಫೆಬ್ರುವರಿ 2018, 9:08 IST
Last Updated 21 ಫೆಬ್ರುವರಿ 2018, 9:08 IST
ಕುಷ್ಟಗಿ ತಾಲ್ಲೂಕು ಕಂದಕೂರು ಸೀಮಾಂತರದ ರುದ್ರಪ್ಪ ರೈತರ ಜಮೀನಿನ ಕಡಲೆ ಬೆಳೆ ದೂಳಿನಿಂದ ನಿರೀಕ್ಷಿತ ಇಳುವರಿ ಬಾರದಿರುವುದು
ಕುಷ್ಟಗಿ ತಾಲ್ಲೂಕು ಕಂದಕೂರು ಸೀಮಾಂತರದ ರುದ್ರಪ್ಪ ರೈತರ ಜಮೀನಿನ ಕಡಲೆ ಬೆಳೆ ದೂಳಿನಿಂದ ನಿರೀಕ್ಷಿತ ಇಳುವರಿ ಬಾರದಿರುವುದು   

ಕುಷ್ಟಗಿ: ಖಾಸಗಿ ಮೂಲದ ಹೆದ್ದಾರಿ ನಿರ್ಮಾಣ ಕಂಪನಿಗೆ ಸೇರಿದ ಜಲ್ಲಿಕಲ್ಲು ತಯಾರಿಸುವ, ಪುಡಿ ಮಾಡುವ ಮತ್ತು ಡಾಂಬರ್‌ ಮಿಕ್ಸಿಂಗ್‌ ಕೈಗಾರಿಕಾ ಘಟಕದ ದೂಳಿನಿಂದಾಗಿ ತಾಲ್ಲೂಕಿನ ಕಂದಕೂರು ಮತ್ತು ಪಕ್ಕದ ಯಡ್ಡೋಣಿ ಸೀಮಾಂತರ ಪ್ರದೇಶದಲ್ಲಿನ ಜಮೀನಿನಲ್ಲಿರುವ ಬೆಳೆಗಳಿಗೆ ಹಾನಿಯಾಗಿದೆ ಎಂದು ಅಲ್ಲಿನ ರೈತರು ದೂರಿದ್ದಾರೆ.

ಒಂದು ವರ್ಷದಿಂದ ಈ ಘಟಕದಲ್ಲಿ ಹಗಲು ರಾತ್ರಿ ಎನ್ನದೇ ಕೆಲಸ ನಡೆಯುತ್ತಿದ್ದು ಅಕ್ಕಪಕ್ಕದಲ್ಲಿರುವ ಅನೇಕ ರೈತರ ಕೃಷಿ ಬೆಳೆಗಳು ಮತ್ತು ಹಣ್ಣು, ತರಕಾರಿ, ಬೀಜೋತ್ಪಾದನೆ ತಾಕುಗಳು ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳ ಮೇಲೆ ದೂಳು ಬೀಳುತ್ತಿರುವುದರಿಂದ ಬೆಳೆ ಹಾನಿಯಾಗಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ಕುಷ್ಟಗಿ ತಾಲ್ಲೂಕಿನ ನೆರೆಬೆಂಚಿ, ಕುರುಬನಾಳ ರೈತರಾದ ಹನುಮೇಶ ಗಾದಾರಿ, ರುದ್ರಪ್ಪ ತುಮ್ಮರಗುದ್ದಿ ಇತರರು ಮಂಗಳವಾರ ಹೇಳಿದರು.

ನಾಲ್ಕು ಎಕರೆಯಲ್ಲಿ ಹಾಗಲಕಾಯಿ ಬೀಜೋತ್ಪಾದನೆಯಲ್ಲಿ ತೊಡಗಿದ್ದೆ, ಬೆಳವಣಿಗೆ ಕುಂಠಿತಗೊಂಡಿದ್ದು ಬಳ್ಳಿ ಸೊರಗಿ ಹೋಗಿದೆ. ಸಸಿಗಳ ನಾಟಿ, ಹನಿ ನೀರಾವರಿ ವ್ಯವಸ್ಥೆ ಅಳವಡಿಕೆ, ಕೂಲಿಕಾರ್ಮಿಕರು ಸೇರಿದಂತೆ ಸಾಕಷ್ಟು ಹಣ ಖರ್ಚು ಮಾಡಿದ್ದು ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದೆ. ಸ್ವಾಭಾವಿಕವಾಗಿ ಎರಡು ಎಕರೆಗೆ ಗರಿಷ್ಠ 3 ಕ್ವಿಂಟಲ್‌ ಬೀಜ ಬರಬೇಕು, ಆದರೆ, 60–70 ಕೆ. ಜಿ ಪ್ರಮಾಣದಷ್ಟು ಬೀಜ ಬಂದಿದೆ. ಅದೇ ರೀತಿ ಎರಡು ಎಕರೆಯಲ್ಲಿ ಬೆಳೆಯಲಾಗಿದ್ದ ಕಲ್ಲಂಗಡಿ ಬೀಜೋತ್ಪಾದನೆಗೂ ಬಹಳಷ್ಟು ಖರ್ಚಾಗಿದೆ. ಹಾಗಲ, ಕಲ್ಲಂಗಡಿ ಇತರೆ ಬೆಳೆಗಳ ಬೀಜೋತ್ಪಾದನೆಯಲ್ಲಿ ಹೆಣ್ಣು ಹೂವಿನ ಮೇಲೆ ಕೃತಕವಾಗಿ ಪರಾಗಸ್ಪರ್ಶ ನಡೆಸಬೇಕಾಗುತ್ತದೆ. ಆದರೆ, ರಾತ್ರಿ ಇಡಿ ದೂಳು ಬೆಳೆಗಳ ಮೇಲೆ ಬೀಳುತ್ತಿದ್ದರುದರಿಂದ ಬೆಳಗ್ಗೆ ಬಂದು ಪರಾಗಸ್ಪರ್ಶ ಪ್ರಕ್ರಿಯೆ ನಡೆಸಿದರೂ ಕಾಯಿಕಟ್ಟಲಿಲ್ಲ ಎಂದು ರೈತರು ವಿವರಿಸಿದರು.

ADVERTISEMENT

ಕಂದಕೂರು ಸೀಮಾಂತರದಲ್ಲಿ ಹಾಗಲ ಬೀಜೋತ್ಪಾದನೆಯಲ್ಲಿ ತೊಡಗಿದ್ದು ಅವರ ಬೆಳೆಯ ಸ್ಥಿತಿಯೂ ಅದೇ ಆಗಿದೆ. ಎರಡು ಎಕರೆಯಲ್ಲಿನ ಶೇಂಗಾ ಬೆಳೆ ಕೇವಲ 6 ಚೀಲ ತೀರಾ ಕಡಿಮೆ ಇಳುವರಿ ಬಂದಿದೆ. ನೀರಾವರಿಯಲ್ಲಿ ಬೆಳೆದ ತೊಗರಿ ಕಾಯಿಕಟ್ಟಲಿಲ್ಲ. ಹಿಂಗಾರಿ ಕಡಲೆ ಬೆಳೆ ಇಳುವರಿಯೂ ಕುಂಠಿತವಾಯಿತು ಎಂದು ರೈತ ರುದ್ರಪ್ಪ ತುಮ್ಮರಗುದ್ದಿ ಸಮಸ್ಯೆ ವಿವರಿಸಿದರು. ದಾಳಿಂಬೆ, ದ್ರಾಕ್ಷಿ ಬೆಳೆ ಮೇಲೆ ದೂಳು ಆವರಿಸಿ ದುಷ್ಪರಿಣಾಮ ಬೀರಿದೆ ಎಂದು ಅಳಲು ತೋಡಿಕೊಂಡರು.

ಬಾರದ ಪರಿಹಾರ: ಬೆಳೆ ಹಾನಿ ಯಾಗಿದ್ದನ್ನು ಕಂಪನಿ ಅಧಿಕಾರಿಗಳ ಗಮನಕ್ಕೆ ತಂದು ಬೆಳೆ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ. ಆದರೆ, ಕಂಪನಿ ತಮ್ಮ ಮನವಿಗೆ ಸ್ಪಂದಿಸಿಲ್ಲ ಎನ್ನುತ್ತಾರೆ ರೈತರು. ಈ ಕುರಿತು ಮಾಹಿತಿಗೆ ಕಂಪನಿ ಸಿಬ್ಬಂದಿ ಸಂಪರ್ಕ ಸಾಧ್ಯವಾಗಲಿಲ್ಲ.

ಹಾನಿ ಹೇಗೆ?: ಸೂರ್ಯನ ಬೆಳಕಿನಲ್ಲಿ ದ್ಯುತಿ ಸಂಶ್ಲೇಷಣೆಯಿಂದ ಯಾವುದೇ ಸಸ್ಯ ತನ್ನ ಆಹಾರ ತಯಾರಿಸಿಕೊಳ್ಳುತ್ತದೆ. ಒಂದೊಮ್ಮೆ ದೂಳು ಇದ್ದರೆ ದ್ಯುತಿಸಂಶ್ಲೇಷಣೆಗೆ ಅಡ್ಡಿಯಾಗಿ ಬೆಳೆಯ ಬೆಳವಣಿಗೆ ಕುಂಠಿತಗೊಂಡ ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹಿರೇವಂಕಲಕುಂಟಾ ಹೋಬಳಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಉಮೇಶ ಕಾಳೆ ವಿವರಿಸಿದರು. ತೋಟಗಾರಿಕೆ ಬೆಳೆಗಳು ಹಾನಿ ಯಾಗಿರುವ ಮಾಹಿತಿ ಇಲ್ಲ, ರೈತರು ಅರ್ಜಿ ಸಲ್ಲಿಸಿದರೆ ಪರಿಶೀಲಿಸುವುದಾಗಿ ಹೇಳಿದರು.

* * 

ಪರಿಹಾರ ನೀಡುವುದಾಗಿ ಕಂಪನಿ ಅಧಿಕಾರಿಗಳು ವರ್ಷದಿಂದಲೂ ಹೇಳುತ್ತಿದ್ದಾರೆ. ಆದರೆ ಭರವಸೆ ಈಡೇರಿಲ್ಲ.
ಹನುಮೇಶ ಗಾದಾರಿ,ರುದ್ರಪ್ಪ ತುಮ್ಮರಗುದ್ದಿ ರೈತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.