ADVERTISEMENT

ಎಚ್‌ಡಿಕೆಯನ್ನು ಸಿ.ಎಂ ಮಾಡಿದ್ದು ತಪ್ಪೇ?

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 5:10 IST
Last Updated 15 ಏಪ್ರಿಲ್ 2017, 5:10 IST
ನಾಗಮಂಗಲ ಪಟ್ಟಣದಲ್ಲಿ ಶುಕ್ರವಾರ ನಡೆದ ಶಾಸಕ ಎನ್‌. ಚಲುವಾಯಸ್ವಾಮಿ ಅಭಿಮಾನಿಗಳ ಸಮಾವೇಶವನ್ನು ಶಾಸಕ ಜಮೀರ್‌ ಅಹಮ್ಮದ್‌ ಉದ್ಘಾಟಿಸಿದರು (ಎಡಚಿತ್ರ). ಸಮಾವೇಶಕ್ಕೂ ಮುನ್ನ ನಡೆದ ಮೆರವಣಿಗೆ ದೃಶ್ಯ
ನಾಗಮಂಗಲ ಪಟ್ಟಣದಲ್ಲಿ ಶುಕ್ರವಾರ ನಡೆದ ಶಾಸಕ ಎನ್‌. ಚಲುವಾಯಸ್ವಾಮಿ ಅಭಿಮಾನಿಗಳ ಸಮಾವೇಶವನ್ನು ಶಾಸಕ ಜಮೀರ್‌ ಅಹಮ್ಮದ್‌ ಉದ್ಘಾಟಿಸಿದರು (ಎಡಚಿತ್ರ). ಸಮಾವೇಶಕ್ಕೂ ಮುನ್ನ ನಡೆದ ಮೆರವಣಿಗೆ ದೃಶ್ಯ   

ನಾಗಮಂಗಲ (ಮಂಡ್ಯ): ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದರು. ಇಲ್ಲ ಎಂದು ದೇವರ ಮುಂದೆ ಆಣೆ ಮಾಡಿದರೆ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಶಾಸಕ ಜಮೀರ್‌ ಅಹಮ್ಮದ್‌ ಪುನರುಚ್ಚರಿಸಿದರು.

ಪಟ್ಟಣದಲ್ಲಿ ಶುಕ್ರವಾರ ಶಾಸಕ ಎನ್‌. ಚಲುವರಾಯಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಏರ್ಪಡಿಸಿದ್ದ ಹಿರಿಯ ಸಾಧಕರಿಗೆ ಹಾಗೂ ಜನಪ್ರತಿನಿಧಿಗಳ ಸನ್ಮಾನ ಹಾಗೂ ಅಭಿಮಾನಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

ಕುಮಾರಸ್ವಾಮಿ ಅವರು ಬೆಳೆಯುತ್ತಿರುವುದು ಸಂತೋಷ. ನಾವೆಲ್ಲರೂ ಸೇರಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆವು. ಅದು ತಪ್ಪೇ?  ಎಂದು ಅವರು ಪ್ರಶ್ನಿಸಿದರು.
ಮುಂದೆ ಏನು ಮಾಡಬೇಕು ಎಂದು ಹೇಳಿ? ಅವರೇ ಬೇಡ ಎಂದ ಮೇಲೆ ಬೇರೆ ದಾರಿ ನೋಡಿಕೊಳ್ಳುತ್ತಿದ್ದೇವೆ. ಜಿಲ್ಲೆಗೆ ಚಲುವರಾಯಸ್ವಾಮಿ ಅವರು ಅನಿವಾರ್ಯ. ಅವರನ್ನು ಉಳಿಸಿಕೊಳ್ಳಿ. ಒಂದೆರಡು ತಿಂಗಳಲ್ಲಿ ಏಳೂ ಜನರು ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ADVERTISEMENT

ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಮಾತನಾಡಿ, ಈ ಸಭೆ ರಾಜ್ಯದ ದಿಕ್ಸೂಚಿಗೆ ಕಾರಣವಾಗಿದೆ. ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ. ನಿಮ್ಮ ಆಶೀರ್ವಾದ ಬೇಕು ಎಂದು ಕೋರಿದರು.ಶಾಸಕ ಬಾಲಕೃಷ್ಣ ಮಾತನಾಡಿ, ಅವರ ಸಹವಾಸ ಮಾಡಿ ಇಲ್ಲಿ ಬಂದು ನಿಂತಿದ್ದೇವೆ. ಹಿಂದೆಯೇ ಬಿಜೆಪಿ ಅವರು ಕರೆದಿದ್ದರೂ ಹೋಗದೇ ಪಕ್ಷದಲ್ಲಿ ಇದ್ದೆವು. ಆದರೂ, ಈಗ ಇಂತಹ ಸ್ಥಿತಿ ಬಂದಿದೆ ಎಂದರು.

‘ಎಚ್‌.ಡಿ. ಕುಮಾರಸ್ವಾಮಿ ಅವರ ಕುಟುಂಬದ ಸದಸ್ಯರೆಲ್ಲ ಸೇರಿ ರಾಜಕೀಯವಾಗಿ ಅವರನ್ನು ಬೀದಿಗೆ ತಂದು ನಿಲ್ಲಿಸದೇ ಹೋದರೆ ನನ್ನ ಹೆಸರು ಬದಲಾವಣೆ ಮಾಡಿಕೊಳ್ಳುತ್ತೇನೆ. ಅವರ ಉದ್ದೇಶ ಇನ್ನೊಬ್ಬರನ್ನ ಗೆಲ್ಲಿಸುವುದಲ್ಲ. ನಮ್ಮನ್ನು ಸೋಲಿಸುವುದು’ ಎಂದು ಹೇಳಿದರು.ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ, ಮಾಜಿ ಶಾಸಕ ಎಚ್.ಬಿ. ರಾಮು ಮಾತನಾಡಿದರು. ಮಾಜಿ ಶಾಸಕ ಬಿ. ರಾಮಕೃಷ್ಣ, ರಾಜಣ್ಣ, ರಾಜೇಗೌಡ, ಎಂ. ಪ್ರಸನ್ನ, ಹನಮಂತು  ಇದ್ದರು.

ಕಾಂಗ್ರೆಸ್‌ ಸೇರುವ ತೀರ್ಮಾನ ತೆಗೆದುಕೊಳ್ಳಿ

ನಾಗಮಂಗಲ (ಮಂಡ್ಯ): ಸ್ವಾತಂತ್ರ್ಯ ಹೋರಾಟದ ಇತಿಹಾಸ ಇರುವ ಪಕ್ಷ ಕಾಂಗ್ರೆಸ್‌. ಇವತ್ತು ಸ್ವಲ್ಪ ಕೆಟ್ಟಿರಬಹುದು. ತಿದ್ದುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕಾಂಗ್ರೆಸ್‌ ಸೇರ್ಪಡೆಗೊಳ್ಳುವ ನಿರ್ಣಯ ಕೈಗೊಳ್ಳಿ ಎಂದು ಮಾಜಿ ಸಂಸದ ಜಿ. ಮಾದೇಗೌಡ ಸಲಹೆ ಮಾಡಿದರು.

ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜೆಡಿಎಸ್‌ನಿಂದ ಅಮಾನತು ಮಾಡಿದ್ದಾರೆ. ಯಾವ ಪಕ್ಷ ಸೇರಬೇಕು ಎಂದು ಕೇಳುತ್ತೀರಿ ಎಂದು ಬಂದಿದ್ದೆ. ಸನ್ಮಾನ ಸ್ವೀಕರಿಸಲಿಕ್ಕೆ ಬಂದಿಲ್ಲ ಎಂದರು.

ರಾಜಕೀಯದಲ್ಲಿ ಒಳ್ಳೆವರು, ಕೆಟ್ಟವರು ಇರುತ್ತಾರೆ. ಒಳ್ಳೆಯವರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.ವಿಧಾನಸಭೆ ಮಾಜಿ ಸ್ಪೀಕರ್‌ ಕೆ.ಆರ್‌. ಪೇಟೆ ಕೃಷ್ಣ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.