ADVERTISEMENT

ಕನ್ನಡ ನುಡಿ ಹಬ್ಬಕ್ಕೆ ಪಾಂಡವಪುರ ಸಜ್ಜು‌

ತಾಲ್ಲೂಕು ಮಟ್ಟದ ಏಳನೇ ಸಾಹಿತ್ಯ ಸಮ್ಮೇಳನ‌, ಎಂ.ಅಂಕೇಗೌಡ ಅಧ್ಯಕ್ಷರು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 12:08 IST
Last Updated 22 ಮಾರ್ಚ್ 2018, 12:08 IST

ಪಾಂಡವಪುರ: 10 ಲಕ್ಷಕ್ಕೂ ಅಧಿಕ ಪುಸ್ತಕ ಸಂಗ್ರಹಿಸಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸಿ ದಾಖಲೆ ನಿರ್ಮಿಸಿರುವ ಪುಸ್ತಕ ಪ್ರೇಮಿ ಎಂ.ಅಂಕೇಗೌಡ ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಪಟ್ಟಣದ ಟಿಎಪಿಸಿಎಸ್ ರೈತ ಸಭಾಂಗಣದಲ್ಲಿ ಗುರುವಾರ ನಡೆಯಲಿದೆ.

ಬೆಳಿಗ್ಗೆ 8ಗಂಟೆಗೆ ತಹಶೀಲ್ದಾರ್ ಡಿ.ಹನುಮಂತರಾಯಪ್ಪ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ರವಿ ಕುಮಾರ್ ಚಾಮಲಾಪುರ ನಾಡ ಧ್ವಜಾರೋಹಣ ಹಾಗೂ  ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ರಮೇಶ್ ಸಾಹಿತ್ಯ ಪರಿಷತ್‌ ದ್ವಜಾರೋಹಣ ನೆರವೇರಿಸುವರು. ಬೆಳಿಗ್ಗೆ 9 ಗಂಟೆಗೆ ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಪ್ರಾರಂಭವಾಗುವುದು. 10.30ಕ್ಕೆ ಸಮ್ಮೇಳನದ ಉದ್ಫಾಟನಾ ಕಾರ್ಯಕ್ರಮ ನಡೆಯುವುದು. ಡಾ.ಎನ್.ಎಸ್.ತಾರಾನಾಥ್ ಅಧ್ಯಕ್ಷತೆ, ಸುನಿತಾ ಪುಟ್ಟಣ್ಣಯ್ಯ , ಸಂಸದ ಸಿ.ಎಸ್.ಪುಟ್ಟರಾಜು ಭಾಗವಹಿಸುವರು. ಮಧ್ಯಾಹ್ನ 12.30ಕ್ಕೆ ವಿಚಾರಗೋಷ್ಠಿ ನಡೆಯಲಿದ್ದ ನೀ.ಗಿರಿಗೌಡ, ಜಯಪ್ಪ ಹೊನ್ನಾಳಿ, ಡಿ.ಎಸ್.ಸರಸ್ವತಿ, ಡಾ.ಎಚ್.ವಿ.ಶಿಲ್ಪಶ್ರೀ, ಡಾ.ಎಚ್.ಆರ್.ತಿಮ್ಮೆಗೌಡ, ಕ್ಯಾತನಹಳ್ಳಿ ರಾಮಣ್ಣ ಭಾಗವಹಿಸುವರು.

ಮಧ್ಯಾಹ್ನ 3.30ಕ್ಕೆ ಕವಿಗೋಷ್ಠಿ ನಡೆಯಲಿದ್ದು ಕವಿ ನಾರಾಯಾಣ್ ತಿರುಮಲಾಪುರ ಉದ್ಫಾಟನೆ ಮಾಡುವರು, ಪ್ರದೀಪ್‌ ಕುಮಾರ್‌ ಹೆಬ್ರಿ ಅವರು ಅಧ್ಯಕ್ಷತೆ ವಹಿಸುವರು. ಸಂಜೆ 5ಕ್ಕೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 25 ಜನ ಸಾಧಕರಿಗೆ ರೈತ ಯುವ ನಾಯಕ ದರ್ಶನ್ ಪುಟ್ಟಣ್ಣಯ್ಯ ಸನ್ಮಾನಿಸಿವರು. ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಸಮಾರೋಪ ಭಾಷಣ ಮಾಡಲಿದ್ದಾರೆ. ರಾತ್ರಿ 8ಕ್ಕೆ ನಾಗಮಂಗಲದ ಕನ್ನಡ ಸಂಘದ ಕಲಾವಿದರಿಂದ ‘ಮುದುಕನ ಮದುವೆ’ನಾಟಕ ಪ್ರದರ್ಶನವಾಗಲಿದೆ.

ADVERTISEMENT

ಅಧ್ಯಕ್ಷರ ಪರಿಚಯ: ತಾಲ್ಲೂಕಿನ ಚಿನಕುರಳಿ ಗ್ರಾಮದ ಮರೀಗೌಡ ಮತ್ತು ನಿಂಗಮ್ಮ ಅವರ ಪುತ್ರರಾಗಿ 1949ರಲ್ಲಿ ಜನಿಸಿದ ಅಂಕೇಗೌಡ ಅವರು 4ನೇ ತರಗತಿ ನಂತರ ಕೌಟಂಬಿಕ ಕಷ್ಟಗಳಿಂದ ಶಾಲೆ ತೊರೆದರು. ನಂತರ ನೇರವಾಗಿ 7ನೇ ತರಗತಿ ಪಬ್ಲಿಕ್ ಪರೀಕ್ಷೆ ಬರೆದು ಉತ್ತೀರ್ಣರಾಗಿ ಪ್ರೌಢಶಾಲೆಗೆ ಪ್ರವೇಶ ಪಡೆದರು. ಮೈಸೂರಿನ ಮಹಾರಾಜ ಸಂಜೆ ಕಾಲೇಜಿನಲ್ಲಿ ಬಿ.ಎ.ಪಡೆದು, ಪಿಎಸ್ಎಸ್‌ಕೆಯಲ್ಲಿ ನೌಕರಿ ಗಳಿಸಿದರು. ನಂತರ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದರು.

ಅಂಕೇಗೌಡರು ವಿದ್ಯಾರ್ಥಿ ಯಾಗಿದ್ದಾಗ ಬೇಕೆನಿಸಿದ ಪುಸ್ತಕ ಗಳನ್ನು ಕೊಳ್ಳಲು ಹಣವಿರಲಿಲ್ಲ. ಗ್ರಂಥಾಲಯದಲ್ಲೂ ಅಗತ್ಯ ಪುಸ್ತಕಗಳು ದೊರಕುತ್ತಿರಲಿಲ್ಲ. ಬಿ.ಎ.ಓದುತ್ತಿದ್ದಾಗ ದುಡಿದು ಉಳಿಯುತ್ತಿದ್ದ ಐದು ರೂಪಾಯಿಯಲ್ಲಿ ರಾಮಕೃಷ್ಣಾಶ್ರಮದ ಪ್ರಕಟಣೆಯ ಪುಸ್ತಕ ಕೊಳ್ಳುವ ಮೂಲಕ ಪುಸ್ತಕ ಸಂಗ್ರಹಿಸುವ ಹವ್ಯಾಸ ಪ್ರಾರಂಭಿಸಿದರು. ಪಿಎಸ್ಎಸ್ಕೆಯಲ್ಲಿ ಕೆಲಸಕ್ಕೆ ಸೇರಿಕೊಂಡ ನಂತರ ಬರುವ ಸಂಬಳದಲ್ಲಿ ಅರ್ಧದಷ್ಟು ಹಣದಲ್ಲಿ ಪುಸ್ತಕ ಕೊಂಡು ಸಂಗ್ರಹಿಸಿದರು.

ವಿಶ್ವೇಶ್ವರಯ್ಯನಗರದಲ್ಲಿದ್ದ ಅವರ ಚಿಕ್ಕ ವಸತಿಗೃಹದಲ್ಲಿ ಬೃಹತ್ ಮಟ್ಟದ ಪುಸ್ತಕ ಇಡಲು ಸಾಧ್ಯವಾಗುತ್ತಿರಲಿಲ್ಲ. ಇವರ ಸಹಾಯಕ್ಕೆ ಬಂದ ಉದ್ಯಮಿ ಹರಿಖೋಡೆ ಹರಳಹಳ್ಳಿ ಗ್ರಾಮದಲ್ಲಿ ದೊಡ್ಡ ಕಟ್ಟಡ ನಿರ್ಮಿಸಿಕೊಟ್ಟರು. ಇದು ಈಗ ಅಂಕೇಗೌಡರ ಪುಸ್ತಕದ ಮನೆ ಎಂದೇ ಹೆಸರಾಗಿದೆ. ಸಾಹಿತ್ಯ, ಕತೆ, ಕಾದಂಬರಿ, ವ್ಯಕ್ತಿವಿಚಾರ, ಸಂಶೋಧನ ಗ್ರಂಥಗಳು, ವಿಚಾರ, ಕಲೆ, ಸಂಸ್ಕೃತಿ, ವಿಜ್ಞಾನ, ಸೇರಿದಂತೆ ಹಲವಾರು ಪ್ರಕಾರಗಳ ಪುಸ್ತಕಗಳಿವೆ. 2 ಸಾವಿರ ಭಗವದ್ಗೀತೆ ಪ್ರತಿ, ಮಹಾತ್ಮ ಗಾಂಧಿ ಅವರ 2 ಸಾವಿರ ಪುಸ್ತಕಗಳು, ರಾಮಾಯಣ, ಮಹಾಭಾರತ ಪುಸ್ತಕಗಳು, ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಸೇರಿ ಬಹುಭಾಷಾ ಪುಸ್ತಕಗಳು ಇಲ್ಲಿವೆ. ಇದಲ್ಲದೆ 2 ಸಾವಿರ ಹಳೆಯ ನಾಣ್ಯಗಳು, 20 ಸಾವಿರಕ್ಕೂ ಅಧಿಕ ಅಂಚೆಚೀಟಿಗಳು, ಭೂಪಟಗಳು ಅವರ ಸಂಗ್ರಹದಲ್ಲಿವೆ.

ಅಂಕೇಗೌಡರ ಈ ಸಾಧನೆಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ, ಜಿ.ಪಿ.ರಾಜರತ್ನಂ ಪ್ರಶಸ್ತಿ, ರಾಜ್ಯ ಗ್ರಂಥಾಲಯ' ಮತ್ತು ಕೇಂದ್ರ ಗ್ರಂಥಾಲಯ ಪ್ರಶಸ್ತಿ ನೀಡಿ ಗೌರವಿಸಿದೆ. ಇದಲ್ಲದೆ ಅಸಮಾನ್ಯ ಕನ್ನಡಿಗ, ಆಳ್ವಾಸ್ ನುಡಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪುಸ್ತಕ ಸಂಗ್ರಹದಲ್ಲಿ  ‘ಲಿಮ್ಕಾ ರಾಷ್ಟ್ರೀಯ ದಾಖಲೆ’ಯಲ್ಲಿ ಅವರ ಹೆಸರು ಸೇರ್ಪಡೆಗೊಂಡಿದೆ.

‘ಪುಸ್ತಕ ಮತ್ತು ಓದುವ ಸಂಸ್ಕೃತಿ ಬೆಳೆಯಬೇಕು. ಪ್ರತಿಯೊಬ್ಬರೂ ಪುಸ್ತಕ ಕೊಂಡು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಸಾಹಿತ್ಯ ವೃದ್ಧಿಗೆ ಸಮ್ಮೇಳನಗಳು ಪೂರಕವಾಗಿರಬೇಕು. ಸಮ್ಮೇಳನಗಳ ನಿರ್ಣಯಗಳು ಕಾರ್ಯರೂಪಕ್ಕೆ ಬಂದಾಗ ಮಾತ್ರ ಸಾಹಿತ್ಯ ಸಮ್ಮೇಳನಗಳ ಮೌಲ್ಯ ಹೆಚ್ಚುತ್ತದೆ’ ಎಂದು ಅಂಕೇಗೌಡರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.