ADVERTISEMENT

ಕೆರೆ ಉಳಿಸಲು ಟೊಂಕ ಕಟ್ಟಿದ ಯುವ ಪಡೆ!

ಸೋಮೇಶ್ವರ ಕನ್ನಡ ಯುವಕ ಸಂಘದ ದೃಢ ನಿರ್ಧಾರ: ತಡಗವಾಡಿಯ ಪುರಾತನ ಕೆರೆಯ ಪುನರುಜ್ಜೀವನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 7:31 IST
Last Updated 24 ಮಾರ್ಚ್ 2017, 7:31 IST
ಶ್ರೀರಂಗಪಟ್ಟಣ ತಾಲ್ಲೂಕು ತಡಗವಾಡಿ ಗ್ರಾಮದಲ್ಲಿ ಐತಿಹಾಸಿಕ ಕೆರೆಯ ಒತ್ತುವರಿ ತೆರವು ಮಾಡಿಸಿ, ಜೆಸಿಬಿ ಬಳಸಿ ಅಭಿವೃದ್ಧಿ ಮಾಡಲು ಮುಂದಾಗಿರುವುದು.
ಶ್ರೀರಂಗಪಟ್ಟಣ ತಾಲ್ಲೂಕು ತಡಗವಾಡಿ ಗ್ರಾಮದಲ್ಲಿ ಐತಿಹಾಸಿಕ ಕೆರೆಯ ಒತ್ತುವರಿ ತೆರವು ಮಾಡಿಸಿ, ಜೆಸಿಬಿ ಬಳಸಿ ಅಭಿವೃದ್ಧಿ ಮಾಡಲು ಮುಂದಾಗಿರುವುದು.   

ಶ್ರೀರಂಗಪಟ್ಟಣ: ವರ್ಷದಿಂದ ವರ್ಷಕ್ಕೆ ಒತ್ತುವರಿಯಾಗುತ್ತಿದ್ದ, ನೀರು ಹಿಂಗಿ ಹೋಗುತ್ತಿದ್ದ ಗ್ರಾಮದ ಕೆರೆಯ ಸ್ಥಿತಿಯನ್ನು ಕಂಡ ಯುವಕ ಸಂಘವೊಂದು ತಮ್ಮೂರಿನ ಜೀವನಾಡಿಯಾಗಿದ್ದ ಕೆರೆಯನ್ನು ಉಳಿಸಲು ಟೊಂಕ ಕಟ್ಟಿ ನಿಂತಿದೆ.

ಕೃಷಿ ಪ್ರಧಾನ ಗ್ರಾಮವಾದ ತಾಲ್ಲೂಕಿನ ತಡಗವಾಡಿಯ ಗ್ರಾಮದ ಪುರಾತನ ಕೆರೆಯನ್ನು ಉಳಿಸಲು ಗ್ರಾಮದ ಸೋಮೇಶ್ವರ ಕನ್ನಡ ಯುವಕ ಸಂಘ ದೃಢ ನಿಶ್ಚಯ ಮಾಡಿ ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ. ಒಂದು ವಾರದ ಹಿಂದೆ ಆರಂಭವಾದ ‘ಕೆರೆ ಉಳಿಸುವ ಕಾಯಕ’ ಬಿರುಸು ಪಡೆದುಕೊಂಡಿದೆ.

ಒತ್ತುವರಿಯಾಗಿದ್ದ ಅಂದಾಜು 4 ಎಕರೆಯಷ್ಟು ಕೆರೆಯ ಜಾಗವನ್ನು ರೈತರು ಸ್ವಪ್ರೇರಣೆಯಿಂದ ಬಿಟ್ಟು ಕೊಟ್ಟಿದ್ದಾರೆ. ಒಟ್ಟು 31 ಎಕರೆ 13 ಗುಂಟೆ ವಿಸ್ತೀರ್ಣದ ಸುತ್ತಲೂ ಟ್ರಂಚ್‌ ತೆಗೆದು ಏರಿ ನಿರ್ಮಿಸುವ ಕಾರ್ಯ ಮಾಡಲಾಗುತ್ತಿದೆ.

ಎರಡು ಜೆಸಿಬಿ ಯಂತ್ರಗಳನ್ನು ಬಾಡಿಗೆಗೆ ಪಡೆದು ಈ ಕೆರೆಯ ಏರಿ ಬಲ ಪಡಿಸಲಾಗುತ್ತಿದೆ. ಕೆರೆಯ ಆವರಣದಲ್ಲಿ ಬೆಳೆದಿದ್ದ ಅಪಾರ ಪ್ರಮಾಣದ ಮುಳ್ಳಿನ ಪೊದೆಗಳನ್ನು ತೆಗೆದು ಹಸನು ಮಾಡಲಾಗಿದೆ.

ಕೆರೆಯ ಒಳಗೆ ಮಲ, ಮೂತ್ರ ವಿಸರ್ಜಿಸುವುದನ್ನು ತಡೆಯಲು ಅಗತ್ಯ ಇರುವ ಕಡೆ ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ. ಒಟ್ಟು ₹ 10 ಲಕ್ಷ ಅಂದಾಜು ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸುವ ನೀಲ ನಕ್ಷೆ ಸಿದ್ದವಾಗಿದೆ.

ತಡಗವಾಡಿ ಕೆರೆ ವರ್ಷದ ಎಲ್ಲ ದಿನವೂ ತುಂಬಿ ತುಳುಕುತ್ತಿತ್ತು. ಕಳೆದ 3 ವರ್ಷಗಳಿಂದ ಎದುರಾದ ತೀವ್ರ ಬರಗಾಲದ ಕಾರಣ ಕೆರೆಯಲ್ಲಿನ ನೀರು ಭಾಗಶಃ ಬತ್ತಿ ಹೋಗಿದೆ. ಜೊಂಡು, ಮುಳ್ಳು ಕಂಟಿಗಳು ಬೆಳೆದಿವೆ.

ಇದರಿಂದ ಕೆರೆಗೆ ನೀರು ಹರಿದು ಬರಲು ತೊಡಕಾಗಿತ್ತು. ಮಳೆಗಾಲದಲ್ಲಿ ನೀರು ಸಲೀಸು ಈ ಕೆರೆಗೆ ಹರಿದು ಬರುವಂತೆ ದೊಡ್ಡ ಪ್ರಮಾಣದ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಕೆರೆಯ ಏರಿಯನ್ನು ಅಭಿವೃದ್ಧಿಪಡಿಸಿ ಸುತ್ತಲೂ ಅಲಂಕಾರಿಕ ಗಿಡಗಳ ಸಹಿತ ಆಕರ್ಷಕ ಉದ್ಯಾನ ಬೆಳೆಸಲಾಗುವುದು.

ವಾಯು ವಿಹಾರಿಗಳ ಅನುಕೂಲಕ್ಕೆ ಅಲ್ಲಲ್ಲಿ ಬೆಂಚು ಅಳವಡಿಸಲಾಗುತ್ತದೆ. ಕೆರೆಯಲ್ಲಿ ಮೀನು ಸಾಕಣೆ ಮುಂದುವರೆಸಿ ಆರ್ಥಿಕ ಸಂಪನ್ಮೂಲದ ಮಾರ್ಗ ಕಂಡುಕೊಳ್ಳುವುದು ಮತ್ತು ಅಂತರ್ಜಲ ಹೆಚ್ಚಿಸಲು ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳುವುದು ನಮ್ಮ ಸಂಘದ ಮುಖ್ಯ ಉದ್ದೇಶ’ ಎನ್ನುತ್ತಾರೆ ಸಂಘದ ಕಾರ್ಯದರ್ಶಿ ಟಿ.ಎಂ. ನಾಗರಾಜು. ‘ತಡಗವಾಡಿ ಕೆರೆಗೆ ಹಲವು ಶತಮಾನಗಳ ಇತಿಹಾಸವಿದೆ.

ಒತ್ತುವರಿಯಾಗಿದ್ದ ಜಾಗವನ್ನು ತೆರವು ಮಾಡಿ, ಮಲೀನ ನೀರು ಸೇರುವುದನ್ನು ತಡೆದಿರುವುದು ಯಶಸ್ಸಿನ ಮೊದಲ ಹೆಜ್ಜೆ. ಕೆರೆಗೆ 50 ಎಕರೆಗೂ ಹೆಚ್ಚು ಅಚ್ಚುಕಟ್ಟು ಪ್ರದೇಶ ಇದ್ದು, ಕೆರೆ ತುಂಬಿದರೆ ಅದರ ವ್ಯಾಪ್ತಿ ಇನ್ನಷ್ಟು ವಿಸ್ತರಿಸಲಿದೆ.

ಜಾನುವಾರುಗಳಿಗೆ ನೀರು ಕುಡಿಸಲು, ಬಟ್ಟೆ ತೊಳೆಯಲು, ಹಬ್ಬ ಹರಿದಿನ ಆಚರಣೆಗೂ ಉಪಯುಕ್ತವಾಗಲಿದೆ. ಕೆರೆ ತುಂಬಿದರೆ ಬತ್ತಿ ಹೋಗಿರುವ ಆಸುಪಾಸಿನ ಕೊಳವೆ ಬಾವಿಗಳಿಗೂ ಜೀವ ಬರುತ್ತದೆ. ಯುವಕ ಸಂಘ ಮಾದರಿ ಕೆಲಸಕ್ಕೆ ಅಡಿಯಿಟ್ಟಿದೆ. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರ ಒಳ್ಳೆಯ ಪ್ರಯತ್ನಕ್ಕೆ ಸದಾ ಬೆಂಬಲವಾಗಿ ನಿಲ್ಲುತ್ತೇನೆ’ ಎನ್ನುತ್ತಾರೆ  ತಾಲ್ಲೂಕು ಪಂಚಾಯಿತಿ ಸದಸ್ಯ ಟಿ.ಎಂ. ದೇವೇಗೌಡ.
-ಗಣಂಗೂರು ನಂಜೇಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.