ADVERTISEMENT

ಜಿಲ್ಲೆಯಲ್ಲಿ 60 ಸಾವಿರ ಹಸುಗಳಿಗೆ ವಿಮೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2017, 7:34 IST
Last Updated 12 ಸೆಪ್ಟೆಂಬರ್ 2017, 7:34 IST

ಮದ್ದೂರು: ಜಿಲ್ಲೆಯಲ್ಲಿ 60ಸಾವಿರ ಹಸುಗಳಿಗೆ ವಿಮಾ ಯೋಜನೆ ಸೌಲಭ್ಯ ಕಲ್ಪಿಸುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಹಸುಗಳಿಗೆ ವಿಮಾ ಸೌಲಭ್ಯ ನೀಡಿರುವ ಏಕೈಕ ಹಾಲು ಒಕ್ಕೂಟವಾಗಿ ಮನ್‌ ಮುಲ್‌ ಹೊರ ಹೊಮ್ಮಿದೆ ಎಂದು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕದಲೂರು ರಾಮಕೃಷ್ಣ ತಿಳಿಸಿದರು.

ಸಮೀಪದ ಚನ್ನೇಗೌಡನದೊಡ್ಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಸಭಾಂಗಣ ಹಾಗೂ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬರದಿಂದ ಕಂಗೆಟ್ಟ ರೈತರಿಗೆ ಈ ಯೋಜನೆ ವರದಾನವಾಗಿದೆ. ತಾಲ್ಲೂಕಿನಲ್ಲಿ ರೋಗದಿಂದ ಮೃತಪಟ್ಟ 55ಹಸುಗಳಿಗೆ ಈಗಾಗಲೇ ವಿಮಾ ಪರಿಹಾರ ದೊರಕಿದೆ. ಹಸು ಆಕಸ್ಮಿಕವಾಗಿ ಮೃತಪಟ್ಟರೆ ಆತಂಕ ಪಡಬೇಕಿಲ್ಲ ಎಂದರು.

ADVERTISEMENT

ಹಾಲಿನ ಕ್ಯಾನ್‌ ಕೊರತೆ, ಪಶು ಅಹಾರ ವಿತರಣೆ, ಹಾಲಿನ ಹಣ ವಿಳಂಬ ಪಾವತಿ ಮೊದಲಾದ ಸಮಸ್ಯೆಗಳ ಬಗ್ಗೆ ಹಾಲು ಉತ್ಪಾದಕ ಸದಸ್ಯರು ಸಭೆಯ ಗಮನ ಸೆಳೆದರು.
ಒಕ್ಕೂಟದಿಂದ ಹೊಸ ಕ್ಯಾನುಗಳ ವಿತರಣೆ, ಪಶು ಆಹಾರ ವಿತರಣೆ, ಮುಂಗಡ ಹಣವನ್ನು ಸಂಘಕ್ಕೆ ನೀಡುವ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ರಾಮಕೃಷ್ಣ ಭರವಸೆ ನೀಡಿದರು.

ಮನ್ಮುಲ್ ನಿರ್ದೇಶಕ ಕೆ.ಎಂ.ಉಮೇಶ್, ಉಪ ವ್ಯವಸ್ಥಾಪಕ ಡಾ.ರಾಮಕೃಷ್ಣ ಮಾತನಾಡಿದರು. ವಿಸ್ತರಣಾಧಿಕಾರಿ ರಶ್ಮಿ ಹಾಗೂ ತೇಜಸ್ವಿನಿ ಸಂಘದ ಅಯವ್ಯಯ ಮಾಹಿತಿಯನ್ನು ಮಂಡಿಸಿದರು.

ಸಂಘದ ಅಧ್ಯಕ್ಷೆ ಜಯಶ್ರೀ ಸುಧೀರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪಿ.ಗೀತಾ ನಿರ್ದೇಶಕರಾದ ಸುಧಾಮಣಿ, ಸಿ.ಎಸ್.ತಮ್ಮಣ್ಣ, ಬಿ.ಸಿ.ಚಿಕ್ಕಸ್ವಾಮಿ, ಕೆ.ರವಿ, ಪಂಚಲಿಂಗಯ್ಯ ಸುನೀತಾ, ರಾಜಮ್ಮ, ಕಾರ್ಯದರ್ಶಿ ನಾಗಣ್ಣ, ಸಿಬ್ಬಂದಿ ಚಿಕ್ಕಬೋಮ್ಮಯ್ಯ, ಪರಮೇಶ್, ಶಿವಕುಮಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.