ADVERTISEMENT

ತಾಲ್ಲೂಕು ಕಚೇರಿಗೆ ರೈತರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 21 ಮೇ 2017, 9:31 IST
Last Updated 21 ಮೇ 2017, 9:31 IST

ಶ್ರೀರಂಗಪಟ್ಟಣ: ಸರ್ಕಾರಿ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ಜನರಿಗೆ ಅಕ್ರಮ–ಸಕ್ರಮ ಯೋಜನೆಯಡಿ ಮಾಲೀಕತ್ವ ನೀಡುವುದು ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಶನಿವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದರು.

ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಸರ್ಕಾರಿ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ನೂರಾರು ಮಂದಿ ನೆಲೆ ನಿಂತಿದ್ದಾರೆ. ಹತ್ತಾರು ವರ್ಷಗಳಿಂದ ಇಲ್ಲಿನ ಜನರು ವಾಸ ಮಾಡುತ್ತಿದ್ದಾರೆ. ಕೆಆರ್‌ಎಸ್‌ ಆಸುಪಾಸಿನ ಜಾಗವನ್ನು ಅಧಿಸೂಚಿತ (ನೋಟಿಫೈಡ್‌) ಪ್ರದೇಶ ಎಂದು ಸರ್ಕಾರ ಘೋಷಿಸಿದೆ ಎಂಬ ಕಾರಣ ಮುಂದೊಡ್ಡಿ ಜನರಿಗೆ ಹಕ್ಕುಪತ್ರ ನೀಡಲು ನಿರಾಕರಿಸಲಾಗುತ್ತಿದೆ.

ಅಲ್ಲಿನ ನಿವಾಸಿಗಳಿಗೆ ಒಕ್ಕಲೆಬ್ಬಿಸುವ ಆತಂಕ ಎದುರಾಗಿದೆ. ಕೆಆರ್‌ಎಸ್‌ ಜಲಾಶಯ ಕಟ್ಟಲು ವಿವಿಧೆಡೆಗಳಿಂದ ಬಂದ ಜನರು ಮೂರು ತಲೆಮಾರುಗಳಿಂದ ಇಲ್ಲಿಯೇ ನೆಲೆ ನಿಂತಿದ್ದು, ಅವರು ವಾಸಿಸುವ ಜಾಗವನ್ನು ಅವರ ಹೆಸರಿಗೇ ಖಾತೆ ಮಾಡಿಕೊಡಬೇಕು ಎಂದು ರೈತ ಮುಖಂಡ ಕೆ.ಎಸ್‌. ನಂಜುಂಡೇಗೌಡ ಆಗ್ರಹಿಸಿದರು.

ADVERTISEMENT

ತಾಲ್ಲೂಕಿನ ಮೊಗರಹಳ್ಳಿ ಗ್ರಾಮದಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ಸರ್ಕಾರಿ ಜಾಗದಲ್ಲಿ ನೆಲೆ ನಿಂತಿವೆ. ಕಳೆದ 35 ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವ ಯಾರೊಬ್ಬರಿಗೂ ಹಕ್ಕುಪತ್ರ ನೀಡಿಲ್ಲ. ಅದು ಸರ್ವೆ ನಂಬರ್‌ ಭೂಮಿ ಎಂದು ಸಬೂಬು ಹೇಳಲಾಗುತ್ತಿದೆ. ಸರ್ಕಾರಿ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡಿರುವ ಜನರಿಗೆ ನಿಯಮಾವಳಿ ಪ್ರಕಾರ ಹಕ್ಕುಪತ್ರ ನೀಡಬೇಕು. ಪ್ರಭಾವಿಗಳು ಕೆಲವು ಕಡೆ ಸರ್ಕಾರಿ ಜಮೀನನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಅದನ್ನು ತಡೆಯಲು ತಾಲ್ಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಬೇಸಿಗೆ ಕಾರಣದಿಂದ ರಾಸುಗಳ ಮಾಲೀಕರಿಗೆ ವಿತರಿಸಲು ಸಂಗ್ರಹಿಸಿರುವ ಒಣ ಮೇವನ್ನು ಇದುವರೆಗೆ ತಾಲ್ಲೂಕಿನ ಯಾವೊಬ್ಬ ಪಶುಪಾಲಕನಿಗೂ ವಿತರಿಸಿಲ್ಲ. ಇಲ್ಲಿ ಸಂಗ್ರಹಿಸಿದ ಮೇವನ್ನು ಬೇರೆ ತಾಲ್ಲೂಕುಗಳಿಗೆ ರವಾನಿಸಲಾಗುತ್ತಿದೆ. ಇಲ್ಲಿ ಹಂಚಿಕೆ ಮಾಡಿ ಉಳಿದರೆ ಇತರ ತಾಲ್ಲೂಕುಗಳಿಗೆ ಕೊಡಬೇಕು ಎಂದು ಪಿಎಸ್‌ಎಸ್‌ಕೆ ನಿರ್ದೇಶಕ ಪಾಂಡು ಇತರರು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್‌ ಕೃಷ್ಣ, ‘ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಜನರಿಗೆ ಹಕ್ಕುಪತ್ರ ವಿತರಿಸುವ ಸಂಬಂಧ ಗ್ರಾಮ ಪಂಚಾಯಿತಿ ಪಿಡಿಒಗಳ ಸಭೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಲಾಗುವುದು.

ಮೊಗರಹಳ್ಳಿ ಜನವಸತಿ ಪ್ರದೇಶವನ್ನು ಸರ್ಕಾರಿ ಜಾಗ ಎಂದು ಬದಲಿಸಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು. ರೈತ ಸಂಘದ ಕಾರ್ಯಾಧ್ಯಕ್ಷ ಬಿ.ಎಸ್‌. ರಮೇಶ್‌, ಖಜಾಂಚಿ ಕೃಷ್ಣೇಗೌಡ, ಪಾಲಹಳ್ಳಿ ಶಿವಣ್ಣ, ಬಿ.ಸಿ. ಕೃಷ್ಣೇಗೌಡ, ಕೃಷಿಕ ಸಮಾಜದ ನಿರ್ದೇಶಕ ಕಡತನಾಳು ಬಾಲಕೃಷ್ಣ, ಮಹದೇವು, ರಾಂಪುರ ಬೋರೇಗೌಡ, ಫಿಲಿಫ್‌, ದರಸಗುಪ್ಪೆ ಕೆ. ಜಯರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.