ADVERTISEMENT

ನಾವು ಭಾರತೀಯರು ಎಂಬ ಭಾವದಿಂದ ಭಾವೈಕ್ಯ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2017, 8:25 IST
Last Updated 11 ನವೆಂಬರ್ 2017, 8:25 IST

ಮಂಡ್ಯ: ‘ಜಾತ್ಯತೀತ ದೇಶದಲ್ಲಿ ನಾವೆಲ್ಲ ಭಾರತೀಯರು, ಭಾರತ ಮಾತೆಯ ಮಕ್ಕಳು ಎಂಬ ಭಾವ ಮೂಡಬೇಕು. ಸಹಬಾಳ್ವೆ, ಭಾವೈಕ್ಯ ಮೂಡಿದಾಗ ಮಾತ್ರ ಸೌಹಾರ್ದ ನೆಲೆಸುತ್ತದೆ’ ಎಂದು ಸಂಸದ ಸಿ.ಎಸ್‌.ಪುಟ್ಟರಾಜು ಹೇಳಿದರು. ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ಶುಕ್ರವಾರ ನಡೆದ ಟಿಪ್ಪುಸುಲ್ತಾನ್‌ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಮಹಾಪುರುಷ. ಈ ಸತ್ಯ ಎಲ್ಲರಿಗೂ ಗೊತ್ತಿದ್ದರೂ ಅದಕ್ಕೆ ರಾಜಕೀಯ ಬಣ್ಣ ಬಳಿಯಲಾಗಿದೆ. ಟಿಪ್ಪು ಜಯಂತಿ ಬೇರೆ ಬೇರೆ ಕಾರಣಗಳಿಂದಾಗಿ ವಿಶೇಷತೆ ಪಡೆದುಕೊಂಡಿರುವುದು ದುರದೃಷ್ಟಕರ. ಟಿಪ್ಪು ಸುಲ್ತಾನ್‌ ಆಡಳಿತ ಕಾಲದಲ್ಲಿ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದರು. ಜನರ ನೆಮ್ಮದಿಯ ಜೀವನಕ್ಕಾಗಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದ್ದರು. ಇತಿಹಾಸದಲ್ಲಿ ಟಿಪ್ಪು, ಅಂಬೇಡ್ಕರ್‌, ಕುವೆಂಪು ಮತ್ತಿತರರು ತಮ್ಮದೇ ಆದ ಸಂದೇಶ ನೀಡಿದ್ದಾರೆ. ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಹಿಂದೂ ಹಾಗೂ ಮುಸ್ಲಿಮರು ಅಣ್ಣ–ತಮ್ಮಂದಿರಂತೆ ಜೀವನ ಮಾಡುತ್ತಿದ್ದಾರೆ. ನಾನು 16ನೇ ವರ್ಷದ ಹುಡುಗನಾಗಿದ್ದಾಗ ನನ್ನ ತಾಯಿಯನ್ನು ಕಳೆದುಕೊಂಡೆ. ನನ್ನ ತಾಯಿಯ ಜೊತೆ ನಮ್ಮ ಊರಿನಲ್ಲಿದ್ದ ಮುಸ್ಲಿಂ ಮಹಿಳೆ ಭಾನುಮಕ್ಕ ಬಹಳ ಅಕ್ಕರೆಯಿಂದ ಇದ್ದರು. ತಾಯಿ ತೀರಿಕೊಂಡ ನಂತರ ಭಾನುಮಕ್ಕನೇ ನನ್ನ ತಾಯಿಯಾದರು. ಗ್ರಾಮೀಣ ಭಾಗದಲ್ಲಿ ಹಿಂದೂ– ಮುಸ್ಲಿಮರಲ್ಲಿ ಯಾವುದೇ ಭೇದವಿಲ್ಲ. ಆದರೆ ಕೆಲವರು ಟಿಪ್ಪು ಹೆಸರಿನಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

ಟಿಪ್ಪುವಿನ ತ್ಯಾಗ ಬಲುದೊಡ್ಡದು: ಪ್ರಧಾನ ಭಾಷಣ ಮಾಡಿದ ಸಾಹಿತಿ ಪ್ರೊ.ಕರಿಮುದ್ದೀನ್‌ ‘ಶ್ರೀರಂಗಪಟ್ಟಣದ ಮೂರು ಸುತ್ತಿನ ಕೋಟೆಯಲ್ಲಿ ಟಿಪ್ಪು ಸುಲ್ತಾನ್‌ 17 ವರ್ಷ ಆಳ್ವಿಕೆ ನಡೆಸಿದ್ದಾರೆ. ಇಲ್ಲಿಂದಲೇ ಸ್ವದೇಶಿ ಚಳವಳಿ ಆರಂಭಿಸಿದ ಟಿಪ್ಪುಸುಲ್ತಾನ್‌ ಸ್ವಾತಂತ್ರ್ಯ ಹೋರಾಟದ ಸ್ಪಷ್ಟ ಮಾರ್ಗದರ್ಶಿಯಾಗಿದ್ಧಾರೆ. ಆ ಕಾಲದಲ್ಲೇ ಬ್ಯಾಂಕ್‌ ಸ್ಥಾಪನೆ ಮಾಡುವ ಮೂಲಕ ಸಾಮಾನ್ಯ ಜನರು ಆರ್ಥಿಕ ಸ್ವಾವಲಂಬನೆಗೆ ಅಡಿಪಾಯ ಹಾಕಿದ್ದರು. ಹೊಲ ಉತ್ತು ಹೊಸದಾಗಿ ಕೃಷಿ ಮಾಡುವವರಿಗೆ ಐದು ವರ್ಷಗಳ ಕಾಲ ಸುಂಕ ಹಾಕುತ್ತಿರಲಿಲ್ಲ. ನಂತರ ಕೇವಲ ಅರ್ಧದಷ್ಟು ಮಾತ್ರ ಸುಂಕ ವಿಧಿಸುತ್ತಿದ್ದರು’ ಎಂದು ಹೇಳಿದರು.

‘ಟಿಪ್ಪುವಿನ ನೀರಾವರಿ ಯೋಜನೆಗಳು ಇಂದಿಗೂ ಜಿಲ್ಲೆಯಲ್ಲಿ ಜೀವಂತವಾಗಿವೆ. ಸಿ.ಡಿ.ಎಸ್‌ ನಾಲೆ ಮೈಸೂರು ರಾಜರು ತೋಡಿಸಿದರು. ಹಲವು ಕಾರಣಗಳಿಂದ ಯೋಜನೆ ಅರ್ಧಕ್ಕೆ ನಿಂತು ಹೋಗಿತ್ತು.ಅಂತಹ ಸಂದರ್ಭದಲ್ಲಿ ಅವರು ನಾಲೆಯನ್ನು ಬನ್ನೂರು ಕೆರೆಯವರೆಗೂ ವಿಸ್ತರಿಸಿದರು. ಟಿಪ್ಪು ಹಾಕಿಕೊಟ್ಟ ಮಾರ್ಗ ಬಹಳ ಸ್ಪಷ್ಟವಾಗಿತ್ತು. ಶಿಸ್ತುಬದ್ಧವಾಗಿ ಆಳ್ವಿಕೆ ನಡೆಸಿದ ಅವರು ಹಲವು ತಲೆಮಾರುಗಳಿಗೆ ಮಾದರಿಯಾಗಿದ್ದಾರೆ’ ಎಂದರು.

ಗೊಂದಲದ ಇತಿಹಾಸ: ‘ಇತಿಹಾಸಕಾರರು ಸೃಷ್ಟಿಸಿರುವ ಇತಿಹಾಸ ಬಹಳ ಗೊಂದಲಮಯವಾಗಿದೆ. ಕೊಡಗಿನ 70 ಸಾವಿರ ಜನರನ್ನು ಶ್ರೀರಂಗಪಟ್ಟಣಕ್ಕೆ ಕರೆತಂದು ಗಲ್ಲಿಗೆ ಹಾಕಿದ್ದರು ಎಂದು ಕೆಲವರು ಆರೋಪಿಸುತ್ತಾರೆ. ಆದರೆ ಕೊಡಗಿನಲ್ಲಿ ಅಂದು ಇದ್ದದ್ದೇ 50 ಸಾವಿರ ಜನರು. ಹೇಗೆ 70 ಸಾವಿರ ಜನರನ್ನು ಕರೆದು ತರಲು ಸಾಧ್ಯ? ಆದಿಲ್‌ಶಾಹಿಗಳು ಬಹುಮನಿ ಸಾಮ್ರಾಜ್ಯ ಸ್ಥಾಪಿಸಿದರು. ಆದರೆ ಬಹುಮನಿ ಸಾಮ್ರಾಜ್ಯ ಸ್ಥಾಪನೆಯ ಹಿಂದೆ ಬ್ರಾಹ್ಮಣ ಗುರುವೊಬ್ಬನ ನೆರಳಿದೆ ಎಂದು ಇತಿಹಾಸ ಹೇಳುವುದು ಸುಳ್ಳು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಂ.ಬೀರಪ್ಪ, ಮುಡಾ ಅಧ್ಯಕ್ಷ ಮುನಾವರ್‌ ಖಾನ್‌, ವಕ್ಫ್‌ ಸಂಸ್ಥೆಯ ಜಬೀವುಲ್ಲಾ ಖಾನ್‌, ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಶರತ್‌, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌, ಉಪ ವಿಭಾಗಾಧಿಕಾರಿ ರಾಜೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.