ADVERTISEMENT

ನೀತಿಯಾಗಿ ನಿರೀಕ್ಷೆಗಳ ಜಾರಿ: ಆರತಿ

ಜಿಲ್ಲಾಡಳಿತ ಹಾಗೂ ಅನಿವಾಸಿ ಭಾರತೀಯ ಕಲ್ಯಾಣ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 8:28 IST
Last Updated 18 ಫೆಬ್ರುವರಿ 2017, 8:28 IST
ಮಂಡ್ಯ: ಅನಿವಾಸಿ ಭಾರತೀಯರ ಬೇಡಿಕೆ ಹಾಗೂ ನಿರೀಕ್ಷೆಗಳನ್ನು ಸಮಗ್ರವಾಗಿ ಅನಿವಾಸಿ ಭಾರತೀಯ ನೀತಿಯಲ್ಲಿ ಅಳವಡಿಸಿ ಜಾರಿಗೆ ತರಲಾಗುತ್ತಿದೆ ಎಂದು ಅನಿವಾಸಿ ಭಾರತೀಯ ಕಲ್ಯಾಣ ಸಮಿತಿಯ ಉಪಾಧ್ಯಕ್ಷೆ  ಆರತಿ ಕೃಷ್ಣ  ಹೇಳಿದರು.
 
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ಅನಿವಾಸಿ ಭಾರತೀಯ ಕಲ್ಯಾಣ ಸಮಿತಿ ಯವರು ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 
 
ರಾಜ್ಯದಿಂದ ವಲಸೆ ಹೋಗಿ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಕ್ಷೇಮಾಭಿವೃದ್ಧಿಯ ಜೊತೆಗೆ ಅಲ್ಲಿ ರಾಜ್ಯದ ಕಲೆ, ಸಾಹಿತ್ಯ, ಸಂಸ್ಕೃತಿಯ ಕಂಪು ಹರಡಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದೆ ಎಂದರು.
 
ಹೊರ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರಿಂದ ಕೈಗಾರಿಕೆ, ಶಿಕ್ಷಣ, ಇಂಧನ, ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಅನಿವಾಸಿ ಭಾರತೀಯ ಸಮಿತಿ – ಕರ್ನಾಟಕ ಸ್ವಾಯತ್ತ ಸಂಸ್ಥೆ ರಚಿಸಲಾಗಿದೆ ಎಂದು ತಿಳಿಸಿದರು.
 
ರಾಜ್ಯದಲ್ಲಿನ  ಐ.ಟಿ, ಬಿ.ಟಿ, ವಿಜ್ಞಾನ, ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿನ ಹೆಚ್ಚಿನ ಅಭಿವೃದ್ಧಿ ಸಾಧಿಸಲು ಅಗತ್ಯವಿರುವ ಕಾರ್ಯ ಕ್ರಮಗಳನ್ನು ರೂಪಿಸಲು ಸಹಕಾರ ನೀಡುವುದು ಸಮಿತಿಯ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.
 
ರಾಜ್ಯದಲ್ಲಿನ ಕೈಗಾರಿಕೆ ಮತ್ತು ಮೂಲ ಸೌಕರ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸಲಾಗಿದೆ. ರಾಜ್ಯದ ಸಾಮಾಜಿಕ, ಆರ್ಥಿಕ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಅನಿವಾಸಿ ಭಾರತೀಯರನ್ನು ಪ್ರೋತ್ಸಾಹಿಸ ಲಾಗುವುದು ಎಂದು ಹೇಳಿದರು.
 
ಅನಿವಾಸಿ ಭಾರತೀಯ ನೀತಿಯಿಂದಾಗಿ ರಾಜ್ಯದ ಸಾಮಾಜಿಕ, ಆರ್ಥಿಕ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಹೊಸ ಆಯಾಮ ಸಿಗಲಿದೆ. ಅನಿವಾಸಿ ಭಾರತೀಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಲ್ಲಿ ದೇಶಗಳ ನಡುವಿನ ಸಂಬಂಧ ಉತ್ತಮಗೊಳ್ಳಲಿದೆ ಎಂದು ತಿಳಿಸಿದರು.
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಅನಿವಾಸಿ ಭಾರತೀಯರ ಕಲ್ಯಾಣ ಸಮಿತಿ ರಚಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು. 
 
ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್‌ಕುಮಾರ್ ರೆಡ್ಡಿ, ಉಪ ವಿಭಾಗಾಧಿಕಾರಿಗಳಾದ ಅರುಳ್‌ ಕುಮಾರ್, ಯಶೋದಾ ಮತ್ತಿತರರು ಉಪಸ್ಥಿತರಿದ್ದರು. 
 
ಹೊಸ ಪಶುವೈದ್ಯ ಆಸ್ಪತ್ರೆ ತೆರೆಯುವುದಿಲ್ಲ
 
ರಾಜ್ಯದಲ್ಲಿ ಹೊಸ ಪಶು ವೈದ್ಯ ಆಸ್ಪತ್ರೆ ತೆರೆಯುವುದಿಲ್ಲ.  ಸದ್ಯ ಇರುವ 1051 ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ.  ಖಾಲಿ ಇರುವ 690 ಪಶು ವೈದ್ಯರ ನೇಮಕಾತಿ ಮಾಡಲಾಗುತ್ತಿದೆ. ಕೆಪಿಎಸ್‌ಸಿ ಮೂಲಕವೂ 116 ಹುದ್ದೆ  ತುಂಬಲಾಗುತ್ತಿದೆ.  ಪಶುಭಾಗ್ಯ ಯೋಜನೆ ಜಾರಿಗೆ ತಂದು 22 ಸಾವಿರ ಹಸುಗಳನ್ನು ಒದಗಿಸಿದ್ದು, ವಿಧವೆಯರಿಗೆ 10 ಸಾವಿರ ಆರ್ಥಿಕ ನೆರವು ನೀಡಿ  ಪಶುಗಳನ್ನು ನೀಡಲಾಗುತ್ತಿದೆ ಎಂದು ಸಚಿವ ಎ.ಮಂಜು ಮಾಹಿತಿ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.