ADVERTISEMENT

ನೈಸರ್ಗಿಕ ಕೃಷಿಯಲ್ಲಿ ಯಶ ಕಂಡ ರೈತ

ಗಣಂಗೂರು ನಂಜೇಗೌಡ
Published 5 ನವೆಂಬರ್ 2017, 8:45 IST
Last Updated 5 ನವೆಂಬರ್ 2017, 8:45 IST
Print Published  ಶ್ರೀರಂಗಪಟ್ಟಣ ಗಡಿ ಭಾಗದ ಬಿ.ಟಿ. ಕೊಪ್ಪಲು ಗ್ರಾಮದ ನೈಸರ್ಗಿಕ ಕೃಷಿಕ ಸೋಮೇಗೌಡ ರಾಸಾಯನಿಕ ಗೊಬ್ಬರ ಬಳಸದೆ ಬೆಳೆದಿರುವ ಕಬ್ಬು
Print Published ಶ್ರೀರಂಗಪಟ್ಟಣ ಗಡಿ ಭಾಗದ ಬಿ.ಟಿ. ಕೊಪ್ಪಲು ಗ್ರಾಮದ ನೈಸರ್ಗಿಕ ಕೃಷಿಕ ಸೋಮೇಗೌಡ ರಾಸಾಯನಿಕ ಗೊಬ್ಬರ ಬಳಸದೆ ಬೆಳೆದಿರುವ ಕಬ್ಬು   

ಶ್ರೀರಂಗಪಟ್ಟಣ: ‘ಹಣಕ್ಕಾಗಿ ಆಹಾರ ಬೆಳೆಯುವುದನ್ನು ಬಿಟ್ಟು ಆರೋಗ್ಯಕ್ಕಾಗಿ ಆಹಾರ ಬೆಳೆಯಬೇಕು’ ಎಂದು ಗಟ್ಟಿ ದನಿಯಲ್ಲಿ ಪ್ರತಿಪಾದಿಸುವ ಕೃಷಿಕರೊಬ್ಬರು ಕಳೆದ 18 ವರ್ಷಗಳಿಂದ ‘ನೈಸರ್ಗಿಕ ಕೃಷಿ’ ಪದ್ದತಿ ಅನುಸರಿಸುತ್ತಿದ್ದು, ಅದರಿಂದ ಲಕ್ಷಗಟ್ಟಲೆ ಹಣ ಗಳಿಸುತ್ತಿದ್ದಾರೆ.

ತಾಲ್ಲೂಕಿನ ಗಡಿ ಭಾಗದ ಬ್ಯಾಟೆತಿಮ್ಮನಕೊಪ್ಪಲು (ಬಿ.ಟಿ. ಕೊಪ್ಪಲು) ಗ್ರಾಮದ ರೈತ ಸೋಮೇಗೌಡ ನೈಸರ್ಗಿಕ ಪದ್ಧತಿಯಲ್ಲಿ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಏನೇನೂ ಖರ್ಚಿಲ್ಲದೆ ವರ್ಷಕ್ಕೆ ಐದಾರು ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಸೋಮೇಗೌಡ ಅವರು ಕಬ್ಬು ಮತ್ತು ಅಡಿಕೆ ಬೆಳೆಯಲ್ಲಿ ಅಂತರ ಬೆಳೆಯಾಗಿ ಬೆಳೆದಿರುವ ಬೆಂಡೆ, ಟೊಮೆಟೊ, ಸೊಪ್ಪು, ಬೀನ್ಸ್ ಹಾಗೂ ತೊಗರಿ ಬೆಳೆ ರೋಗಮುಕ್ತವಾಗಿದೆ. ಕೀಟನಾಶಕ ಬಳಸದೆ ಬೆಂಡೆ, ಬೀನ್ಸ್, ಟೊಮೆಟೊ ಬೆಳೆಯುವುದು ದುಸ್ತರ. ಹೀಗಿದ್ದೂ ಇವರ ಜಮೀನಿನಲ್ಲಿ, ಬೆಳೆದಿರುವ ಎಲ್ಲ ಬೆಳೆಗಳು ರೋಗಮುಕ್ತವಾಗಿರುವುದು ಅಚ್ಚರಿ ಮೂಡಿಸುತ್ತದೆ.

ಸೋಮೇಗೌಡ ತಮ್ಮ ಅಡಿಕೆ ತೋಟದಲ್ಲಿ 200 ಕಾಫಿ ಗಿಡಗಳನ್ನು ಬೆಳೆಸುತ್ತಿದ್ದಾರೆ. ಅಡಿಕೆ ಸಸಿ ನೆಟ್ಟ ಸಂದರ್ಭದಲ್ಲಿ ನಾಟಿ ಮಾಡಿದ ಬಾಳೆ ಬೆಳೆಯ ಬೇರು ಕೀಳದೆ ಅದನ್ನೇ ಮುಂದುವರಿಸಿರುವುದು ವಿಶೇಷ. ಅಲ್ಲಲ್ಲಿ ಪರಂಗಿ, ಸಪೋಟಾ, ಹಲಸು, ಲಿಂಬೆ, ನುಗ್ಗೆ, ದಾಳಿಂಬೆ, ಕುತ್ಳೆ, ಮರಗೆಣಸು, ಸೀಬೆ, ಬೆಣ್ಣೆ ಹಣ್ಣಿನ (ಬಟರ್‌ ಫ್ರೂಟ್‌) ಗಿಡಗಳಿವೆ. ಈ ಪೈಕಿ ಕೆಲವು ಗಿಡಗಳು ಫಲಕ್ಕೆ ಬಂದಿದ್ದು, ಹಣ ತಂದುಕೊಡುತ್ತಿವೆ.

ADVERTISEMENT

ಶೂನ್ಯ ಬಂಡವಾಳ ಕೃಷಿ: 20 ವರ್ಷಗಳಿಂದ ಸೋಮೇಗೌಡ ನೈಸರ್ಗಿಕ ಕೃಷಿ ಪದ್ಧತಿ ಅನುಸರಿಸುತ್ತಿಸುತ್ತಿದ್ದು, ತಿಂಗಳು– ಎರಡು ತಿಂಗಳಿಗೊಮ್ಮೆ ಜೀವಾಮೃತ ಕೊಡುವುದನ್ನು ಬಿಟ್ಟರೆ ಯಾವುದೇ ರಸಗೊಬ್ಬರ, ಕೀಟನಾಶಕ ಬಳಸಿಲ್ಲ. 31 ವರ್ಷದ ಹಿಂದೆ ನಾಟಿ ಮಾಡಿದ ಕಬ್ಬು ಮತ್ತು ಎರಡು ದಶಕದ ಹಿಂದೆ ನಾಟಿ ಮಾಡಿದ ಬಾಳೆ ಗಿಡದ ಕೂಳೆಯನ್ನೇ ಮುಂದುವರಿಸಿ ಅದರಿಂದಲೇ ಬೆಳೆ ತೆಗೆದು ದಾಖಲೆ ಮಾಡಿದ್ದಾರೆ. ಕಬ್ಬು ಬೆಳೆಯಿಂದ ₹ 2 ಲಕ್ಷ, ತೆಂಗಿನ ಫಸಲಿನಿಂದ ₹ 1ಲಕ್ಷ, ಅಡಿಕೆ ಫಸಲಿನಿಂದ ₹ 50 ಸಾವಿರ, ತರಕಾರಿ ಮತ್ತು ಸೊಪ್ಪು ಬೆಳೆಯಿಂದ ₹ 50 ಸಾವಿರ ಆದಾಯ ಸಿಗುತ್ತಿದೆ ಎಂದು ಸೋಮೇಗೌಡ ಹೇಳುತ್ತಾರೆ.

ತಾವು ಬೆಳೆದ ರಾಸಾಯನಿಕ ಮುಕ್ತ ಹಣ್ಣು, ತರಕಾರಿಗಳನ್ನು ಮೈಸೂರಿನ ‘ದಾತು’, ‘ಹಸಿರು’, ‘ಜೀವಾಮೃತ’, ‘ಸತ್ವಾಮೃತ’ ಹೆಸರಿನ ಕೃಷಿ ಉತ್ಪನ್ನ ಮಾರಾಟ ಮಳಿಗೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಕಬ್ಬಿನಿಂದ ತಾವೇ ರಾಸಾಯನಿಕಮುಕ್ತ ಬೆಲ್ಲ ತಯಾರಿಸಿ ಮಾರಾಟ ಮಾಡುತ್ತಿದ್ದು, ಸಾವಯವ ಕೃಷಿ ಉತ್ಪನ್ನಗಳಿಗೆ ಬೆಲೆ ಹೆಚ್ಚಿರುವುದರಿಂದ ಲಾಭವೂ ಹೆಚ್ಚು ಸಿಗುತ್ತಿದೆ ಎನ್ನುತ್ತಾರೆ.

‘ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಇತರ ಕೆಲಸಗಳನ್ನು ಬಿಟ್ಟು ಅರ್ಧ ಎಕರೆ ಜಮೀನು ಕೊಂಡು ಕೃಷಿ ಆರಂಭಿಸಿ ಅದರಲ್ಲಿ ಬಂದ ಲಾಭದಿಂದಲೇ 5 ಎಕರೆ ಜಮೀನು ಖರೀದಿಸಿದೆ. ದಿನದಲ್ಲಿ 4ರಿಂದ 5 ತಾಸು ದುಡಿಯುತ್ತಿದ್ದು, ನೇಗಿಲು, ಟ್ರ್ಯಾಕ್ಟರ್‌, ಅಥವಾ ಟಿಲ್ಲರ್‌ ಬಳಸಿಲ್ಲ, ಗುದ್ದಲಿ, ಪಿಕಾಸಿಯಿಂದೇ ಕೃಷಿ ಮಾಡುತ್ತಿದ್ದೇನೆ. ನೈಸರ್ಗಿಕ ಕೃಷಿ ಮಾಡುವುದರಿಂದ ನನ್ನ ಭೂಮಿ ಅಷ್ಟೇ ಅಲ್ಲ; ನಾನೂ ರೋಗ ಮುಕ್ತನಾಗಿದ್ದೇನೆ’ ಎಂದು 68ರ ಪ್ರಾಯದ ಸೋಮೇಗೌಡ ತಮ್ಮ ಯಶೋಗಾಥೆಯನ್ನು ವಿವರಿಸುತ್ತಾರೆ. ಸಂಪರ್ಕಕ್ಕೆ ಮೊ: 87622 17099.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.