ADVERTISEMENT

ಪುಟ್ಟರಾಜು ವಿರುದ್ಧ ರೈತಸಂಘ ಪ್ರತಿಭಟನೆ

ಅಕ್ರಮ ಗಣಿಗಾರಿಕೆ ತನಿಖೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 6:40 IST
Last Updated 18 ಜುಲೈ 2017, 6:40 IST

ಪಾಂಡವಪುರ: ತಾಲ್ಲೂಕಿನ ಬೇಬಿಬೆಟ್ಟದ ಸುತ್ತಮುತ್ತ ನಡೆದಿರುವ ಅಕ್ರಮ ಗಣಿಗಾರಿಕೆಯನ್ನು ಪರಿಶೀಲಿಸಲು ಅರಣ್ಯಾಧಿಕಾರಿಗಳು ತೆರಳಿದಾಗ ಸಂಸದ ಸಿ.ಎಸ್.ಪುಟ್ಟರಾಜು ಹಾಗೂ ಇತರ ಗಣಿಮಾಲೀಕರು ಅರಣ್ಯಾಧಿಕಾರಿಗಳಿಗೆ ಧಮಕಿ ಹಾಕಿರುವುದನ್ನು ಖಂಡಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಮಿನಿ ವಿಧಾನಸೌಧದ ಎದುರು ಸೇರಿದ ರೈತ ಸಂಘದ ಕಾರ್ಯಕರ್ತರು, ಅರಣ್ಯಾಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಸಂಸದ ಪುಟ್ಟರಾಜು ಮತ್ತು ಅಲ್ಲಿನ ಗಣಿಮಾಲೀಕರ ಮೇಲೆ ತಕ್ಷಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

‘ಅಧಿಕಾರಿಗಳು ಯಾರ ಗೊಡ್ಡು ಬೆದರಿಕೆಗಳಿಗೂ ಹೆದರದೆ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ’ ಎಂದು ರೈತಸಂಘದ ಕಾರ್ಯಕರ್ತರು ಘೋಷಿಸಿದರು.

ADVERTISEMENT

ಕೆಆರ್‌ಎಸ್‌ ಜಲಾಶಯದಿಂದ ನಾಲೆಗಳಿಗೆ ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

2016–17ನೇ ಸಾಲಿನಲ್ಲಿ ಮಳೆಯಾಗದೆ ಮತ್ತು ನಾಲೆಗಳಲ್ಲಿ ಸರಿಯಾಗಿ ನೀರು ಹರಿಯದೇ ರೈತರು ಸರಿಯಾಗಿ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ. ಹಾಗಾಗಿ ಸರ್ಕಾರವು ರೈತರಿಗೆ ಸಮರ್ಪಕ ಬೆಳೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ತಾಲ್ಲೂಕು ಕಚೇರಿ ಸೇರಿದಂತೆ ಇತರ ಸರ್ಕಾರಿ ಕಚೇರಿಗಳು ಜನ ಸಾಮಾನ್ಯರನ್ನು ಅಲೆದಾಡಿಸದೇ ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್ ಡಿ.ಹನುಮಂತರಾಯಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು. ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಟಿ.ಗೋವಿಂದೇಗೌಡ, ಪಿಎಸ್‌ಎಸ್‌ಕೆ ಉಪಾಧ್ಯಕ್ಷ ಹರವು ಪ್ರಕಾಶ್‌, ರೈತ ಸಂಘದ ಮುಖಂಡರಾದ ಕೆ.ಎಸ್.ಪ್ರಕಾಶ್‌, ಎಣ್ಣೆಹೊಳೆಕೊಪ್ಪಲು ಮಂಜುನಾಥ್, ಬೇವಿನಕುಪ್ಪೆ ಅನಿಲ್‌, ಚಿಕ್ಕಾಡೆ ವಿಜೇಂದ್ರ, ರಾಜೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.