ADVERTISEMENT

ಸಕ್ಕರೆ ಉತ್ಪನ್ನಕ್ಕೆ ಅನುಗುಣವಾಗಿ ಕಬ್ಬಿನ ದರ ನಿಗದಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 6:02 IST
Last Updated 21 ನವೆಂಬರ್ 2017, 6:02 IST

ಮಂಡ್ಯ: ಸಕ್ಕರೆ ಉತ್ಪನ್ನಗಳಿಗೆ ಅನುಗುಣವಾಗಿ ಕಬ್ಬಿನ ದರ ನಿಗದಿಗೊಳಿಸಿ ಕಬ್ಬು ಬೆಳೆಗಾರರ ರಕ್ಷಣೆ ಮಾಡಬೇಕು ಎಂದು ಕರ್ನಾಟಕ ಪ್ರದೇಶ ಕಬ್ಬು ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ್‌ ಗುರುಮಠ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಉತ್ತರ ಕರ್ನಾಟಕದ ಭಾಗದ ಸಕ್ಕರೆ ಕಾರ್ಖಾನೆಗಳು ಒಂದು ಟನ್‌ ಕಬ್ಬಿಗೆ ₹ 3,200 ಕೊಡಲು ತೀರ್ಮಾನಿಸಿವೆ. ಆದರೆ ಸರ್ಕಾರವೇ ₹ 2,700 ನಿಗದಿ ಮಾಡುವ ಮೂಲಕ ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡಲು ಹೊರಟಿರುವ ಕ್ರಮ ಸರಿಯಿಲ್ಲ, ಜೊತೆಗೆ ದಕ್ಷಿಣ ಕರ್ನಾಟಕ ರಾಜ್ಯದಲ್ಲೂ ಬೆಲೆ ನಿಗದಿಪಡಿಸಲು ಮೀನಾಮೇಷ ಎಣಿಸುತ್ತಿರುವುದು ಖಂಡನೀಯ ಎಂದರು.

ಕಬ್ಬು ನಿಯಂತ್ರಣ ಮಂಡಳಿಯಲ್ಲಿ ಏಳು ಜನ ರೈತ ಸದಸ್ಯರಿದ್ದಾರೆ ಆದರೆ ಅವರು ವಿಚಾರವಂತರು ಇವರಿಗೆ ಕಬ್ಬು ಬೆಳೆಗಾರರ ಕಷ್ಟ ಅರಿವಾಗಲಿಲ್ಲಲ್ಲವೇ, ದರ ನಿಗದಿ ಮಾಡಿದ್ದನ್ನು ಏಕೆ ಒಪ್ಪಿಕೊಂಡರು. ತಕ್ಷಣ ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ADVERTISEMENT

ಬೆಲೆ ನಿಗದಿ ಮಾಡುವಲ್ಲಿ ಬದ್ಧತೆಯಿ ಲ್ಲದೇ ರಾಜಕೀಯ ಪಕ್ಷಗಳು ಹಾಗೂ ಅಧಿಕಾರಿ ವರ್ಗ ನಡೆದುಕೊಳ್ಳುತ್ತಿದ್ದಾರೆ. ರೈತರ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಬೆಳೆಸಾಲದ ಅನುದಾನವು ಇನ್ನೂ ಸರಿಯಾಗಿ ರೈತರಿಗೆ ಸಿಕ್ಕಿಲ್ಲ. ಇದರಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದನ್ನು ತಡೆಯಲು ಸರ್ಕಾರಗಳು ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಕ್ಕರೆ ಉತ್ಪನ್ನಗಳಿಗೆ ಅನುಗುಣವಾಗಿ ಬೆಲೆ ನಿಗದಿ ಮಾಡಬೇಕು. ಇದಕ್ಕೆ ಪಕ್ಷಾತೀತವಾಗಿ ಕಬ್ಬುಬೆಳೆಗಾರರ ಪರವಾಗಿ ನಿಲ್ಲಬೇಕು. ಸಾಲ ಮನ್ನಾ ಭಾಗ್ಯ ಕರುಣಿಸುವುದಕ್ಕಿಂತ ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಿದರೆ ಉತ್ತಮ. ಪ್ರತಿ ಟನ್‌ ಕಬ್ಬಿಗೆ ₹ 3,500 ಬೆಂಬಲ ಬೆಲೆ ನಿಗದಿಪಡಿಸಬೇಕು. ಆ ಮೂಲಕ ಸರ್ಕಾರ ಕ್ರಮ ತೆಗೆದುಕೊಂಡು ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಕೃಷ್ಣ, ಮುಖಂಡರಾದ ಹಳೇಮಿರ್ಲೆ ಸುನಯ್‌ಗೌಡ, ಎಂ.ಎಸ್‌.ರಾಜೇಂದ್ರ, ಸಿ.ಯೋಗೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.