ADVERTISEMENT

ಸಾಲ ಮನ್ನಾ: ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 8:43 IST
Last Updated 22 ಜೂನ್ 2017, 8:43 IST

ಮಂಡ್ಯ: ಸಹಕಾರಿ ಬ್ಯಾಂಕ್‌ಗಳ ಕೃಷಿ ಸಾಲ ಮನ್ನಾ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌.ಆತ್ಮಾನಂದ ಪ್ರತಿಕ್ರಿಯ್ರಿಸಿ ‘ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದಂತೆ ನಡೆದಿದ್ದಾರೆ.

ಸಮಸ್ಯೆಯಲ್ಲಿರುವ ರೈತರ ನೆರವಿಗೆ ಬಂದಿರುವ ಮುಖ್ಯಮಂತ್ರಿಗಳು ಸರ್ಕಾರಕ್ಕೆ ಹೊರೆಯಾದರೂ ಸಾಲ ಮನ್ನಾ ಮಾಡಿದ್ದಾರೆ. ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ನಾಗಣ್ಣಗೌಡ ‘ಯಡಿಯೂರಪ್ಪ ಅವರು ಎಂಟು ಸಾವಿರ ರೈತರ ಜೊತೆಗೂಡಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ನಿರ್ಧಾರ ಕೈಗೊಂಡಿದ್ದರು. ಹೀಗಾಗಿ ಅದಕ್ಕೆ ಹೆದರಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದು ಯಡಿಯೂರಪ್ಪ ಹೋರಾಟಕ್ಕೆ ಸಿಕ್ಕ ಜಯ’ ಎಂದು ಹೇಳಿದರು.

ADVERTISEMENT

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್‌.ಆರ್‌.ಅರವಿಂದ್‌ ‘ಕೇವಲ ₹ 50,000 ಸಾಲ ಮನ್ನಾ ಮಾಡಿರುವುದು ಸರಿಯಲ್ಲ. ಕೇಂದ್ರ ಸರ್ಕಾರದ ಮೇಲೆ ಬೆಟ್ಟು ಮಾಡಿ ತೋರಿಸುವ ಕಾಂಗ್ರೆಸ್‌ ಸರ್ಕಾರ ಪಂಜಾಬ್‌, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ ಸರ್ಕಾರಗಳನ್ನು ನೋಡಿ ಕಲಿಯಬೇಕು’ ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಹನಿಯಂಬಾಡಿ ನಾಗರಾಜು ‘ಸರ್ಕಾರದ ನಿರ್ಧಾರದಿಂದ ರೈತರಿಗೆ ಸಲ್ವಮಟ್ಟಿಗೆ ಅನುಕೂಲವಾಗಿದೆ. ಆದರೆ ಸಣ್ಣ ಹಿಡುವಳಿದಾರರಿಗೆ ಇದರಿಂದ ಯಾವುದೇ ಅನುಕೂಲ ಆಗುವುದಿಲ್ಲ’ ಎಂದು ಹೇಳಿದರು.

ರೈತ ಸಂಘ(ಮೂಲ ಸಂಘಟನೆ) ತಾಲ್ಲೂಕು ಘಟಕದ ಅಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್‌ ‘ಸರ್ಕಾರ ರೈತರ ಕಣ್ಣೊರೆಸುವ ಕೆಲಸ ಮಾಡಿದೆ. ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ರೈತರ ಜೀವ ಉಳಿಸಬೇಕಾಗಿದ್ದ ಸರ್ಕಾರ ಕೇವಲ ಬಿಡಿಗಾಸು ಸಾಲ ಮನ್ನಾ ಮಾಡಿದೆ. ಇದರಿಂದ ರೈತರಿಗೆ ಉಪಯೋಗ ವಾಗುವುದಿಲ್ಲ’ ಎಂದು ಹೇಳಿದರು.

ರೈತ ಮುಖಂಡ ಸುಧೀರ್‌ಕುಮಾರ್‌ ‘ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಹೆಚ್ಚು ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದಾರೆ. ಆದರೆ ಸರ್ಕಾರ ಸಹಕಾರಿ ಬ್ಯಾಂಕ್‌ಗಳ ಸಾಲ ಮನ್ನ ಮಾಡಿದ್ದು ರೈತ ವಿರೋಧಿ ನೀತಿ ಅನುಸರಿಸಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.