ADVERTISEMENT

ಅಧ್ಯಯನಕ್ಕಾಗಿ ತಂತ್ರಜ್ಞರ ತಂಡ ವಿದೇಶಕ್ಕೆ

ಮೈಸೂರು ವಿಮಾನ ನಿಲ್ದಾಣ: ಅಂಡರ್‌ಪಾಸ್‌ ಮೂಲಕ ಹೆದ್ದಾರಿ; ರನ್‌ವೇ ವಿಸ್ತರಣೆಗೆ ಮತ್ತೆ ಜೀವ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2016, 8:20 IST
Last Updated 27 ಆಗಸ್ಟ್ 2016, 8:20 IST

ಮೈಸೂರು: ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಶಾಶ್ವತ ವಿಮಾನ ಸೇವೆ ಆರಂಭಿಸಲು ರನ್‌ವೇ ವಿಸ್ತರಿಸುವ ಯೋಜನೆ ಮತ್ತೆ ಜೀವ ಪಡೆದುಕೊಂಡಿದೆ.
ನಿಲ್ದಾಣದ ಮುಂದೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌–212) ಅಂಡರ್‌ಪಾಸ್‌ ಮೂಲ ಸಾಗವಂತೆ ನಿರ್ಮಿಸಿ ಮೇಲೆ ರನ್‌ವೇ ಅಭಿವೃದ್ಧಿ ಪಡಿಸುವ ಸಂಬಂಧ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಅಧ್ಯಯನಕ್ಕಾಗಿ ತಂತ್ರಜ್ಞರ ತಂಡವನ್ನು ವಿದೇಶಕ್ಕೆ ಕಳುಹಿಸಿದೆ.

ಸಿಂಗಪುರ, ಆಮಸ್ಟರ್‌ಡಮ್‌ ಹಾಗೂ ದಕ್ಷಿಣ ಅಮೆರಿಕದಲ್ಲಿ ಈ ವ್ಯವಸ್ಥೆ ಇದೆ. ‘ನಿಲ್ದಾಣದಲ್ಲಿ ಮೂಲಸೌಲಭ್ಯದ ಅಗತ್ಯ ತುಂಬಾ ಇದೆ. ಮೊದಲು ರನ್‌ವೇ ವಿಸ್ತರಿಸಬೇಕು. ಆದರೆ, ಇಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದು ಪ್ರಮುಖ ಅಡ್ಡಿಯಾಗಿ ಪರಿಣಮಿಸಿದೆ. ಹೆದ್ದಾರಿ ತೆರವು ಅಸಾಧ್ಯ. ಹೀಗಾಗಿ, ಅಂಡರ್‌ಪಾಸ್‌ ಕಟ್ಟಿ ಅದರ ಮೇಲೆ ರನ್‌ವೇ ನಿರ್ಮಿಸಬೇಕಿದೆ’ ಎಂದು ನಿಲ್ದಾಣದ ನಿರ್ದೇಶಕ ಮನೋಜ್‌ ಕುಮಾರ್‌ ಸಿಂಗ್‌ ತಿಳಿಸಿದರು.

ಹಿಂದೆಯೂ ಈ ಯೋಜನೆಗೆ ಒಲವು ತೋರಲಾಗಿತ್ತು. ಆದರೆ, ನಾನಾ ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಯೋಜನೆ ಜಾರಿ ಆದಲ್ಲಿ ದೇಶದಲ್ಲೇ ಈ ವ್ಯವಸ್ಥೆ ಹೊಂದಿರುವ ಮೊದಲ ವಿಮಾನ ನಿಲ್ದಾಣ ಇದಾಗಲಿದೆ ಎಂದು ಹೇಳಿದರು.

ಸದ್ಯ 1,744 ಮೀಟರ್‌ ಉದ್ದದ ರನ್‌ವೇ ಇದೆ. ಅದಿನ್ನೂ  800 ಮೀಟರ್‌ ವಿಸ್ತರಿಸುವ ಅಗತ್ಯವಿದೆ. ಆಗ ದೊಡ್ಡ ವಿಮಾನಗಳು ಬಂದಿಳಿಯಲು ಹಾಗೂ ನಿರ್ಗಮಿಸಲು ಸಹಾಯವಾಗಲಿದೆ.

‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಾದೇಶಿಕ ಸಂಪರ್ಕ ಯೋಜನೆಯಡಿ ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸಬೇಕು. ಇದರಿಂದ ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ವಿಮಾನಯಾನ ಸೇವೆ ಲಭ್ಯವಾಗುತ್ತದೆ. ವಿಮಾನಯಾನ ಸಂಸ್ಥೆಗಳು ಕೂಡ ಸೇವೆ ಒದಗಿಸಲು ಮುಂದಾಗುತ್ತವೆ’ ಎಂದು ವಿವರಿಸಿದರು.

ಇಂಧನ ವ್ಯವಸ್ಥೆ: ನಿಲ್ದಾಣದಲ್ಲಿ ವಿಮಾನ ಇಂಧನ ಸೌಲಭ್ಯ ಇಲ್ಲದಿರುವುದರಿಂದ ವಿಮಾನಯಾನ ಸಂಸ್ಥೆಗಳು ಇಲ್ಲಿ ಸೇವೆ ಕಲ್ಪಿಸಲು ಹಿಂದೇಟು ಹಾಕುತ್ತಿವೆ. ಈ ನಿಟ್ಟಿನಲ್ಲಿ ಇಂಧನ ಭರ್ತಿ ಸೇವೆ ಒದಗಿಸಬೇಕು. ವಿಮಾನಗಳಿಗೆ ರಾತ್ರಿ ವೇಳೆ ನಿಲ್ಲಲು ಅವಕಾಶ ಕಲ್ಪಿಸಬೇಕು ಹಾಗೂ ಇಂಧನ ತೆರಿಗೆ ಕಡಿಮೆ ಮಾಡಬೇಕು ಎಂದು ಉದ್ಯಮಗಳು, ಜಿಲ್ಲಾಡಳಿತವನ್ನು ಒತ್ತಾಯಿಸಿದವು.

ಅಲ್ಲದೆ, ನಿಲ್ದಾಣವನ್ನು ರಕ್ಷಣಾ ಪಡೆಯ ಉದ್ದೇಶಕ್ಕೆ ಬಳಕೆ ಮಾಡಲು ಹಾಗೂ ವಿವಿಧ ಸಂಸ್ಥೆಗಳ ವಿಮಾನಗಳನ್ನು ಇಲ್ಲಿ ನಿಲುಗಡೆ ಮಾಡುವ ಬಗ್ಗೆಯೂ ಸಲಹೆಗಳು ಬಂದವು.
‘ಬೆಂಗಳೂರು– ಮೈಸೂರು ಮಾರ್ಗದಲ್ಲಿ ನಿತ್ಯ 200ಕ್ಕೂ ಅಧಿಕ ಟ್ಯಾಕ್ಸಿಗಳು ಓಡಾಡುತ್ತವೆ. ಕನಿಷ್ಠವೆಂದರೆ 800 ಮಂದಿ ಕಾರುಗಳಲ್ಲಿ ಇರುತ್ತಾರೆ. ಇವರಲ್ಲಿ ನೂರು ಮಂದಿ ವಿಮಾನದಲ್ಲಿ ಓಡಾಡಿದರೂ ಲಾಭ ಬರುತ್ತದೆ’ ಎಂದೂ ಉದ್ಯಮಿಗಳು ಸಲಹೆ ನೀಡಿದರು.

‘ದಸರಾ ಸಮಯದಲ್ಲಿ ಮಾತ್ರವಲ್ಲ; ಶಾಶ್ವತವಾಗಿ ಇಲ್ಲಿಂದ ವಿಮಾನ ಕಾರ್ಯಾಚರಣೆಗೆ ಹಲವು ಮಾರ್ಗಗಳಿವೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರ ಜೊತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು’ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.

ವಿಮಾನ ನಿಲ್ದಾಣ ಸಲಹಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ, ಇನ್ಫೊಸಿಸ್‌ ಪ್ರಾದೇಶಿಕ ಮುಖ್ಯಸ್ಥ ಶಾಜಿ ಮ್ಯಾಥ್ಯೂಸ್‌, ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ, ಸೇಫ್‌ ವೀಲ್‌ನ ಪ್ರಶಾಂತ್‌, ಜಯಕುಮಾರ್‌ ಹಾಗೂ ಉದ್ಯಮಿಗಳು ಪಾಲ್ಗೊಂಡಿದ್ದರು.

ಸೇವೆಗೆ ಮುಂದಾದ ವಿಮಾನಯಾನ ಸಂಸ್ಥೆ: ಸಮರ್ಪಕ ಸೌಲಭ್ಯ ಒದಗಿಸಿದರೆ ಮೈಸೂರಿನಿಂದ ಬೆಂಗಳೂರಿಗೆ ವಿಮಾನಯಾನ ಸೇವೆ ಕಲ್ಪಿಸಲು ಕೆಲ ಸಂಸ್ಥೆಗಳು ಮುಂದೆ ಬಂದಿವೆ.

‘ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಲಘು ವಿಮಾನ ಸೇವೆ ಒದಗಿಸಲು ಸಿದ್ಧ.  ಆರರಿಂದ 12 ಸೀಟುಗಳ ವಿಮಾನಗಳು ಇವೆ. ಆದರೆ, ನಿರ್ಗಮನಕ್ಕೆ ನಿಗದಿತ ಸಮಯವೇನೂ ಇರುವುದಿಲ್ಲ’ ಎಂದು ಒರಿಯೆಂಟ್‌ ಸಂಸ್ಥೆಯ ಸುಖ್‌ಜಿಂದರ್‌ ಸಿಂಗ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.