ADVERTISEMENT

ಅರಮನೆಯಲ್ಲಿ ಸಿಂಹಾಸನ ಜೋಡಣೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 10:41 IST
Last Updated 26 ಸೆಪ್ಟೆಂಬರ್ 2016, 10:41 IST
ಅರಮನೆಯಲ್ಲಿ ಸಿಂಹಾಸನ ಜೋಡಣೆ
ಅರಮನೆಯಲ್ಲಿ ಸಿಂಹಾಸನ ಜೋಡಣೆ   

ಮೈಸೂರು: ನವರಾತ್ರಿ ಆಚರಣೆಗೆ ಪೂರ್ವಭಾವಿಯಾಗಿ ಖಾಸಗಿ ದರ್ಬಾರ್‌ಗೆ ಅರಮನೆಯಲ್ಲಿ ಭಾನುವಾರ ಸಿದ್ಧತೆಗಳು ಆರಂಭವಾದವು.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಎನಿಸಿರುವ ರತ್ನ ಖಚಿತ ಸಿಂಹಾಸನವನ್ನು ದರ್ಬಾರ್‌ ಸಭಾಂಗಣದಲ್ಲಿ ಬೆಳಿಗ್ಗೆ 8.20ರಿಂದ 9.40ರೊಳಗೆ ಸಲ್ಲುವ ತುಲಾ ಲಗ್ನದಲ್ಲಿ ಜೋಡಿಸಿ ಕನ್ನಡಿ ತೊಟ್ಟಿಯಲ್ಲಿ ಇಡಲಾಯಿತು.

ಈ ಬಾರಿ ಅರಮನೆ ಸಿಬ್ಬಂದಿಯೇ ಜೋಡಣಾ ಕಾರ್ಯ ನೆರವೇರಿಸಿದರು. ಇದಕ್ಕೆ ಎರಡು ಗಂಟೆ ಹಿಡಿಯಿತು. ಬಳಿಕ ಸಿಂಹಾಸನಕ್ಕೆ ಪ್ರೋಕ್ಷಣೆ ಮಾಡಲಾಯಿತು.
ಇದಕ್ಕೂ ಮೊದಲು ಬೆಳಿಗ್ಗೆ 6 ಗಂಟೆಗೆ ಅರಮನೆ ಆಸ್ಥಾನ ವಿದ್ವಾಂಸ ಧರ್ಮಾಧಿಕಾರಿ ಪ್ರೊ.ಜನಾರ್ದನ ಅಯ್ಯಂಗಾರ್‌ ಸಾರಥ್ಯದಲ್ಲಿ ಪೂಜಾ ಕೈಂಕರ್ಯಗಳು ಶುರುವಾದವು.

ಅವರಿಗೆ ಶ್ಯಾಮ ಜೋಯಿಸ್‌ ಹಾಗೂ ನರಸಿಂಹನ್‌ ನೆರವು ನೀಡಿದರು. ಮೊದಲು ಗಣಪತಿ ಪೂಜೆ ನೆರವೇರಿಸಲಾಯಿತು. ಪುಣ್ಯಾಹ, ನವಗ್ರಹ ಆವಾಹನೆ, ಕಳಸ ಪೂಜೆ, ಹೋಮ, ಅಷ್ಟದಿಕ್ಪಾಲಕರ ಹೋಮ ನಡೆಯಿತು. ಈ ಸಂದರ್ಭದಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್‌ ಇದ್ದರು.

ಸಿಂಹಾಸನ ಜೋಡಣೆ ಕಾರ್ಯ ಇದ್ದ ಕಾರಣ ಮಧ್ಯಾಹ್ನ 1.30ರವರೆಗೆ ಸಾರ್ವಜನಿಕರಿಗೆ ಅರಮನೆ ಪ್ರವೇಶ ನಿರ್ಬಂಧಿಸಲಾಗಿತ್ತು. ಅಕ್ಟೋಬರ್‌ 1 ರಂದು  ಬೆಳಿಗ್ಗೆ 11.45ರಿಂದ ಮಧ್ಯಾಹ್ನ 12.30ರ ಶುಭ ಲಗ್ನದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ಅಲ್ಲದೆ, ಸಂಪ್ರದಾಯದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ. ಈ ಬಾರಿ ಒಟ್ಟು 11 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.