ADVERTISEMENT

ಅರಮನೆ ದೇಗುಲಗಳ ಜೀರ್ಣೋದ್ಧಾರ

ಕೆ.ಓಂಕಾರ ಮೂರ್ತಿ
Published 19 ಜುಲೈ 2017, 10:04 IST
Last Updated 19 ಜುಲೈ 2017, 10:04 IST
ಶ್ವೇತವರಾಹಸ್ವಾಮಿ ದೇವಸ್ಥಾನ
ಶ್ವೇತವರಾಹಸ್ವಾಮಿ ದೇವಸ್ಥಾನ   

ಮೈಸೂರು: ವಿಶ್ವಪ್ರಸಿದ್ಧ ಅರಮನೆ ಯೊಳಗಿನ ಲಕ್ಷ್ಮಿರಮಣಸ್ವಾಮಿ ದೇಗುಲ ಸೇರಿದಂತೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನ ವ್ಯಾಪ್ತಿಯ ವಿವಿಧ ದೇಗುಲಗಳ ಜೀರ್ಣೋದ್ಧಾರ ಹಾಗೂ ರಾಜಗೋಪುರ ಸಂರಕ್ಷಣೆ ಕಾಮಗಾರಿಯನ್ನು ಪುರಾತತ್ವ  ಇಲಾಖೆ ಕೈಗೆತ್ತಿಕೊಂಡಿದೆ.

ಮುಜರಾಯಿ ಇಲಾಖೆ ವತಿಯಿಂದ 7 ದೇಗುಲಗಳ ಕಾಮಗಾರಿಗೆ ₹ 2.09 ಕೋಟಿ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ 4 ದೇಗುಲಗಳ ಕಾಮಗಾರಿಗೆ ₹ 1.8 ಕೋಟಿ ಅನುದಾನ ಲಭಿಸಿದೆ. ಕಾಮಗಾರಿ ಜವಾಬ್ದಾರಿಯನ್ನು ಪುರಾತತ್ವ ಇಲಾಖೆಗೆ ವಹಿಸಲಾಗಿದೆ. ಇದಕ್ಕೆ ಜಿಲ್ಲಾಡಳಿತ ಒಪ್ಪಿಗೆ ಲಭಿಸಿದ್ದು, ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ.

‘ಟೆಂಡರ್‌ ಅಂತಿಮಗೊಂಡಿದೆ. ದೇಗುಲಗಳ ಕಲಾಕರ್ಷಣೆಗೆಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇವೆ. ಪುರೋಹಿತರು, ಆಗಮಿಕರು ಶಾಸ್ತ್ರೋಕ್ತ ಕಲಾಕರ್ಷಣೆ ಮಾಡಿ ಮೂರ್ತಿಯನ್ನು ಸ್ಥಳಾಂತರಿಸಬೇಕಿದೆ. ಆ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ’ ಎಂದು ಪುರಾತತ್ವ ಇಲಾಖೆ ಉಪ ನಿರ್ದೇಶಕ ಗವಿಸಿದ್ದಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ಅರಮನೆ ಹಾಗೂ ಆವರಣ ವನ್ನು ಸುಂದರವಾಗಿಡಲಾಗಿದೆ. ಆದರೆ, ಸುತ್ತಲಿನ ದೇಗುಲಗಳನ್ನು ನಿರ್ಲಕ್ಷಿಸಿರುವ ಬಗ್ಗೆ ದೂರುಗಳಿವೆ. ಹಲವು ಶತ ಮಾನಗಳ ಹಿಂದೆ ನಿರ್ಮಾಣವಾಗಿರುವ ದೇವಸ್ಥಾನಗಳು ಇಲ್ಲಿವೆ.

ಅರಮನೆಯೊಳಗಿನ 7 ದೇಗುಲ ಗಳಲ್ಲದೆ ರಾಮಾನುಜ ರಸ್ತೆಯಲ್ಲಿರುವ ಕಾಮಕಾಮೇಶ್ವರಿ ದೇಗುಲ ಜೀರ್ಣೋದ್ಧಾರಕ್ಕೆಂದು ₹ 20 ಲಕ್ಷ ತೆಗೆದಿರಿಸ ಲಾಗಿದೆ. ಈ ದೇಗುಲ ಕೂಡ ಚಾಮುಂಡೇಶ್ವರಿ ದೇವಸ್ಥಾನದ ಸುಪರ್ದಿಗೆ ಬರುತ್ತದೆ.

‘ಬಹುತೇಕ ದೇಗುಲಗಳ ಗೋಪುರದ ವಿಗ್ರಹ, ಪ್ರಭಾವಳಿಗಳು ಕಿತ್ತು ಹೋಗಿವೆ. ದೇಗುಲದ ಒಳಗಿನ ಕಲ್ಲುಗಳಿಗೆ ಸುಣ್ಣ ಬಳಿಯಲಾಗಿದೆ. ಅದನ್ನು ತೆಗೆಯಲಾಗುವುದು. ಕಲ್ಲುಗಳಿಗೆ ಬಣ್ಣ ಬಳಿಯುವಂತಿಲ್ಲ. ಒಳಗಡೆ ಫ್ಲೋರಿಂಗ್‌ ಮಾಡಲಾಗುವುದು’ ಎಂದು ಪುರಾತತ್ವ ಇಲಾಖೆಯ ಎಂಜಿನಿಯರ್‌ ದೊರೆರಾಜ್‌ ಮಾಹಿತಿ ನೀಡಿದರು.

ಕಾಮಕಾಮೇಶ್ವರಿ ದೇಗುಲ ಹಾಗೂ ಅರಮನೆಯೊಳಗಿನ ಶ್ವೇತವರಾಹಸ್ವಾಮಿ ದೇಗುಲದ ಗರುಡಗಂಬಗಳು ಹಾಳಾಗಿವೆ. ಹೀಗಾಗಿ, ಹೊಸದಾಗಿ ಗರುಡಗಂಬ ನಿರ್ಮಿಸಲಾಗುತ್ತಿದೆ.

ಬೆಟ್ಟದ ನಂದಿ ವಿಗ್ರಹದ ಜೀರ್ಣೋದ್ಧಾರ
ಮೈಸೂರು:  ಚಾಮುಂಡಿ ಬೆಟ್ಟದಲ್ಲಿರುವ ನಂದಿ ವಿಗ್ರಹದ ಜೀರ್ಣೋದ್ಧಾರ ಕಾರ್ಯ ನಡೆಸಲು ಉದ್ದೇಶಿ ಸಲಾಗಿದೆ. ಅಲ್ಲದೆ, ಪಕ್ಕದ ಲ್ಲಿರುವ ಮಂಟಪದ ಪ್ಲಾಸ್ಟರಿಂಗ್ ಕಿತ್ತುಹೋಗಿದೆ. ಅದನ್ನು ಸರಿಪಡಿಸಲಾಗು ವುದು. ಸುಣ್ಣದ ಗಾರೆ ಮಾಡಿ, ಕಿತ್ತು ಹೋಗಿರುವ ಕಲ್ಲು ಜೋಡಿಸಲಾಗುವುದು ಎಂದು ಪುರಾತತ್ವ ಇಲಾಖೆ ಎಂಜಿನಿಯರ್‌ ದೊರೆರಾಜ್‌ ತಿಳಿಸಿದರು.

ಜೀರ್ಣೋದ್ಧಾರಗೊಳ್ಳುವ ದೇಗುಲಗಳು
* ಲಕ್ಷ್ಮಿರಮಣಸ್ವಾಮಿ ದೇಗುಲ
* ಪಾಂಡುರಂಗವಿಠಲ ದೇಗುಲ
* ಕೋಟೆ ಮಾರಮ್ಮ ದೇಗುಲ
* ಗಾಯತ್ರಿ ದೇವಿ ದೇಗುಲ
* ಶ್ವೇತವರಾಹಸ್ವಾಮಿ ದೇಗುಲ
* ಗಣಪತಿ, ಆಂಜನೇಯ ದೇಗುಲ
* ತ್ರಿನೇಶ್ವರ ದೇಗುಲ
* ಪ್ರಸನ್ನಕೃಷ್ಣಸ್ವಾಮಿ ದೇಗುಲ
* ಲಕ್ಷ್ಮಿನಾರಾಯಣಸ್ವಾಮಿ ದೇಗುಲ
* ಲಕ್ಷ್ಮಿವೆಂಕಟೇಶ್ವರಸ್ವಾಮಿ ದೇಗುಲ
* ಕಾಮಕಾಮೇಶ್ವರಿ ದೇಗುಲ

* * 

ಚಾಮುಂಡೇಶ್ವರಿ ದೇವಸ್ಥಾನದ ವ್ಯಾಪ್ತಿಯಲ್ಲಿ 24 ದೇಗುಲಗಳಿವೆ. ಕೆಲ ದೇಗುಲಗಳನ್ನು ಮುಜರಾಯಿ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಜೀರ್ಣೋದ್ಧಾರ ಮಾಡಲಾಗುವುದು
ಪ್ರಸಾದ್‌, ಸಿಇಒ, ಚಾಮುಂಡೇಶ್ವರಿ ದೇಗುಲ, ಚಾಮುಂಡಿಬೆಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.